ಬೌಂಡರಿ ಚಚ್ಚಿ ಆರ್‌ಸಿಬಿ ಗೆಲುವು ಕಸಿದ 16ರ ಹುಡುಗಿ – ಯಾರು ಈ ಕಮಲಿನಿ? ಮುಂಬೈ 1.6 ಕೋಟಿ ನೀಡಿದ್ದು ಯಾಕೆ?

Public TV
3 Min Read
G Kamalini 1

ಬೆಂಗಳೂರು: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL) ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ (Mumbai Indians) 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಕೊನೆಯಲ್ಲಿ ಬೌಂಡರಿ ಹೊಡೆದ 16 ವರ್ಷದ ಆಲ್‌ರೌಂಡರ್‌ ಕಮಲಿನಿ (G Kamalini) ಈಗ ಎಲ್ಲರ ಕೇಂದ್ರಬಿಂದು ಆಗಿದ್ದಾರೆ.

17.3 ಓವರ್‌ನಲ್ಲಿ 144 ರನ್‌ಗಳಿಸಿದ್ದಾಗ ಸಂಜೀವನ್‌ ಸಂಜನಾ ಔಟಾದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕ್ರೀಸ್‌ಗೆ ಇಳಿದ ಕಮಲಿನಿ ಅಮನ್‌ಜೋತ್‌ ಕೌರ್‌ ಅವರಿಗೆ ಉತ್ತಮ ಸಾಥ್‌ ನೀಡಿದರು. ಮುರಿಯದ 8ನೇ ವಿಕೆಟಿಗೆ ಈ ಜೋಡಿ 14 ಎಸೆತಗಳಲ್ಲಿ 26 ರನ್‌ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿತು.

G Kamalini 3

ಕೊನೆಯ 6 ಎಸೆತಗಳಲ್ಲಿ 6 ರನ್‌ ಬೇಕಿತ್ತು ಮತ್ತು ಸ್ಟ್ರೈಕ್‌ನಲ್ಲಿ ಕಮಲಿನಿ ಇದ್ದರು. ಬಿಶ್ತ್‌ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್‌ ಬಂದಿರಲಿಲ್ಲ. ಎರಡನೇ ಎಸೆತದಲ್ಲಿ ಕಮಲಿನಿ ಎರಡು ರನ್‌ ಓಡಿದರು. ಮೂರು ಮತ್ತು ನಾಲ್ಕನೇ ಎಸೆತದಲ್ಲಿ 1 ರನ್‌ ಬಂದಿತ್ತು. ಕೊನೆಯ ಎರಡು ಎಸೆತದಲ್ಲಿ 2 ರನ್‌ ಬೇಕಿತ್ತು. ಈ ವೇಳೆ 5ನೇ ಎಸೆತವನ್ನು ಕಮಲಿನಿ ಬೌಂಡರಿಗೆ ಅಟ್ಟಿ ಮುಂಬೈ ತಂಡಕ್ಕೆ ಎರಡನೇ ಜಯವನ್ನು ತಂದುಕೊಟ್ಟರು. ಕಮಲಿನಿ ಔಟಾಗದೇ 11 ರನ್‌(8 ಎಸೆತ, 1 ಬೌಂಡರಿ), ಅಮನ್‌ಜೋತ್ ಕೌರ್ ಔಟಾಗದೇ 34 ರನ್‌(27 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆಯುವ ಮೂಲಕ ತವರಿನಲ್ಲೇ ಆರ್‌ಸಿಬಿಯನ್ನು ಮಣಿಸಿದರು.

ಬೌಂಡರಿ ಹೊಡೆಯುತ್ತಿದ್ದಂತೆ ಸ್ಟೇಡಿಂಯನಲ್ಲಿ ನಿಂತು ಪಂದ್ಯ ವೀಕ್ಷಿಸುತ್ತಿದ್ದ ಕಮಲಿನಿ ಕುಟುಂಬಸ್ಥರು ಕುಣಿದು ಕುಪ್ಪಳಿಸಿದರು. ಕುಟುಂಬದ ಸದಸ್ಯರು ಸಂತಸ ಪಡುತ್ತಿರುವ ದೃಶ್ಯವನ್ನು ಮುಂಬೈ ಇಂಡಿಯನ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಆರ್‌ಸಿಬಿ ಹ್ಯಾಟ್ರಿಕ್ ಕನಸು ಭಗ್ನ – ಮುಂಬೈಗೆ 4 ವಿಕೆಟ್‌ಗಳ ರೋಚಕ ಜಯ

G Kamalini 2

ಯಾರು ಕಮಲಿನಿ?
ತಮಿಳುನಾಡು ಮೂಲದ ಕಮಲಿನಿ ಡಬ್ಲ್ಯೂಪಿಎಲ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಫೆ.18 ರಂದು ವಡೋದರಾದ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕಾಗಿ ಮುಂಬೈ ಇಂಡಿಯನ್ಸ್‌ನ ಪ್ಲೇಯಿಂಗ್ 11 ರಲ್ಲಿ ಕಮಲಿನಿ ಸ್ಥಾನ ಪಡೆದಿದ್ದರು.

 

16 ವರ್ಷ 213 ದಿನಗಳಲ್ಲಿ ಪಾದಾರ್ಪಣೆ ಮಾಡಿದ ಕಮಲಿನಿ ಅವರು 16 ವರ್ಷ 263 ದಿನಗಳಲ್ಲಿ ಗುಜರಾತ್ ಜೈಂಟ್ಸ್ ಪರ ಆಡಿದ್ದ ಶಬ್ನಮ್ ಶಕಿಲ್ ಅವರ ಹಿಂದಿನ ಅತ್ಯಂತ ಕಿರಿಯ ಚೊಚ್ಚಲ ಆಟಗಾರ್ತಿಯ ದಾಖಲೆಯನ್ನು ಮುರಿದಿದ್ದಾರೆ.

2025 ರ ಅಂಡರ್ -19 ವಿಶ್ವಕಪ್ ವಿಜೇತ ಭಾರತೀಯ ತಂಡದ ಆಟಗಾರ್ತಿಯಾಗಿರುವ ಕಮಲಿನಿ ತಮಿಳುನಾಡಿನ ಮಧುರೈ ಮೂಲದವರು. WPL 2025ರ ಹರಾಜಿನಲ್ಲಿ ಮುಂಬೈ ತಂಡವು ಅವರನ್ನು 1.6 ಕೋಟಿ ರೂ. ನೀಡಿ ಖರೀದಿಸಿತ್ತು. ಇದನ್ನೂ ಓದಿ: ಡಿವೋರ್ಸ್‌ ಬಳಿಕ ಚಹಲ್‌ನಿಂದ 60 ಕೋಟಿ ಜೀವನಾಂಶ – ಧನಶ್ರೀ ಕುಟುಂಬ ಹೇಳಿದ್ದೇನು?

ಕಮಲಿನಿ ಅಂಡರ್-19 ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳಲ್ಲಿ ಒಟ್ಟು 311 ರನ್ ಗಳಿಸಿದ್ದರು. ಅಷ್ಟೇ ಅಲ್ಲದೇ ಎರಡು ಅರ್ಧಶತಕ ಸಹ ಸಿಡಿಸಿದ್ದರು. ಎಡಗೈ ಬ್ಯಾಟರ್‌ ಆಗಿರುವ ಕಮಲಿನಿ ಅಂಡರ್‌ 19 ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 29 ಎಸೆತಗಳಲ್ಲಿ 44 ರನ್‌ ಸಿಡಿಸಿದ್ದರು. ಪ್ರಸ್ತುತ ಕಮಲಿನಿ ಅವರು ಚೆನ್ನೈನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಅಕಾಡೆಮಿಯಲ್ಲಿ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದಾರೆ.

 

Share This Article