ಅಂದು ಹುಬ್ಲೋಟ್‌ ವಾಚ್‌, ಇಂದು ಮುಡಾ ಸೈಟ್‌ಗಳು! – ಭಾರೀ ಚರ್ಚೆಗೆ ಗ್ರಾಸವಾಗಿದ್ದ ಗಿಫ್ಟ್‌

Public TV
2 Min Read
Siddaramaiah s Hublot

ಬೆಂಗಳೂರು: ಅಂದು ಹುಬ್ಲೋಟ್ ವಾಚನ್ನು ವಾಪಸ್‌ ನೀಡಿದ್ದ ಸಿದ್ದರಾಮಯ್ಯ (Siddaramaiah) ಇಂದು ಮುಡಾ ಸೈಟ್‌ಗಳು (MUDA) ವಾಪಸ್‌ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಎರಡನೇ ಬಾರಿ ವಾಪಸ್ ನೀಡಿದ ಘಟನೆ ನಡೆದಿದೆ.

ಮುಡಾ ಪ್ರಕರಣದಲ್ಲಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ 2010 ರಲ್ಲಿ ಈ ಜಾಗವನ್ನು ಗಿಫ್ಟ್‌ ಡೀಡ್‌ ಆಗಿ ನೋಂದಣಿ ಮಾಡಿದ್ದರಿಂದ ಸಿದ್ದರಾಮಯ್ಯ ವಿವಾದಕ್ಕೆ ಸಿಲುಕಿದ್ದಾರೆ. ಇದು ಈಗಿನ ಪ್ರಕರಣವಾಗಿದ್ದರೆ ಸಿಎಂ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ವಾಚ್‌ ಗಿಫ್ಟ್‌ ಪಡೆದು ವಿವಾದಕ್ಕೆ ಸಿಲುಕಿದ್ದರು. ಇದನ್ನೂ ಓದಿ: ಪ್ರೀತಿಯ ವ್ಯಕ್ತಿಯಿಂದ ಸಿಎಂ ಸಿದ್ದರಾಮಯ್ಯಗೆ Rado ವಾಚ್ ಗಿಫ್ಟ್

2013-2018ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 40 ಲಕ್ಷ ರೂ. ಮೌಲ್ಯದ ಹುಬ್ಲೊಟ್ ವಾಚ್ (Hublot Watch) ಹಗರಣ ದೊಡ್ಡ ಸದ್ದು ಮಾಡಿತ್ತು. ಹುಬ್ಲೋಟ್ ವಾಚ್ ಗಿಫ್ಟ್‌  ಪ್ರಕರಣದಿಂದ ದೊಡ್ಡ ಮಟ್ಟದ ರಾಜಕೀಯ ಬಿರುಗಾಳಿ ಸೃಷ್ಟಿಯಾಗಿತ್ತು.

ಸಿದ್ದರಾಮಯ್ಯಗೆ ವಾಚ್‌ ಗಿಫ್ಟ್‌ ನೀಡಿದ್ದ ಉದ್ಯಮಿ ಗಿರೀಶ್‌ ಚಂದ್ರವರ್ಮ
ಸಿದ್ದರಾಮಯ್ಯಗೆ ವಾಚ್‌ ಗಿಫ್ಟ್‌ ನೀಡಿದ್ದ ಉದ್ಯಮಿ ಗಿರೀಶ್‌ ಚಂದ್ರವರ್ಮ

2015ರ ಜುಲೈನಲ್ಲಿ ತನ್ನ ಎನ್‌ಆರ್‌ಐ ಸ್ನೇಹಿತ ಡಾ.ಗಿರೀಶ್‌ಚಂದ್ರ ವರ್ಮಾ ಈ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದರು ಎಂದು  ಸಿದ್ದರಾಮಯ್ಯ ಹೇಳಿದ್ದರು. ನಂತರ ಈ ವಿಚಾರವನ್ನು ಕೆದಕಿದ್ದ ಹೆಚ್‌ಡಿ ಕುಮಾರಸ್ವಾಮಿ ನಿಮ್ಮ ಸಿಎಂ ಸಮಾಜವಾದಿಯಲ್ಲ ಅವರು ಮಜಾವಾದಿ. ದುಬಾರಿ ಬೆಲೆಯ ವಜ್ರ ಖಚಿತ ವಾಚು, ಗ್ಲಾಸ್‌ಗಳನ್ನು ಧರಿಸುತ್ತಾರೆ ಎಂದು  ಹೇಳಿ ಟೀಕಿಸಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ `ವಾಚ್’ ಕಂಟಕ!

ಕೆಲವು ಒಪ್ಪಂದಗಳಿಗೆ ಸಹಕರಿಸಿದ್ದಕ್ಕೆ ವೈದ್ಯ ಗಿರೀಶ್‌ ಚಂದ್ರವರ್ಮ ಅವರಿಂದ ಸಿದ್ದರಾಮಯ್ಯ ಕಿಕ್‌ ಬ್ಯಾಕ್‌ ರೂಪದಲ್ಲಿ ವಾಚ್‌ ಪಡೆದಿದ್ದಾರೆ. ಅದಕ್ಕೆ ಎಲ್ಲ ದಾಖಲೆಗಳಿವೆ. ಹಾಗಾಗಿ ಪ್ರಧಾನಮಂತ್ರಿ ಕಚೇರಿಗೂ ದೂರು ನೀಡಲಾಗಿತ್ತು. ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ನ್ಯಾಯಾಲಯ ನಿರ್ದೇಶಿಸಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಹ ಸಲ್ಲಿಸಲಾಗಿತ್ತು.

ಪ್ರಕರಣದಲ್ಲಿ ಸಿದ್ದರಾಮಯ್ಯ ಆಪ್ತ ಡಾ.ಗಿರೀಶ್ ಚಂದ್ರ ವರ್ಮಾ ಅವರು ನೀಡಿದ್ದ ದಾಖಲಾತಿಗಳು ಸುಳ್ಳು ಎಂದು ಆರೋಪ ಕೇಳಿಬಂದಿತ್ತು. ದುಬೈನಲ್ಲಿ ವಾಚ್ ಖರೀದಿ ಮಾಡಿದ್ದೆ ಎಂದು ಪ್ರಕರಣದ ತನಿಖಾ ಸಂಸ್ಥೆ ಎಸಿಬಿ ಮುಂದೆ ನೀಡಿದ್ದ ಹೇಳಿಕೆ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವರ್ಮಾ ಸಲ್ಲಿಸಿದ್ದರು. ಆದರೆ ಸದ್ಯ ಇದು ಸುಳ್ಳು, ಆ ದಾಖಲೆಗಳು ನಕಲಿ ಎಂಬ ಆರೋಪ ಕೇಳಿ ಬಂದಿತ್ತು.Siddaramaiah Watch Speaker Kagdu thimmappa

ಸಿದ್ದರಾಮಯ್ಯ ರಾಜೀನಾಮೆ ಹಂತಕ್ಕೂ ಹುಬ್ಲೋಟ್ ವಾಚ್ ಪ್ರಕರಣ ತಲುಪಿತ್ತು. ವಾಚ್ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿದ್ದರಾಮಯ್ಯ ವಾಚ್ ಅನ್ನು ಕೊನೆಗೆ ಸರ್ಕಾರದ ವಶಕ್ಕೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದರು.

ವಾಚ್‌ ಯಾರಿಂದ ಬಂದಿದೆ ಎಂಬ ವಿವರವುಳ್ಳ ಪತ್ರವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಸಿಎಂ ನೀಡಿದ್ದರು. ಕಾಗೋಡು ತಿಮ್ಮಪ್ಪನವರು ಮುಖ್ಯ ಕಾರ್ಯದರ್ಶಿಯಾಗಿದ್ದ ಅರವಿಂದ್ ಜಾಧವ್ ಅವರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಕೈಗಡಿಯಾರವನ್ನು ಹಸ್ತಾಂತರ ಮಾಡಿದ್ದರು.  ನಂತರ ವಾಚನ್ನು ಕ್ಯಾಬಿನೆಟ್ ಹಾಲ್‌ನಲ್ಲಿಡುವುದಾಗಿ ಸಿಎಸ್  ಪ್ರಕಟಿಸಿದರು.

ವಿವಾದ ಅಂತ್ಯವಾಗಿದ್ದರೂ ಈ ವಾಚ್ ಪ್ರಕರಣ ಸಿದ್ದರಾಮಯ್ಯ ಅವರ ಇಮೇಜ್‍ಗೆ ಸ್ವಲ್ಪ ಹೊಡೆತ ನೀಡಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಈ ವಿಚಾರವನ್ನು ಪ್ರಸ್ತಾಪ ಮಾಡಿ ಟೀಕೆ ಮಾಡುತ್ತಿದ್ದರು.

 

Share This Article