ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ‘ಗನ್ಸ್ ಅಂಡ್ ರೋಸಸ್’ ಚಿತ್ರ ಜನವರಿ 3ರಂದು ಅದ್ಧೂರಿಯಾಗಿ ತೆರೆಗಾಣುತ್ತಿದೆ. ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಗೊಳ್ಳಲಿದೆ.
ಅರ್ಜುನ್ ನಾಯಕ ನಟನಾಗಿ ಈ ಚಿತ್ರದಲ್ಲಿ ಭರ್ಜರಿಯಾಗಿಯೇ ಎಂಟ್ರಿ ಕೊಡಲಿದ್ದಾರೆ. ಗನ್ಸ್ ಅಂಡ್ ರೋಸಸ್ ಭೂಮಿಕೆಯಿಂದ ಒಂದಷ್ಟು ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಆಗಮಿಸಲಿದ್ದಾರೆ. ಸದರಿ ಸಿನಿಮಾದ ನಾನಾ ವಿಭಾಗಗಳಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆ ಬೆಳಕು ಕಾಣಲು ತಯಾರಾಗಿರುವ ನವ ಪ್ರತಿಭಾನ್ವಿತರ ಸಾಲಿನಲ್ಲಿ ಜಾಹ್ನವಿ ವಿಶ್ವನಾಥ್ ಕೂಡಾ ಸೇರಿಕೊಂಡಿದ್ದಾರೆ.
ಶಾಲಾ ಕಾಲೇಜು ದಿನಗಳಿಂದಲೇ ನಟಿಯಾಗುವ ಕನಸು ಹೊತ್ತು, ಅದರಲ್ಲಿ ಪಳಗಿಕೊಳ್ಳುವ ಸಲುವಾಗಿಯೇ ರಂಗಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದವರು ಜಾಹ್ನವಿ. ವರ್ಷಗಟ್ಟಲೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು ತಮ್ಮ ಕನಸಿನ ಕ್ಷೇತ್ರವಾದ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ತಯಾರಾಗಿದ್ದರು. ಒಂದೊಳ್ಳೆ ಅವಕಾಶಕ್ಕಾಗಿ ಅರಸುತ್ತಿದ್ದಾಗ ಅಚಾನಕ್ಕಾಗಿ ಗನ್ಸ್ ಅಂಡ್ ರೋಸಸ್ ಚಿತ್ರತಂಡದ ಸಂಪರ್ಕ ಸಿಕ್ಕಿತ್ತು. ಆ ಹೊತ್ತಿನಲ್ಲಿ ನಿರ್ದೇಶಕರು ತಾರಾಗಣದ ಆಯ್ಕೆಗಾಗಿ ಆಡಿಷನ್ ಕರೆದಿದ್ದರು. ಈ ವಿಚಾರ ತಿಳಿದ ಜಾಹ್ನವಿ ಅದರಲ್ಲಿ ಪಾಲ್ಗೊಂಡು, ಎಲ್ಲ ಪರೀಕ್ಷೆಗಳನ್ನು ದಾಟಿಕೊಂಡಿದ್ದರು. ಈ ಹಂತದಲ್ಲಿ ಜಾಹ್ನವಿಯ ನಟನೆಯ ಕಸುವು ಗಮನಿಸಿದ ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್, ಚಿತ್ರದುದ್ದಕ್ಕೂ ಚಲಿಸುವ ಚೆಂದದ ಪಾತ್ರವೊಂದರಲ್ಲಿ ನಟಿಸೋ ಅವಕಾಶ ಕೊಟ್ಟಿದ್ದರು. ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್ – ಜ.5 ರಿಂದ ಬಸ್ ಪ್ರಯಾಣ ದರ ಏರಿಕೆ
ಜಾಹ್ನವಿ ವಿಶ್ವನಾಥ್ ಈ ಚಿತ್ರದಲ್ಲಿ ನಾಯಕಿಯ ಗೆಳತಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಅದು ಹಾಗೆ ಬಂದು, ಹೀಗೆ ಹೋಗುವ ಪಾತ್ರವಲ್ಲ. ಕಥೆಯೊಂದಿಗೇ ಚಲಿಸುತ್ತಾ, ನಿರ್ಣಾಯಕ ಘಟ್ಟಗಳಲ್ಲಿ ನಾಯಕಿಗೆ ಗೈಡ್ ಮಾಡೋ ಗಟ್ಟಿ ಪಾತ್ರವದು. ಅತ್ಯಂತ ಪ್ರಬುದ್ಧ ಚಹರೆಯ ಆ ಪಾತ್ರ ಕ್ಲೈಮ್ಯಾಕ್ಸಿನಲ್ಲಿಯೂ ತಿರುವಿಗೆ ಕಾರಣವಾಗುತ್ತದೆಯಂತೆ. ವಿದ್ಯಾಭ್ಯಾಸ ಮುಗಿಸಿಕೊಂಡಾಕ್ಷಣವೇ ನಟಿಯಾಗಬೇಕೆಂಬ ನಿರ್ಧಾರ ತಳೆದಿದ್ದ, ಅದಕ್ಕಾಗಿ ವರ್ಷಗಟ್ಟಲೆ ತಯಾರಿ ನಡೆಸಿದ್ದ ಜಾಹ್ನವಿ ಪಾಲಿಗೆ ಗನ್ಸ್ ಅಂಡ್ ರೋಸಸ್ ಮೈಲಿಗಲ್ಲಿನಂಥಾ ಚಿತ್ರ. ಇದರ ಪಾತ್ರದ ಮೂಲಕವೇ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಇರಾದೆ ಜಾಹ್ನವಿಗಿದೆ.
ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ತೆರೆಗಾಣಲಿದೆ.