ಬ್ಯಾಟಿಂಗ್‌, ಬೌಲಿಂಗ್‌ ಪರಾಕ್ರಮ, ಆಂಗ್ಲ ಪಡೆ ತತ್ತರ – ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಸರಣಿ ಗೆದ್ದ ಭಾರತ

Public TV
3 Min Read
Team India 1

ಪುಣೆ: ಶಿವಂ ದುಬೆ, ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ ಪರಾಕ್ರಮ, ರವಿ ಬಿಷ್ಣೋಯಿ, ಹರ್ಷಿತ್‌ ರಾಣಾ ಉರಿ ಚೆಂಡಿನ ದಾಳಿ ನೆರವಿನಿಂದ ಭಾರತ 4ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 15 ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 3-1 ಮುನ್ನಡೆ ಕಾಯ್ದುಕೊಂಡಿದ್ದು, ಸರಣಿ ಕೈವಶ ಮಾಡಿಕೊಂಡಿತು.

19ನೇ ಓವರ್‌ ರೋಚಕ:
ಕೊನೇ 12 ಎಸೆತಗಳಲ್ಲಿ ಇಂಗ್ಲೆಂಡ್‌ ಗೆಲುವಿಗೆ 25 ರನ್‌ ಅಗತ್ಯವಿತ್ತು. ಹರ್ಷಿತ್‌ ರಾಣಾ ಬೌಲಿಂಗ್‌ನಲ್ಲಿದ್ದರೆ, ಕೊನೆಯ ಬ್ಯಾಟಿಂಗ್‌ ಭರವಸೆಯಾಗಿದ್ದ ಜೇಮೀ ಓವರ್ಟನ್ ಕ್ರೀಸ್‌ನಲ್ಲಿದ್ದರು. ಹರ್ಷಿತ್‌ ರಾಣಾ ಮೊದಲ ಎಸೆತವನ್ನೇ ಓವರ್ಟನ್‌ ಬೌಂಡರಿಗಟ್ಟಿದರು. ಬಳಿಕ 2ನೇ ಬಾಲ್‌ ಡಾಟ್‌ ಆಯಿತು. 3ನೇ ಎಸೆತದಲ್ಲಿ 2 ರನ್‌ ಕದ್ದಾಗ ಪಂದ್ಯ ಕೊಂಚವೇ ಇಂಗ್ಲೆಂಡ್‌ನತ್ತ ವಾಲುತ್ತಿತ್ತು. ಆದ್ರೆ 4, 5ನೇ ಎಸೆತದಲ್ಲಿ ಯಾವುದೇ ರನ್‌ ಬಿಟ್ಟುಕೊಡದ ರಾಣಾ 6ನೇ ಎಸೆತದಲ್ಲಿ ಓವರ್ಟನ್‌ ವಿಕೆಟ್‌ ಉಡೀಸ್‌ ಮಾಡಿದ್ರು. ಇದರೊಂದಿಗೆ ಇಂಗ್ಲೆಂಡ್‌ ತಂಡದ ಗೆಲುವೂ ಕಸಿಯಿತು.

Harshit Rana

ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿಂದು ನಡೆದ 4ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತ್ತು. 181 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 19.4 ಓವರ್‌ಗಳಲ್ಲಿ 166 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು

ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಇಂಗ್ಲೆಂಡ್‌ ಆರಂಭದಲ್ಲೇ ಅಬ್ಬರಿಸಲು ಶುರು ಮಾಡಿತು. ಆರಂಭಿಕರಾದ ಫಿಲ್‌ ಸಾಲ್ಟ್‌ ಹಾಗೂ ಬೆನ್‌ ಡಕೆಟ್‌ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಶುರು ಮಾಡಿದರು. ಪವರ್‌ ಪ್ಲೇ ಮುಗಿಯುವ ಹೊತ್ತಿಗೆ ಈ ಜೋಡಿ ಮೊದಲ ವಿಕೆಟ್‌ಗೆ 62 ರನ್‌ ಗಳಿಸಿತ್ತು. ಡಕೆಟ್‌ 19 ಎಸೆತಗಳಲ್ಲಿ 39 ರನ್‌ ಚಚ್ಚಿದ್ರೆ, ಸಾಲ್ಟ್‌ 21 ಎಸೆತಗಳಲ್ಲಿ ಕೇವಲ 23 ರನ್‌ ಸಿಡಿಸಿದ್ರು. ಆದ್ರೆ ಬೆಂಕಿ ಆಟವಾಡುತ್ತಿದ್ದ ಡಕೆಟ್‌ ವೇಗಕ್ಕೆ ರವಿ ಬಿಷ್ಣೋಯಿ ಬ್ರೇಕ್‌ ಹಾಕಿ ಪೆವಿಲಿಯನ್‌ಗೆ ದಾರಿ ತೋರಿದರು. ಆರಂಭಿಕ ಜೋಡಿ ಔಟಾಗುತ್ತಿದ್ದಂತೆ ಜೋಸ್‌ ಬಟ್ಲರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಾಕೋಬ್‌ ಬೇಥೆಲ್‌ ಹಾಗೂ ಆಲ್‌ರೌಂಡರ್‌ ಬ್ರೈಡನ್ ಕಾರ್ಸ್ ಅವರ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಕಳೆದುಕೊಂಡು ಇಂಗ್ಲೆಂಡ್‌ ಸಂಕಷ್ಟಕ್ಕೀಡಾಯಿತು.

Harry Brook

ಬ್ರೂಕ್‌ ಸ್ಫೋಟಕ ಬ್ಯಾಟಿಂಗ್‌:
ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಇಂಗ್ಲೆಂಡ್‌ ತಂಡಕ್ಕೆ ಹ್ಯಾರಿ ಬ್ರೂಕ್‌ ಅವರ ಅರ್ಧಶತಕ ಬಲ ತುಂಬಿತು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರೂಕ್‌ 26 ಎಸೆತಗಳಲ್ಲಿ ಸ್ಫೋಟಕ 51 ರನ್‌ (5 ಬೌಂಡರಿ, 2 ಸಿಕ್ಸರ್)‌ ಚಚ್ಚಿದರು. ಇದು ಇಂಗ್ಲೆಂಡ್‌ ತಂಡಕ್ಕೆ ಜೀವದಾನ ನೀಡಿತ್ತು. ಹ್ಯಾರಿ ಬ್ರೂಕ್‌ ವಿಕೆಟ್‌ ಬೀಳುತ್ತಿದ್ದಂತೆ ಮತ್ತೆ ಉಳಿದ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಿದರು. ಆದ್ರೆ ಕ್ರೀಸ್‌ನಲ್ಲಿದ್ದ ಆಲ್‌ರೌಂಡರ್‌ ಜೇಮೀ ಓವರ್ಟನ್ (19 ರನ್‌ ಗಳಿಸಿ) ಇಂಗ್ಲೆಂಡ್‌ ತಂಡಕ್ಕೆ ಗೆಲುವು ತಂದುಕೊಡುವ ನಿರೀಕ್ಷೆ ಹೆಚ್ಚಿಸಿದ್ದರು. ಈ ವೇಳೆ ಟೀಂ ಇಂಡಿಯಾ ವೇಗಿ ಹರ್ಷಿತ್‌ ರಾಣಾ 19ನೇ ಓವರ್‌ನ ಕೊನೇ ಎಸೆತದಲ್ಲಿ ಓವರ್ಟನ್‌ಗೆ ಪೆವಿಲಿಯನ್‌ ದಾರಿ ತೋರಿ ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾದರು.

England 1

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 181 ರನ್‌ ಗಳಿಸಿತ್ತು. ಮೊದಲ 12 ರನ್‌ಗಳಿಗೆ 3 ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಭಾರತ ತಂಡಕ್ಕೆ ಒಂದೆಡೆ ಅಭಿಷೇಕ್‌ ಶರ್ಮಾ, ರಿಂಕು ಸಿಂಗ್‌, ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು.

Hardik Pandya

ಪಾಂಡ್ಯ, ದುಬೆ ಅರ್ಧಶತಕಗಳ ಬ್ಯಾಟಿಂಗ್‌:
ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಪಾಂಡ್ಯ ಇಂಗ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದರು. 27 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ ಸ್ಫೋಟಕ ಅರ್ಧಶತಕ ಸಿಡಿಸಿದ್ರು. ಒಟ್ಟು 30 ಎಸೆತಗಳಲ್ಲಿ 53 ರನ್‌ ಸಿಡಿಸಿ ಔಟಾದರು. ಇದರೊಂದಿಗೆ ತಾಳ್ಮೆಯ ಬ್ಯಾಟಿಂಗ್‌ ಮಾಡಿದ ಶಿವಂ ದುಬೆ 34 ಎಸೆತಗಳಲ್ಲಿ 53 ರನ್‌ (7 ಬೌಂಡರಿ, 2 ಸಿಕ್ಸರ್)‌ ಚಚ್ಚಿದರು. ಇದರೊಂದಿಗೆ ಅಭಿಷೇಕ್‌ ಶರ್ಮಾ 29 ರನ್‌, ರಿಂಕು ಸಿಂಗ್‌ 30 ರನ್‌ಗಳ ಕೊಡುಗೆ ನೀಡಿದರು.

Share This Article