ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಿಸಿದ ಸಿಎಂ ಯೋಗಿ

Public TV
1 Min Read
Yogi Adityanath 1

– ನ್ಯಾಯಾಂಗ ತನಿಖೆಗೆ ಆದೇಶ

ಪ್ರಯಾಗ್‌ರಾಜ್‌: ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತದಲ್ಲಿ (Maha Kumbh Stampede) ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರವನ್ನು ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಘೋಷಿಸಿದ್ದಾರೆ.

ಕಾಲ್ತುಳಿತದಿಂದ ಸುಮಾರು 30 ಸಾವುಗಳು ಸಂಭವಿಸಿವೆ. ಈ ಘಟನೆಯಿಂದ ನನಗೆ ತುಂಬಾ ದುಃಖವಾಗಿದೆ. ಕಾಲ್ತುಳಿತ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಸಮಯದಲ್ಲಿ ಅವರು ತುಂಬಾ ಭಾವುಕರಾಗಿ ಕಾಣುತ್ತಿದ್ದರು.

maha kumbh stampede

ಘಟನೆಯ ನ್ಯಾಯಾಂಗ ತನಿಖೆಗಾಗಿ ನಾವು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ. ಇದರಲ್ಲಿ ನ್ಯಾಯಮೂರ್ತಿ ಹರ್ಷ ಕುಮಾರ್, ಮಾಜಿ ಡಿಜಿ ವಿಕೆ ಗುಪ್ತಾ ಮತ್ತು ನಿವೃತ್ತ ಐಎಎಸ್ ಡಿಕೆ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಲಾಗಿದೆ. ನ್ಯಾಯಾಂಗ ಆಯೋಗವು ಒಂದು ತಿಂಗಳೊಳಗೆ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಈ ನಿಟ್ಟಿನಲ್ಲಿ, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಸ್ವತಃ ಪ್ರಯಾಗ್‌ರಾಜ್‌ಗೆ ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಯಾಗ್‌ರಾಜ್‌ನ (Prayagraj) ಆಸ್ಪತ್ರೆಯಲ್ಲಿ 36 ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಖಾರ ರಸ್ತೆಯಲ್ಲಿ ಜನಸಮೂಹ ಬ್ಯಾರಿಕೇಡ್‌ಗಳನ್ನು ಮುರಿದ ಕಾರಣ ಕಾಲ್ತುಳಿತ ಸಂಭವಿಸಿದೆ. ಪೊಲೀಸರು, ಎನ್‌ಡಿಆರ್‌ಎಫ್ ಮತ್ತು ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು ಎಂದು ತಿಳಿಸಿದ್ದಾರೆ.

ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನ ಮಾಡಲು ಮಂಗಳವಾರ ಸಂಜೆ 7 ಗಂಟೆಯಿಂದಲೇ ಪ್ರಯಾಗ್‌ರಾಜ್‌ನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಭಕ್ತರ ಆಗಮನಕ್ಕಾಗಿ ನಾವು ಸಾಕಷ್ಟು ವ್ಯವಸ್ಥೆಗಳನ್ನು ಮಾಡಿದ್ದೆವು. ನಾವು ಅದನ್ನು ಪೊಲೀಸರ ಮೂಲಕ ಪ್ರತ್ಯೇಕವಾಗಿ ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇಂದು ಪ್ರಯಾಗ್‌ರಾಜ್‌ಗೆ 8 ಕೋಟಿ ಜನ ಬಂದಿದ್ದರು. ಹತ್ತಿರದ ಜಿಲ್ಲೆಗಳ ಜನರು ಇಲ್ಲಿಗೆ ಬರುವುದನ್ನು ಸಹ ತಡೆಯಲಾಯಿತು. ಇಷ್ಟೊಂದು ಭಾರೀ ಒತ್ತಡ ಇದೇ ಮೊದಲ ಬಾರಿಗೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.

Share This Article