– ಚಪ್ಪಲಿ ಹಾಕಿ ಭಾರತೀಯ ಸಂಸ್ಕೃತಿಗೆ ಅಪಮಾನ
ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಬರಬರುತ್ತಾ ಅನೈತಿಕ ತಾಣವಾಗುತ್ತಿದೆಯಾ ಎಂಬ ಅನುಮಾನಗಳು ಇದೀಗ ಮೂಡಿವೆ. ಯಾಕಂದ್ರೆ ಮಂಗಳವಾರ ಸಂಜೆ ವಿದೇಶಿ ಪ್ರವಾಸಿಗರು ವಿಶ್ವ ಪ್ರಸಿದ್ದಿ ವಿರೂಪಾಕ್ಷೇಶ್ವರ ದೇವಾಲಯದಲ್ಲೇ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡು ದೇವಸ್ಥಾನದ ಆವರಣದಲ್ಲೆಲ್ಲಾ ಮದ್ಯಸೇವನೆ ಮಾಡುತ್ತಾ ಓಡಾಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲದೇ ದೇವಸ್ಥಾನದ ಪ್ರಾಗಂಣದಲ್ಲಿ ಚಪ್ಪಲಿ ಧರಿಸಿಕೊಂಡು ನಡೆದಾಡಿದ್ದು ಸಹ ವಿದೇಶಿ ಪ್ರವಾಸಿಗರ ಸ್ವೇಚ್ಛಾಚಾರವನ್ನು ಎತ್ತಿತೋರಿಸುತ್ತಿತ್ತು. ದೇವಸ್ಥಾನದಲ್ಲಿ ಹತ್ತಾರು ಕಾವಲುಗಾರರು, ಹಾಗೂ ಧಾರ್ಮಿಕ ದತ್ತಿ ಇಲಾಖೆ ಕಚೇರಿಯಿದ್ದರೂ ಸಹ ಯಾರೊಬ್ಬರು ಸಹ ವಿದೇಶಿ ಪ್ರವಾಸಿಗರ ಈ ವರ್ತನೆಯನ್ನು ವಿರೋಧಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ದೇವಸ್ಥಾನದ ಆವರಣದಲ್ಲಿ ಮದ್ಯಪಾನ-ಚಪ್ಪಲಿಯನ್ನು ನಿಷೇಧಿಸಿದ್ರೂ ವಿದೇಶಿ ಪ್ರವಾಸಿಗರು ಕ್ಯಾರೆ ಎನ್ನದೇ ದುರ್ವವರ್ತನೆ ತೋರಿದ್ದಾರೆ. ವಿದೇಶಿ ಪ್ರವಾಸಿಗರು ಪ್ರವಾಸದ ನೆಪದಲ್ಲಿ ಹಂಪಿಯಲ್ಲಿ ಸ್ವೇಚ್ಛಾಚಾರದಿಂದ ವರ್ತನೆ ಮಾಡುತ್ತಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.