– ಚನ್ನಪಟ್ಟಣದಲ್ಲಿ ಸೀರೆ ಹಂಚಿರುವುದಕ್ಕೂ ನಮಗೂ ಸಂಬಂಧವಿಲ್ಲ
ತುಮಕೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು (H.D Kumaraswamy) ಸಿದ್ದಗಂಗಾ ಮಠಕ್ಕೆ (Siddaganga Mutt) ಭೇಟಿ ನೀಡಿ, ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಸಿದಲಿಂಗಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ಮಾಡಿರುವುದು. ಚನ್ನಪಟ್ಟಣದಲ್ಲಿ ಸೀರೆ ಪಂಚೆ ಹಂಚಿರುವುದಕ್ಕೂ, ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆ ಕೆಲಸ ಮಾಡುತ್ತಿರುವುದು ಕಾಂಗ್ರೆಸ್‍ನವರು ಎಂದು ಆರೋಪಿಸಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಕಾರ್ಡ್‍ಗಳನ್ನು ನೀಡಿದ್ದು ನೋಡಿಲ್ವಾ? ಈಗಲೂ ಕಾಂಗ್ರೆಸ್‍ನವರು ನಕಲಿ ಆಫರ್ ಕಾರ್ಡ್ ಹಂಚುವ ಪ್ರಯೋಗ ಮಾಡುತ್ತಿದ್ದಾರೆ. ಹೊಸದೊಡ್ಡಿ ಬಳಿ ಸೀರೆ ಶರ್ಟ್ ಗಳು ಸೀಜ್ ಆಗಿದ್ದು ನಮಗೆ ಸಂಬಂಧಿಸಿದ್ದಲ್ಲ. ನಿಖಿಲ್ ಮದುವೆ ಸಂದರ್ಭದಲ್ಲಿ ಉಡುಗೊರೆ ನೀಡಬೇಕಿತ್ತು. ಕೋವಿಡ್ ಕಾರಣದಿಂದ ಕೊಡಲು ಆಗಿರಲಿಲ್ಲ. ನಿಖಿಲ್ ಆರ್ಡರ್ ಮಾಡಿದ್ದೆಲ್ಲಾ ಮಾರ್ಕೆಟ್‍ಗೆ ವಾಪಸ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೂರು ಉಪಚುನಾವಣೆ ಇದ್ದರೂ ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಹೆಚ್ಚು ಕಾತರ ಇದೆ. ಎಷ್ಟೇ ಅಪಪ್ರಚಾರ ಮಾಡಿದರೂ, ಚನ್ನಪಟ್ಟಣದ ಜನರ ಆಶೀರ್ವಾದ ನಮ್ಮ ಮೇಲಿದೆ. ಎನ್‍ಡಿಎ ಅಭ್ಯರ್ಥಿ ಗೆಲ್ಲಲಿದ್ದಾರೆ. ನೀರಾವರಿ ಬಗ್ಗೆ, ಅಭಿವೃದ್ಧಿ ಬಗ್ಗೆ ಇಂದಿನ ಪತ್ರಿಕೆಯಲ್ಲಿ ಪುಟಗಟ್ಟಲೇ ಗಮನಿಸಿದ್ದೇನೆ. ಅಲ್ಲದೇ ಟೀಕೆ ಟಿಪ್ಪಣಿ ಬಗ್ಗೆ ನೋಡಿದ್ದೇನೆ. ಇದಕ್ಕೆ ಚನ್ನಪಟ್ಟಣದ ಮತದಾರರು ಉತ್ತರ ನೀಡುತ್ತಾರೆ ಎಂದಿದ್ದಾರೆ.
ನಿಖಿಲ್ ಸೋಲಿಗೆ ಅವರ ಅಪ್ಪ, ಅಮ್ಮ ಮಾಡಿದ ಪಾಪಗಳೇ ಕಾರಣ ಎಂದು ಡಿ.ಕೆ ಸುರೇಶ್ ಹೇಳಿಕೆ ವಿಚಾರವಾಗಿ, ಏನ್ ಪಾಪ ಮಾಡಿದ್ದಾರೆ, ಯಾರು ಏನ್ ಮಾಡಿದ್ದಾರೆ ಎಂದು ಗೊತ್ತಿದೆ. ಕಲ್ಲು ಗಣಿಗಾರಿಕೆಯಿಂದ ಇವರು ಎಷ್ಟು ಕುಟುಂಬ ಹಾಳು ಮಾಡಿದ್ದಾರೆ ಎಂದು ಗೊತ್ತಿದೆ. ಪಾಪದ ಕೆಲಸ ಮಾಡಿದವರು ಅವರು, ಅವರ ಪಾಪದ ಕೆಲಸದ ವಿರುದ್ಧ ಹೋರಾಟ ಮಾಡುತ್ತಿರುವವರು ನಾವು ಎಂದು ಟಾಂಗ್ ಕೊಟ್ಟಿದ್ದಾರೆ.
ಶಕ್ತಿ ಯೋಜನೆ ವಿಚಾರವಾಗಿ, ಕಾಂಗ್ರೆಸ್ ಆಡಳಿತ ಹೇಗೆ ನಡೆಯುತ್ತಿದೆ ಎಂದು ಖರ್ಗೆ ಹೇಳಿದ್ದಾರೆ. ಖರ್ಗೆಯವರು ಅಕ್ಕ ಪಕ್ಕ ಕೂರಿಸಿಕೊಂಡು ಹೇಳಿದ್ದಾರೆ. ಇದು ಆರಂಭದ ಹಂತ, ಗ್ಯಾರಂಟಿ ಒಂದೊಂದೆ ವಾಪಸ್ ಪಡೆಯುವ ಪ್ರಯತ್ನ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ದೇವಸ್ಥಾನದ ಆಸ್ತಿಯ ದಾಖಲೆಯಲ್ಲಿ ವಕ್ಫ್ ಬೋರ್ಡ್ ಹೆಸರಿನ ವಿಚಾರವಾಗಿ, ಇದು ಯಾಕೆ ಆರಂಭವಾಗಿದೆ ಎಂದರೆ, ಇಲ್ಲಿ ಕಾಂಗ್ರೆಸ್‍ನ ದುರಾಡಳಿತ ಪ್ರಾರಂಭವಾಗಿದೆ. ಕಾಂಗ್ರೆಸ್‍ನ ಅಕ್ರಮ ಮುಚ್ಚಿಕೊಳ್ಳುವ ಪ್ರಯತ್ನ ಇದು. ನ್ಯಾಯಾಂಗದಲ್ಲಿ ಚರ್ಚೆಗಳು ಆರಂಭವಾಗಿವೆ ಇದಕ್ಕೆ ಉತ್ತರ ಸಿಗಲಿದೆ ಎಂದಿದ್ದಾರೆ.