ಬಾಗಲಕೋಟೆ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದಲ್ಲಿ (Panchamasali Lingayats’ Quota Demand) ಈಗ ಬಿರುಕು ಮೂಡಿದೆ. ಪಂಚಮಸಾಲಿ ಪೀಠದ ಶ್ರೀ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಕಿಡಿಕಾರಿದ್ದಲ್ಲದೇ ಪ್ರತ್ಯೇಕ ಹೋರಾಟಕ್ಕೆ ತಯಾರಿ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಶ್ರೀ ಪಂಚಮಸಾಲಿ ಜಗದ್ಗುರು ಮಹಾಪೀಠದ ಸಭಾಭವನದಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ಅವರು, ಇಲ್ಲಿಯವರೆಗೆ ಹಿಂದುಳಿದ ಆಯೋಗದ ಸಂಪೂರ್ಣ ವರದಿ ಬಂದಿಲ್ಲ. ಸಂಪೂರ್ಣ ವರದಿ ಬಂದ ಬಳಿಕ 2ಎ ಮೀಸಲಾತಿ ಕುರಿತು ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddarmaiah) ನೀಡಿದರೂ ಕೂಡ ಸ್ವಾಮೀಜಿ ಬಿಜೆಪಿ ಪಕ್ಷದ ಬ್ಯಾನರ್ ಅಡಿಯಲ್ಲಿ ಹೋರಾಟ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಸಿಸೇರಿಯನ್ ದುರಂತ: ಮೃತ ಮಹಿಳೆಯರ ಸಂಖ್ಯೆ ನಾಲ್ಕಕ್ಕೆ ಏರಿಕೆ
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನದ ವೇಳೆ ಡಿ.10 ರಂದು ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲು ಸ್ವಾಮೀಜಿ ಹಾಗೂ ಯತ್ನಾಳ್ ಅವರು ತಯಾರಿ ನಡೆಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷನಾದ ನನ್ನ ಹಾಗೂ ಸಮಾಜದ ಹಿರಿಯರ ಗಮನಕ್ಕೆ ತಂದಿಲ್ಲ. ತಾವೇ ಬಿಜೆಪಿ ಪಕ್ಷದ ಬ್ಯಾನರ್ ಅಡಿಯಲ್ಲಿ ಸಭೆ ಮಾಡುತ್ತಿದ್ದಾರೆ. ಹೀಗಾಗಿ ಸ್ವಾಮೀಜಿಯವರ ನಡೆಯನ್ನು ಖಂಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಹೋರಾಟ ವಕ್ಫ್ ವಿರುದ್ಧ, ಯಾವುದೇ ಕುಟುಂಬದ ವಿರುದ್ಧವಲ್ಲ: ಯತ್ನಾಳ್
2ಎ ಮೀಸಲಾತಿ ಹೋರಾಟ ಪಕ್ಷಾತೀತವಾಗಿ ಇರಬೇಕು. ಆದರೆ ಇವರ ಹೋರಾಟ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ರಾಜ್ಯದ ಪಂಚಮಸಾಲಿ ಸಮಾಜ ನನ್ನ ಬೆನ್ನ ಹಿಂದಿದೆ ಎಂದು ಹೇಳುತ್ತಿದ್ದಾರೆ. ತಾಕತ್ತು ದಮ್ಮು ಇದ್ದರೆ ಸಮಾಜದ ಹೆಸರನ್ನು ಬಳಸದೇ ವೈಯಕ್ತಿಕ ವರ್ಚಸ್ಸಿನ ಮೇಲೆ ಹೋರಾಟ ಮಾಡಲಿ ಎಂದು ಸವಾಲ್ ಎಸೆದರು.
ಈ ಹಿಂದೆ ಯತ್ನಾಳ್ ಅವರು ನಮ್ಮ ದಿಕ್ಕು ತಪ್ಪಿಸಿ ಬೆಂಗಳೂರಿನವರೆಗೆ ಪ್ರಜ್ಞಾರಹಿತವಾಗಿ ಪಾದಯಾತ್ರೆ ಮಾಡಿದರು. ಬೆಂಗಳೂರಿನಲ್ಲಿ ಶೀಘ್ರದಲ್ಲಿಯೇ ಪಕ್ಷಾತೀತವಾಗಿ ಪಂಚಮಸಾಲಿ ಸಮಾಜದ ಮುಖಂಡರ ಸಭೆ ಕರೆದು 2ಎ ಮೀಸಲಾತಿ ಹೋರಾಟ ಮುಂದುವರೆಸುತ್ತೇವೆ. ಆದರೆ ಈ ಸಭೆಗೆ ಸ್ವಾಮೀಜಿ ಹಾಗೂ ಯತ್ನಾಳ್ ಅವರನ್ನು ಆಹ್ವಾನಿಸುವುದಿಲ್ಲ. ಮಾಜಿ ಸಚಿವ ಮುರಗೇಶ್ ನಿರಾಣಿ ಅವರಿಗೆ ಆಹ್ವಾನವಿರುತ್ತದೆ ಎಂದು ಹೇಳಿದರು.