ಕೊಪ್ಪಳ: ಆಂಜನೇಯನ ದರ್ಶನಕ್ಕಾಗಿ ಅಂಜನಾದ್ರಿ ಬೆಟ್ಟ (Anjanadri Hill) ಹತ್ತುವಾಗ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನಲ್ಲಿ ನಡೆದಿದೆ.
ಮೃತ ಯುವಕನನ್ನು ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ನಿವಾಸಿ ಜಯೇಶ ಯಾದವ್ (17) ಎಂದು ಗುರುತಿಸಲಾಗಿದ್ದು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಾಲಿಬಾಲ್ ತರಬೇತುದಾರ ಸುರೇಶ ಯಾದವ್ ಅವರ ಪುತ್ರ ಎಂದು ತಿಳಿಯಲಾಗಿದೆ.ಇದನ್ನೂ ಓದಿ:’ಬಿಗ್ ಬಾಸ್’ ಗೆಲ್ಲುತ್ತೇನೆ ಎಂದಿದ್ದ ಗೆದ್ದೇ ಬಿಟ್ಟ: ಹನುಮಂತನ ತಾಯಿ ಸಂತಸ
ಅಂಜನಾದ್ರಿ ಬೆಟ್ಟದ ಆಂಜನೇಯನ ದರ್ಶನ ಪಡೆಯಲು ಯುವಕನೊಬ್ಬ ಸ್ನೇಹಿತರೊಂದಿಗೆ ತೆರಳಿದ್ದ. ಇನ್ನೇನು ಬೆಟ್ಟ ಹತ್ತುವುದು ಮುಗಿದಿದೆ ಎಂದು ಬೆಟ್ಟದ ಅಂತ್ಯ ಭಾಗಕ್ಕೆ ಹೋಗಿದ್ದಾನೆ. ಈ ವೇಳೆ ಏಕಾಏಕಿ ಸುಸ್ತು ಕಾಣಿಸಿಕೊಂಡು, ಅಸ್ವಸ್ಥನಾಗಿದ್ದ. ಕೂಡಲೇ ಅಂಬುಲೆನ್ಸ್‌ಗೆ ಕರೆ ಮಾಡಿದ್ದು, ಗಂಗಾವತಿ ವಾಹನ ಸಿಬ್ಬಂದಿ ಅಂಬುಲೆನ್ಸ್ನಲ್ಲಿ ಆಕ್ಸಿಜನ್ ಕೊರತೆಯಿದೆ ಎಂದು ತಿಳಿಸಿದ್ದಾನೆ.
ನಂತರ ಅಂಜನಾದ್ರಿ ದೇವಸ್ಥಾನದ ಸಿಬ್ಬಂದಿ ಆನೆಗುಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಅಂಬುಲೆನ್ಸ್‌ಗೆ ಕರೆ ಮಾಡಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿನ ಸಿಬ್ಬಂದಿ ಯುವಕನನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದಾರೆ.
ಬಳಿಕ ಗಂಗಾವತಿ ವೈದ್ಯರು ಯುವಕನನ್ನು ಪರೀಕ್ಷೆಗೊಳಪಡಿಸಿದಾಗ, ಯುವಕ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ, ಮಾಹಿತಿ ಪಡೆದಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ 30 ಭಕ್ತರು ಸಾವು – 60ಕ್ಕೂ ಹೆಚ್ಚು ಜನರಿಗೆ ಗಾಯ