ಬೆಳಗಾವಿ: ಗೂಗಲ್ ಮ್ಯಾಪ್ (Google Map) ನಂಬಿ ಗೋವಾ ಪ್ರವಾಸಕ್ಕೆ (Goa) ತೆರಳುತ್ತಿದ್ದ ಕುಟುಂಬ ರಾತ್ರಿಯಿಡಿ ಕಾಡಿನಲ್ಲಿಯೇ ಕಳೆದ ಘಟನೆ ಜಿಲ್ಲೆಯ ಖಾನಾಪುರ (Khanapur) ಭೀಮಗಢ ಅರಣ್ಯ ಪ್ರದೇಶಲ್ಲಿ ನಡೆದಿದೆ.
ಬಿಹಾರ ಮೂಲದ ಕುಟುಂಬ ಗೋವಾಕ್ಕೆ ಪ್ರವಾಸಕ್ಕೆಂದು ತೆರಳುತ್ತಿತ್ತು. ನಾಲ್ಕು ಮಹಿಳೆಯರು ಹಾಗೂ ಓರ್ವ ಚಾಲಕನಿಂದ ಕಾರಿಗೆ ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗ ಮಧ್ಯೆ ಸಮೀಪ ಗೂಗಲ್ ಮ್ಯಾಪ್ ದಾರಿ ತೋರಿಸಿದೆ. ಮ್ಯಾಪ್ ನಂಬಿ ಭೀಮಗಢ ಅರಣ್ಯದೊಳಗೆ 7-8 ಕಿ.ಮೀ ಬಂದಿದ್ದಾರೆ.
ಕಾಡಿನಲ್ಲಿ ರಾತ್ರಿ ಸಮಯ ಹಾಗೂ ನೆಟ್‌ವರ್ಕ್ ಸಿಗದ ಕಾರಣ ಬೆಳಗಿನವರೆಗೂ ಅಲ್ಲೇ ಇದ್ದ ಕುಟುಂಬ ಬೆಳಗಾಗುತ್ತಿದ್ದಂತೆ ನೆಟ್‌ವರ್ಕ್ ಹುಡುಕಿ ಖಾನಾಪುರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿತು. ತಕ್ಷಣ ಕಾರ್ಯ ಪ್ರವೃತ್ತರಾದ ಖಾನಾಪುರ ಪೊಲೀಸರು (Khanapur Police) ಕುಟುಂಬವನ್ನು ಮೊಬೈಲ್ ನೆಟ್‌ವರ್ಕ್ ಜಾಗ ಪತ್ತೆ ಹಚ್ಚಿ ರಕ್ಷಿಸಿದ್ದಾರೆ.
ಈ ತುರ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರ ಹಾಗೂ ಸಿಬ್ಬಂದಿ ವರ್ಗದವರಿಗೆ ಬೆಳಗಾವಿ ಎಸ್‌ಪಿ ಅಭಿನಂದನೆ ಸಲ್ಲಿಸಿದ್ದಾರೆ. ಗೂಗಲ್ ಮ್ಯಾಪ್‌ನಲ್ಲಿ ʼಶಾರ್ಟ್‌ಕಟ್ ಗೋವಾ ರೂಟ್ʼ ಎಂದು ಸರ್ಚ್ ಮಾಡಿದಗ ತೋರಿಸಿದ ದಾರಿ ನೋಡಿದ್ದರಿಂದ ಈ ಎಡವಟ್ಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.