Cosmic Conversations: ವಿದ್ಯಾರ್ಥಿಗಳಿಗೆ ನಾಸಾ ಆಶೋತ್ತರಗಳ ಪರಿಚಯ

Public TV
2 Min Read
cosmic conversations introducing nasas aspirations to bengaluru students

ಬೆಂಗಳೂರು: ಅಮೆರಿಕದ ʻನಾಸಾʼ (NASA) ಸಂಸ್ಥೆಯ ವೈಮಾನಿಕ ಕಾರ್ಯಾಚರಣೆಗಳ ನಿರ್ದೇಶನಾಲಯದ ನಿರ್ದೇಶಕ ನಾರ್ಮನ್‌ ನೈಟ್‌ ಹಾಗೂ ಮುಖ್ಯ ವೈಮಾನಿಕ ನಿರ್ದೇಶಕಿ ಎಮಿಲಿ ನೆಲ್ಸನ್‌ ಇತ್ತೀಚೆಗೆ ಬೆಂಗಳೂರಿಗೆ (Bengaluru) ಭೇಟಿ ನೀಡಿ ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಜೊತೆಗಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚಿಸಿದರು. ಅಲ್ಲದೇ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ (Students) ಸಂವಾದ ನಡೆಸಿದರು. ಬಾಹ್ಯಾಕಾಶ ಅನ್ವೇಷಣೆ ಹಾಗೂ ವೈಜ್ಞಾನಿಕ ಸಂಶೋಧನೆಗಳ ಕುರಿತು ಮುಂದಿನ ಪೀಳಿಗೆಯ ವಿಜ್ಞಾನಿಗಳು ಮತ್ತು ತಂತ್ರಜ್ಞರಲ್ಲಿ (ಎಂಜನಿಯರ್‌) ಸ್ಫೂರ್ತಿ ತುಂಬುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿತ್ತು.

ಈ ಕಾರ್ಯಕ್ರಮದಲ್ಲಿ ನಾಸಾದ ವಿಶೇಷ ತಜ್ಞರು ಮಾನವ ಅಂತರಿಕ್ಷ ನೌಕೆ (ಮಾನವನನ್ನು ಹೊತ್ತ ಅಂತರಿಕ್ಷ ನೌಕೆ) ಮತ್ತು ಬಾಹ್ಯಾಕಾಶದ ಅನ್ವೇಷಣೆಯಲ್ಲಿ ಅಂತಾರಾಷ್ಟ್ರೀಯ ಸಹಕಾರ ಎಷ್ಟು ಮಹತ್ವದ್ದಾಗಿದೆ ಎಂಬುದರ ಕುರಿತು ಮಾಹಿತಿ ನೀಡಿದರು. ಬೆಂಗಳೂರಿನ ಶಾಲಾ, ಕಾಲೇಜುಗಳ ಆಯ್ದ ವಿದ್ಯಾರ್ಥಿಗಳು ʻನಾಸಾʼ ಅಧಿಕಾರಿಗಳ ಜೊತೆ ಸಂವಹನ ನಡೆಸಿದರು. ಅಲ್ಲದೇ ʻಸ್ಟೆಮ್‌ʼ(ವಿಜ್ಞಾನ, ತಂತ್ರಜ್ಞಾನ, ಎಂಜನೀಯರಿಂಗ್‌ ಮತ್ತು ಗಣಿತ) ಕ್ಷೇತ್ರಗಳ ಬಗ್ಗೆ ತಮಗಿರುವ ಆಸಕ್ತಿಯನ್ನು ಹಂಚಿಕೊಂಡರು.

ʻನಾಸಾʼ ಪ್ರತಿನಿಧಿಗಳು ಇಸ್ರೋ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿ, ಗಗನಯಾತ್ರಿಗಳ ತರಬೇತಿ ಮತ್ತು ಮಾನವಸಹಿತ ಅಂತರಿಕ್ಷ ಯಾನದ ವಿಚಾರದಲ್ಲಿ ಪರಸ್ಪರ ಸಹಕಾರಕ್ಕೆ ಇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸಿದರು. ನಾಸಾ ಮತ್ತು ಇಸ್ರೋ ಈ ಎರಡೂ ಸಂಸ್ಥೆಗಳು, ಶೀಘ್ರದಲ್ಲೇ ಉಡಾವಣೆಗೊಳ್ಳಲಿರುವ ನಾಸಾ- ಇಸ್ರೋ ಸಿಂಥೆಟಿಕ್‌ ಅಪರ್ಚರ್‌ ರೇಡಾರ್‌ (NISAR – ನೈಸಾರ್‌) ಯೋಜನೆಯನ್ನು ಎದುರು ನೋಡುತ್ತಿವೆ. ಹಾಗೆಯೇ ಇದೇ ಮೊದಲ ಬಾರಿ 2025ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತೀಯ ಅಂತರಿಕ್ಷ ಯಾತ್ರಿಯೊಬ್ಬರು ಕಾರ್ಯನಿರ್ವಹಿಸಲಿರುವ ವಿದ್ಯಮಾನವನ್ನು ಕಾತುರದಿಂದ ಎದುರುನೋಡುತ್ತಿವೆ.

ಚೆನ್ನೈನ ಯುಎಸ್‌ ಕಾನ್ಸಲೇಟ್‌ ಜನರಲ್‌ನ ವಕ್ತಾರರು, ರಾಜತಾಂತ್ರಿಕ ಅಧಿಕಾರಿ (ಡಿಪ್ಲೋಮ್ಯಾಟ್‌), ಸಮಂತಾ ಜಾಕ್ಸನ್‌, ಮುಂದಿನ ಪೀಳಿಗೆಯ ವಿಜ್ಞಾನಿಗಳು ಹಾಗೂ ಎಂಜನಿಯರ್‌ಗಳಲ್ಲಿ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ, ನಾಸಾದ ತಜ್ಞರು ಹಾಗೂ ತಜ್ಞತೆಯನ್ನು ಬೆಂಗಳೂರಿನ ವಿದ್ಯಾರ್ಥಿಗಳಿಗೆ ಪರಿಚಯಿಸುವಲ್ಲಿ ನಾವು ಉತ್ಸುಕರಾಗಿದ್ದೇವೆ. ʻಸ್ಟೆಮ್‌ʼ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಮುಂದೆ ತರುವ ನಿಟ್ಟಿನಲ್ಲಿ ಹಾಗೂ ಯುವ ಮನಸ್ಸುಗಳಿಗೆ ಆಯಾ ಕ್ಷೇತ್ರದ ಮುಂಚೂಣಿ ತಜ್ಞರನ್ನು ಭೇಟಿ ಮಾಡುವ ಮತ್ತು ಬಾಹ್ಯಾಕಾಶ ಅನ್ವೇಷಣೆಯ ವಿಸ್ಮಯಗಳಿಗೆ ತೆರೆದುಕೊಳ್ಳುವ ಅವಕಾಶ ಸೃಷ್ಟಿಸುವಲ್ಲಿ ನಮಗಿರುವ ಬದ್ಧತೆಯನ್ನು ಈ ಕಾರ್ಯಕ್ರಮ ಒತ್ತಿಹೇಳುತ್ತಿದೆ ಎಂದರು.

ʻಬಿಯಾಂಡ್‌ ದ ಸ್ಟಾರ್ಸ್‌: ಸ್ಟುಡೆಂಟ್‌ ಡೈಲಾಗ್‌ ವಿಥ್‌ ನಾಸಾʼ( ನಕ್ಷತ್ರಗಳ ಆಚೆ: ನಾಸಾ ಜೊತೆ ವಿದ್ಯಾರ್ಥಿಗಳ ಮಾತುಕತೆ) ಎಂಬ ಈ ಸಂವಾದ ಕಾರ್ಯಕ್ರಮವನ್ನು ಯುಎಸ್‌ ಕಾನ್ಸಲೇಟ್‌ ಚೆನ್ನೈ, ನಾಸಾ, ಬಸವನಗುಡಿ ನ್ಯಾಷನಲ್‌ ಕಾಲೇಜ್‌ ಹಾಗೂ ಪರಿಕ್ರಮ ಹ್ಯುಮಾನಿಟಿ ಫೌಂಡೇಷನ್‌ ಜಂಟಿಯಾಗಿ ಆಯೋಜಿಸಿದ್ದವು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ನಡೆಯಲಿರುವ ಅನ್ವೇಷಣೆ ಮತ್ತು ಆವಿಷ್ಕಾರಗಳ ಕುರಿತು ಅಮೆರಿಕ ಮತ್ತು ಭಾರತಗಳ ನಡುವೆ ಹೆಚ್ಚುತ್ತಿರುವ ವೈಜ್ಞಾನಿಕ ಮಾಹಿತಿಗಳ ವಿನಿಮಯ ಮತ್ತು ಸಹಕಾರದವನ್ನು ಈ ಕಾರ್ಯಕ್ರಮ ಎತ್ತಿತೋರಿಸುತ್ತಿದೆ.

Share This Article