ದಸರಾ ವಿಶೇಷ: ದೇವಿಗೆ ಚಾಮುಂಡಿ, ರಕ್ತೇಶ್ವರಿ ಹೆಸರು ಬಂದಿದ್ದು ಹೇಗೆ?

Public TV
3 Min Read
Dasara Vijayadashami Goddess Chamundeshwari Rakteshwari Devi Mythology Story

ದೇವಿ ಮಹಾತ್ಮೆಯ ಐದನೇ ಅಧ್ಯಾಯದಲ್ಲಿ ಶುಂಭ ನಿಶುಂಭರ (Shumba, Nishumba) ಕಥೆ ಬರುತ್ತದೆ. ಶುಂಭ, ನಿಶುಂಭರು ರಾಕ್ಷಸರಾಗಿದ್ದು ದೇವಲೋಕವನ್ನು ಆಕ್ರಮಿಸುವ ಕನಸು ಕಾಣುತ್ತಾರೆ. ಈ ಕನಸು ನನಸಾಗಬೇಕಾದರೆ ನಮಗೆ ವಿಶೇಷ ವರ ಸಿಗಬೇಕೆಂದು ತಿಳಿದು ಬ್ರಹ್ಮನನ್ನು ಮೆಚ್ಚಿಸಲು ಘೋರ ತಪಸ್ಸು ಮಾಡುತ್ತಾರೆ. ಇವರ ತಪಸ್ಸನ್ನು ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಈ ವೇಳೆ ಅಯೋನಿಜೆಯಾದ ಕನ್ಯೆ ಅಲ್ಲದೇ ಯಾರಿಂದಲೂ ನಮಗೆ ಮರಣ ಬಾರಬಾರದು ಎಂದು ವರ ಕೇಳುತ್ತಾರೆ. ಬ್ರಹ್ಮ ತಥಾಸ್ತು ಎಂದು ಹೇಳಿ ಈ ವಿಶೇಷ ವರವನ್ನು ದಯಪಾಲಿಸುತ್ತಾನೆ.

ವರ ಸಿಕ್ಕಿದ ಬೆನ್ನಲ್ಲೇ ಶುಂಭ, ನಿಶುಂಭರು ದೇವಲೋಕಕ್ಕೆ ಹೋಗಿ ಯುದ್ಧ ಮಾಡಿ ದೇವತೆಗಳನ್ನು ಅಲ್ಲಿಂದ ಓಡಿಸುತ್ತಾರೆ. ಈ ವೇಳೆ ಏನು ಮಾಡಬೇಕು ಎನ್ನುವುದನ್ನು ತಿಳಿಯದ ದೇವತೆಗಳು ನೇರವಾಗಿ ಆದಿಶಕ್ತಿಯಾದ ಪಾರ್ವತಿಯ ಬಳಿ ಬರುತ್ತಾರೆ. ಪಾರ್ವತಿಯ (Parvathi) ಬಳಿ ಬರುವುದಕ್ಕೂ ಕಾರಣವಿದೆ. ಹಿಂದೆ ಮಹಿಷಾಸುರನನ್ನು ಸಂಹಾರ ಮಾಡಿದ ಬಳಿಕ ದೇವಿ ನಿಮಗೆ ಯಾವುದೇ ಕಷ್ಟ ಬಂದರೂ ನನ್ನ ಬಳಿ ಬನ್ನಿ. ನಿಮ್ಮ ಕಷ್ಟವನ್ನು ನಾನು ಪಾರು ಮಾಡುತ್ತೇನೆ ಎಂದು ದೇವತೆಗಳಿಗೆ ಅಭಯ ನೀಡಿದ್ದಳು.

ದೇವತೆಗಳು ಲೋಕಕಂಟಕರಾಗಿರುವ ಶುಂಭ, ನಿಶುಂಭರ ಕಾಟವನ್ನು ವಿವರಿಸಿ ನಮ್ಮನ್ನು ರಕ್ಷಿಸಬೇಕೆಂದು ಆದಿಶಕ್ತಿಯ ಬಳಿ ಮೊರೆ ಇಡುತ್ತಾರೆ. ದೇವತೆಗಳು ಆದಿಶಕ್ತಿಯನ್ನು ಹೊಗಳಿದಾಗ ಆಕೆಯ ದೇಹದಿಂದ ಕೌಶಿಕಿಯೆಂಬ (Kaushiki) ಸ್ತ್ರೀ ಹೊರಬಂದು ದೇವತೆಗಳಿಂದ ಸಕಲ ಆಯುಧಗಳನ್ನು ಪಡೆಯುತ್ತಾಳೆ. ನಂತರ ಸೌಂದರ್ಯಭರಿತವಾದ ಬಾಲೆಯ ರೂಪವನ್ನು ತಳೆದು ಹಿಮಾಲಯದ ತಪ್ಪಲಿನಲ್ಲಿ ಉಯ್ಯಾಲೆಯಾಡುತ್ತಾ ವಿನೋದಲ್ಲಿ ಕುಳಿತು ತನ್ನದೇ ಲೋಕದಲ್ಲಿ ವಿಹರಿಸುತ್ತಿರುತ್ತಾಳೆ.

Mudhol Lokapur Durga Devi Temple Fair Bagalkot 3

ಈ ಸಂದರ್ಭದಲ್ಲಿ ಬೇಟೆಯಾಡಲು ಬಂದಿದ್ದ ಶುಂಭ, ನಿಶುಂಭರ ಸೇನಾಧಿಪತಿಯಾದ ಚಂಡ, ಮುಂಡರು (Chanda, Munda) ದೇವಿಯನ್ನು ನೋಡಿ ಮನಸೋಲುತ್ತಾರೆ. ಈಕೆಯ ಸೌಂದರ್ಯವನ್ನು ನೋಡಿ ಈ ವಿಚಾರವನ್ನು ಶುಂಭನಿಗೆ ತಿಳಿಸುತ್ತಾರೆ. ಶುಂಭ ಆಕೆಯನ್ನು ಕರೆ ತರುವಂತೆ ಧೂಮ್ರಲೋಚನಿಗೆ ಸೂಚಿಸುತ್ತಾನೆ. ಈ ವೇಳೆ ದೇವಿ,”ನನ್ನ ಕೈ ಹಿಡಿಯಬೇಕಾದ ವರನಾದವನು ನನಗಿಂತಲೂ ಬಲಶಾಲಿಯಾಗಿರಬೇಕು. ನನ್ನನ್ನು ಯಾರು ಯುದ್ಧದಲ್ಲಿ ಸೋಲಿಸುತ್ತಾರೋ ಅವರನ್ನು ಮದುವೆಯಾಗುತ್ತೇನೆ. ಹೀಗಾಗಿ ಯುದ್ಧದಲ್ಲಿ ಸೋಲಿಸಿದರೆ ಮಾತ್ರ ಶುಂಭನನ್ನು ಮದುವೆಯಾಗುತ್ತೇನೆ” ಎಂದು ಹೇಳುತ್ತಾಳೆ. ಈ ಕಾದಾಟದಲ್ಲಿ ಧೂಮ್ರಲೋಚನ ಹತನಾದ ವಿಚಾರ ತಿಳಿದು ಶುಂಭ ಚಂಡ, ಮುಂಡರಿಗೆ ಆಕೆಯನ್ನು ಕರೆ ತರುವಂತೆ ಆದೇಶಿಸುತ್ತಾನೆ. ಚಂಡಮುಂಡರು ದೇವಿ ಜೊತೆ ಯದ್ಧ ಮಾಡುತ್ತಾರೆ. ಈ ಸಮಯದಲ್ಲಿ ದೇವಿ ಕಪ್ಪು ಬಣ್ಣಕ್ಕೆ ತಿರುಗಿ ಆಕೆಯ ಹಣೆಯಿಂದ ಕಾಳಿ ಹೊರ ಬಂದು ಇಬ್ಬರನ್ನು ಸಂಹಾರ ಮಾಡುತ್ತಾಳೆ. ಇಬ್ಬರನ್ನು ಸಂಹಾರ ಮಾಡಿದ್ದಕ್ಕೆ ʼಚಾಮುಂಡಿʼ, ʼಚಾಮುಂಡೇಶ್ವರಿʼ ಎಂಬ ಹೆಸರು ದೇವಿಗೆ ಬರುತ್ತದೆ. ಇದನ್ನೂ ಓದಿ: ಶಿರಸಿ ಮಾರಿಕಾಂಬಾ ದರ್ಶನಕ್ಕೆ ವಸ್ತ್ರಸಂಹಿತೆ ಜಾರಿ

chamundi Temple 1

ಚಂಡಮುಂಡರನ್ನು ದೇವಿ ಹತ್ಯೆ ಮಾಡಿದ ವಿಚಾರ ತಿಳಿದು ಶುಂಭ ರಕ್ತ ಬೀಜನನನ್ನು (Raktabeeja) ಯುದ್ಧಕ್ಕೆ ಕಳುಹಿಸುತ್ತಾನೆ. ಯುದ್ಧದ ಸಮಯದಲ್ಲಿ ಆತನ ರಕ್ತದ ಬಿಂದುಗಳು ನೆಲಕ್ಕೆ ಬೀಳುತ್ತಿದ್ದಂತೆ ಮತ್ತಷ್ಟು ರಾಕ್ಷಸರು ಹುಟ್ಟುತ್ತಿರುತ್ತಾರೆ. ರಕ್ತದಿಂದ ರಾಕ್ಷಸರು ಜನಿಸಲು ಕಾರಣವಿದೆ. ತನ್ನ ದೇಹದಿಂದ ಬಿದ್ದ ಒಂದೊಂದು ತೊಟ್ಟು ರಕ್ತವೂ ತನ್ನಂತೆಯೇ ಪರಾಕ್ರಮಶಾಲಿಯಾದ ರಾಕ್ಷಸರು ಹುಟ್ಟುವಂತೆ ಈಶ್ವರನಿಂದ ವರ ಪಡೆದಿದ್ದ. ಯುದ್ಧದಲ್ಲಿ ಈತನನ್ನು ಸೋಲಿಸುವುದು ಅಸಾಧ್ಯ ಎಂದು ತಿಳಿದ ದೇವಿ ನಾಲಗೆಯನ್ನು ಹೊರ ಚಾಚಿ ಯುದ್ಧ ಮಾಡುತ್ತಾಳೆ. ನಾಲಗೆಯ ಮೇಲೆ ನಿಂತು ರಕ್ತಬೀಜ ಯುದ್ಧ ಮಾಡಿದ. ಆತನ ದೇಹದಿಂದ ಬಿದ್ದ ರಕ್ತವನ್ನು ನಾಲಗೆಯ ಮೂಲಕ ಹೀರಿದ್ದರಿಂದ ರಕ್ತಬೀಜನ ಶಕ್ತಿ ಕಡಿಮೆಯಾಗಿ ಕೊನೆಗೆ ಹತನಾಗುತ್ತಾನೆ. ರಕ್ತಬೀಜನನ್ನು ಸಂಹರಿಸಿದ್ದಕ್ಕೆ ದೇವಿಗೆ ʼರಕ್ತೇಶ್ವರಿʼ ಎಂಬ ಹೆಸರು ಬರುತ್ತದೆ.

ದುಮ್ರಲೋಚನ, ಚಂಡ, ಮುಂಡ, ರಕ್ತ ಬೀಜನನ್ನು ಹತ್ಯೆ ಮಾಡಿದ್ದಕ್ಕೆ ಸಿಟ್ಟಾದ ನಂತರ ಶುಂಭ, ನಿಶುಂಭರು ದೇವಿಯೊಡನೆ ಯುದ್ಧಕ್ಕೆ ಬರುತ್ತಾರೆ. ಇವರಿಬ್ಬರನ್ನು ಕೌಶಿಕಿ ಸಂಹಾರ ಮಾಡಿ ದೇವಲೋಕವನ್ನು ಮರಳಿ ದೇವತೆಗಳಿಗೆ ನೀಡುತ್ತಾಳೆ.

Share This Article