20 ದಿನದ ಮಗು ಕೊಲ್ಲುವುದಾಗಿ ಬೆದರಿಕೆ – ಪತ್ನಿಯ ಸಹೋದರರಿಂದಲೇ ಪತಿ ಹತ್ಯೆ

Public TV
1 Min Read
Bengaluru Murder 1

ಬೆಂಗಳೂರು: ಹೆಂಡತಿ ಮೇಲಿನ ಕೋಪಕ್ಕೆ 20 ದಿನದ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಪತಿಯನ್ನು ಪತ್ನಿಯ ಸಹೋದರರೇ ಹತ್ಯೆಗೈದಿರುವ ಘಟನೆ ಬೆಂಗಳೂರಿನ (Bengaluru) ಸಿದ್ದಾಪುರದಲ್ಲಿ (Siddapura) ನಡೆದಿದೆ.

ಮೃತನನ್ನು ಸಲ್ಮಾನ್ ಖಾನ್ (29) ಹಾಗೂ ಕೊಲೆ ಆರೋಪಿಗಳನ್ನು ಉಮರ್, ಶೊಯೇಬ್ ಹಾಗೂ ಅನ್ವರ್ ಎಂದು ಗುರುತಿಸಲಾಗಿದೆ.ಇದನ್ನೂ  ಓದಿ: ಆಕೆ ಮುಗ್ಧೆ, ತಪ್ಪು ಮಾಡಿಲ್ಲ: ಪವಿತ್ರಾಗೆ ಬೇಲ್ ಸಿಕ್ಕಿದ್ದಕ್ಕೆ ಮಾಜಿ ಪತಿ ಸಂತಸ

ಮೃತ ಸಲ್ಮಾನ್ ಖಾನ್ ಸಿದ್ದಾಪುರದಲ್ಲಿ ವಾಸವಾಗಿದ್ದ. ಬೀರು ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಗೃಹಿಣಿಯಾಗಿದ್ದು, ದಂಪತಿಗೆ 20 ದಿನದ ಮಗುವಿದೆ. ಕುಡಿತದ ಚಟದಿಂದಾಗಿ ಕೆಲವು ತಿಂಗಳಿಂದ ಸಲ್ಮಾನ್ ಖಾನ್ ಕೆಲಸಕ್ಕೆ ಹೋಗಿರಲಿಲ್ಲ. ಜೊತೆಗೆ ಕುಡಿದು ಬಂದು ಯಾವಾಗಲೂ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ.

ಹಲವು ಬಾರಿ ಬುದ್ಧಿ ಹೇಳಿದ್ದರೂ ಕೂಡ ಅದನ್ನೇ ಮುಂದುವರೆಸಿಕೊಂಡು ಬಂದಿದ್ದ. ಸೋಮವಾರ ರಾತ್ರಿ ಸಹ ಕುಡಿದ ನಶೆಯಲ್ಲಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿದ್ದ. ಈತನ ಕಾಟ ತಾಳಲಾರದೆ 112ಕ್ಕೆ ಕರೆ ಮಾಡಿ ಪೋಲೀಸರನ್ನ ಕರೆಯಿಸಿಕೊಳ್ಳುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದ.

ಇಂದು ಬೆಳಗಿನ ಜಾವ ಮನೆಗೆ ಬಂದು ಪೊಲೀಸರನ್ನ ಕರೆಯಿಸುತ್ತೀಯಾ ಎಂದು ಕ್ಯಾತೆ ತೆಗೆದು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ್ದ. ಇದರಿಂದ ಆತಂಕಗೊಂಡ ಪತ್ನಿ ತನ್ನ ಸಹೋದರರನ್ನ ಸ್ಥಳಕ್ಕೆ ಕರೆಯಿಸಿಕೊಂಡಿದ್ದಳು. ಈ ವೇಳೆ ತನ್ನ 20 ದಿನದ ಮಗುವಿಗೆ ಚಾಕು ತೋರಿಸಿ ಕೊಲ್ಲುವುದಾಗಿ ಬೆದರಿಸಿದ್ದ. ಈ ವೇಳೆ ಆರೋಪಿಗಳು ಮರದ ರಿಪೀಸ್‌ನಿಂದ ಹೊಡೆದು ಮಗುವನ್ನ ಕಸಿದುಕೊಂಡಿದ್ದರು. ಬಳಿಕ ಸಲ್ಮಾನ್ ಕೈಯಲ್ಲಿದ್ದ ಚಾಕು ಕಿತ್ತುಕೊಂಡು ಆತನಿಗೆ ತಿವಿದಿದ್ದಾರೆ. ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮೃತನ ವಿರುದ್ಧ ಇದುವರೆಗೂ ಆರು ಪ್ರಕರಣ ದಾಖಲಾಗಿದ್ದವು. ಈ ಘಟನೆ ಸಂಬಂಧ ಕೊಲೆ ಆರೋಪದಡಿ ಸಲ್ಮಾನ್ ಹೆಂಡತಿಯ ಮೂವರು ಸಹೋದರರನ್ನ ಬಂಧಿಸಿ, ಜೈಲಿಗಟ್ಟಲಾಗಿದೆ. ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ  ಓದಿ: ಹೊಸ ವರ್ಷಕ್ಕೆ ಸ್ಟೋರ್ ಮಾಡಲಾಗಿದ್ದ 24 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

Share This Article