– ಇದು ಹೊಸ ಹಿಂದೂಸ್ತಾನ ಎಂದ ರಾಹುಲ್ ಗಾಂಧಿ
ನವದೆಹಲಿ: ಶಾಹಿ ಜಾಮಾ ಮಸೀದಿ ಸಮೀಕ್ಷೆ ವಿಚಾರವಾಗಿ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಉತ್ತರ ಪ್ರದೇಶದ ಸಂಭಾಲ್‌ಗೆ ಭೇಟಿ ನೀಡಲು ತೆರಳುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), ನೂತನ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಅವರನ್ನ ಮಾರ್ಗಮಧ್ಯೆಯೇ ಪೊಲೀಸರು ತಡೆದಿದ್ದಾರೆ.
ಸ್ಥಳೀಯರಲ್ಲದವರು ಸಂಭಾಲ್‌ಗೆ ಭೇಟಿ ನೀಡುವಂತಿಲ್ಲ ಎಂಬ ನಿರ್ಬಂಧದ ಹಿನ್ನೆಲೆಯಲ್ಲಿ ರಾಹುಲ್, ಪ್ರಿಯಾಂಕಾರನ್ನು ಘಾಜಿಪುರ ಗಡಿಯಲ್ಲೇ ಉತ್ತರ ಪ್ರದೇಶ ಪೊಲೀಸರು ತಡೆಹಿಡಿದಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ರು. ಲೋಕಸಭೆ ವಿಪಕ್ಷ ನಾಯಕನಾಗಿ ಸಂಭಾಲ್‌ಗೆ ಭೇಟಿ ನೀಡೋದು ನನ್ನ ಹಕ್ಕು, ಪೊಲೀಸರ ಜೊತೆ ನಾನೊಬ್ಬನೇ ತೆರಳಲು ಸಿದ್ಧ ಇದ್ದೇನೆ. ಆದ್ರೂ, ನನಗೆ ಅವಕಾಶ ನಿರಾಕರಿಸಲಾಗ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದು ವಿಪಕ್ಷ ನಾಯಕನ ಸಂವಿಧಾನಿಕ ಹಕ್ಕುಗಳಿಗೆ ವಿರುದ್ಧವಾಗಿದೆ. ಬಿಜೆಪಿ (BJP) ಸತ್ಯ ಮತ್ತು ಸೋದರತ್ವವನ್ನು ಹತ್ತಿಕ್ಕಲು ಪೊಲೀಸರನ್ನು ಬಳಸುತ್ತಿದೆ. ಇದು ಹೊಸ ಹಿಂದೂಸ್ತಾನ, ಅಂಬೇಡ್ಕರರ ಸಂವಿಧಾನ ಮುಗಿಸುವ ಪ್ರಯತ್ನ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ರು. ಮುಂಜಾಗ್ರತಾ ಕ್ರಮವಾಗಿ ಘಾಜೀಪುರ ಗಡಿಯಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು.
ಟ್ರಾಫಿಕ್ ಜಾಮ್:
ಇನ್ನೂ ಡಿಸೆಂಬರ್ 10ರ ವರೆಗೆ ಸಂಭಾಲ್‌ಗೆ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. ಹೀಗಾಗಿ ದೆಹಲಿ-ಸಂಭಾಲ್ ಮಾರ್ಗದ ಹಲವು ಸ್ಥಳಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಬ್ಯಾರಿಕೆಡ್‌ಗಳನ್ನು ಅಳವಡಿಸಿ, ವಾಹನ ತಪಾಸಣೆ ನಡೆಸಲಾಗುತ್ತಿತ್ತು, ಇದರಿಂದ ಹಲವು ಸ್ಥಳಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.