ಮಂಡ್ಯ: ಮಾಜಿ ಸಿಎಂ ಎಸ್‍ಎಂ ಕಷ್ಣ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮೊದಲ ಬಾರಿಗೆ ತವರೂರು ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಗೆ ಭೇಟಿ ನೀಡಿದ್ದರು. ಈ ವೇಳೆ ನಿಮ್ಮ ಬೆಂಬಲಿಗರು ಇನ್ನೂ ಬಿಜೆಪಿ ಸೇರಿಲ್ಲವಲ್ಲ ಎಂದು ಕೇಳಿದ್ದಕ್ಕೆ, ಎಲ್ಲಾ ಸೇರ್ತಾರೆ ಅಂದ್ರು.
ಇದೇ ವೇಳೆ ಮಾಜಿ ಸಂಸದೆ ರಮ್ಯಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್‍ಎಂಕೆ, ಅವರ ವಿಚಾರ ನನಗೆ ಗೊತ್ತಿಲ್ಲ. ನಾನು ರಮ್ಯಾ ಅವರನ್ನು ಭೇಟೆಯಾಗಿ ಬಹಳ ವರ್ಷಗಳಾಗಿವೆ. ಸುಮಾರು ಎರಡು ವರ್ಷವಾಗಿದೆ ಅಂದ್ರು.
ನನ್ನಲ್ಲಿ ಯಾರು ವಿಶ್ವಾಸ ಇಟ್ಟುಕೊಂಡಿದ್ದಾರೋ ಅವರೆಲ್ಲರೂ ನನ್ನ ಜೊತೆ ಬರ್ತಾರೆ ಅಂತ ಎಸ್‍ಎಂಕೆ ಹೇಳಿದ್ರು. ನಾಳೆಯಿಂದ ಉಪ ಚುನಾವಣೆ ಪ್ರಚಾರದಲ್ಲಿ ನಾನು ಪಾಲ್ಗೊಳ್ತೀನಿ. ಬಿಜೆಪಿ ಸಾಧನೆ ಜೊತೆ ಕಾಂಗ್ರೆಸ್ ವೈಫಲ್ಯದ ಬಗ್ಗೆ ಹೇಳ್ತೀನಿ. ದೇಶದಲ್ಲಿ ಮೋದಿ ಮತ್ತು ಅಮಿತ್ ಷಾ ನೇತೃತ್ವದಲ್ಲಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡ್ತೀವಿ ಅಂದ್ರು.
ಮಂಡ್ಯ ಜನರು ನನ್ನನ್ನು ಉತ್ಸಾಹದಿಂದ ಸ್ವಾಗತಿಸಿಕೊಂಡಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ ಅನ್ನೋದನ್ನ ಒಪ್ಪೋದಿಲ್ಲ, ಪಕ್ಷ ತನ್ನದೇ ಆದ ಅಸ್ತಿತ್ವವನ್ನು ಹೊಂದಿದೆ. ಬಿಜೆಪಿಯನ್ನ ಅಧಿಕಾರಕ್ಕೆ ತರಬೇಕು ಅನ್ನೋದು ನಮ್ಮೆಲ್ಲರ ಅಭಿಲಾಷೆಯಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡ್ತೇವೆ ಅಂತಾ ಹೇಳಿದ್ರು.
ಚುನಾವಣೆಗೆ ಸ್ಪರ್ಧಿಸಲ್ಲ: ನಾನು ಇನ್ಮುಂದೆ ಯಾವ ಚುನಾವಣೆಯಲ್ಲೂ ಸ್ಪರ್ಧೆ ಮಾಡುವುದಿಲ್ಲ ಅಂತ ಎಸ್‍ಎಂ ಕೃಷ್ಣ ಹೇಳಿದ್ರು. ನಾನು ಯಾವ ಆಸೆ, ಆಕಾಂಕ್ಷೆ, ನಿರೀಕ್ಷೆ ಮತ್ತು ಭರವಸೆಗಳನ್ನು ಇಟ್ಟುಕೊಂಡು ಬಿಜೆಪಿ ಪಕ್ಷವನ್ನು ಸೇರಿಲ್ಲ. ನರೇಂದ್ರ ಮೋದಿಯವರು ದೇಶಕ್ಕೆ ಒಳ್ಳೆಯ ಆಡಳಿತವನ್ನು ನೀಡುತ್ತಿದ್ದಾರೆ. ಮುಂದೆಯೋ ಒಳ್ಳೆಯ ಆಡಳಿತ ಕೊಡ್ತಾರೆ ಅನ್ನೋ ನಂಬಿಕೆಯಿದೆ. ಮೋದಿಯವರ ನಾಯಕತ್ವದಿಂದ ನಾನು ಪ್ರಭಾವಗೊಂಡು ಬಿಜೆಪಿಯನ್ನು ಸೇರಿದ್ದೇನೆ ಎಂದು ಹೇಳಿದರು.