– ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ರಾಜಕೀಯ ಮಾಡುತ್ತಿದೆ
ಬೆಂಗಳೂರು: ಶಾಸಕ ಮುನಿರತ್ನ (Munirathna) ತಪ್ಪು ಮಾಡಿದ್ರೆ ಕಾನೂನು ಪ್ರಕಾರ ತನಿಖೆಯಾಗಿ ಶಿಕ್ಷೆ ಆಗಲಿ. ಆದರೆ ಈ ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಟಾರ್ಗೆಟ್ ರಾಜಕೀಯ ಮಾಡ್ತಿದೆ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಗರದ ಜೆಪಿ ಭವನದಲ್ಲಿ ಮಾತನಾಡಿದ ಅವರು, ಮುನಿರತ್ನ ಕೇಸ್ ವಿಚಾರವಾಗಿ ತನಿಖೆ ಆಗುತ್ತಿದೆ. ತನಿಖೆ ನಡೆಯುವ ಸಮಯದಲ್ಲಿ ಮಾತನಾಡುವುದು ಸರಿಯಲ್ಲ. ತನಿಖೆಯಾಗಲು ಸತ್ಯಾಸತ್ಯತೆ ಹೊರಗೆ ಬರಲಿ. ಕಾನೂನಿಗಿಂತ ಯಾರು ದೊಡ್ಡವರು ಅಲ್ಲ. ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು ಎಂದು ಪ್ರತಿಕ್ರಿಯಿಸಿದರು.ಇದನ್ನೂ ಓದಿ: ತಿರುಪತಿ ಲಡ್ಡು ವಿಚಾರ ತನಿಖೆ ಆಗಲಿ: ಎಂ.ಬಿ ಪಾಟೀಲ್
ಪರಶುರಾಮ್ ಕೇಸ್‌ನ್ನು ಮುಚ್ಚಿ ಹಾಕಲು ಸರ್ಕಾರ ಹೇಗೆ ಪ್ರಯತ್ನ ಮಾಡಿತ್ತು ಎಂದು ಎಲ್ಲರಿಗೂ ಗೊತ್ತಿದೆ. ವಾಲ್ಮೀಕಿ ಹಗರಣ ಕೇಸ್‌ನಲ್ಲಿ ನಾಗೇಂದ್ರ ವಿಚಾರಕ್ಕೆ ಸಂಬಂಧಿಸಿದಂತೆ ಈ ಸರ್ಕಾರ ಹೇಗೆ ತನಿಖೆ ಮಾಡಿತು ಎಂದು ಜಗಜ್ಜಾಹೀರಾಗಿದೆ. ಮುನಿರತ್ನ ವಿಚಾರದಲ್ಲಿ ಎಫ್‌ಎಸ್‌ಎಲ್ ವರದಿ ಬರಬೇಕು. ಅವರ ಧ್ವನಿಯೋ ಅಲ್ಲವೋ ಎಂದು ತಿಳಿಯಬೇಕು. ಮುನಿರತ್ನ ಅವರನ್ನು ತರಾತುರಿಯಲ್ಲಿ ಬಂಧನ ಮಾಡಿದ್ದಾರೆ. ಇದನ್ನು ನೋಡಿದರೆ ರಾಜ್ಯ ಸರ್ಕಾರ ಟಾರ್ಗೆಟ್ ರಾಜಕೀಯ ಮಾಡುತ್ತಿದೆ ಎಂದು ಅನ್ನಿಸುತ್ತಿದೆ ಎಂದರು.
ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಬೇರೆ ಅವರ ಮೇಲೆ ತಪ್ಪು ಹೊರಿಸುವ ಕೆಲಸ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಸ್ವಾತಂತ್ರ‍್ಯ ಬಂದಾಗಿನಿಂದ ಅನೇಕ ಸರ್ಕಾರಗಳು ಕೆಲಸ ಮಾಡಿವೆ ಆದರೆ ಈ ಸರ್ಕಾರ ಟಾರ್ಗೆಟ್ ರಾಜಕೀಯ ಮಾಡಿಕೊಂಡು, ದ್ವೇಷದ ರಾಜಕೀಯ ಮಾಡಿಕೊಂಡು ಹೊರಟಿದ್ದಾರೆ. ಇದನ್ನು ರಾಜ್ಯದ ಜನರು ಮೆಚ್ಚುವುದಿಲ್ಲ ಎಂದು ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ಜಾತಿ ಆಧಾರದಲ್ಲಿ ರಾಜಕೀಯ ಮಾಡುವ ಪ್ರಯತ್ನ ಮಾಡುತ್ತಿದೆ. ಇಲ್ಲಿ ಒಕ್ಕಲಿಗ ಟ್ಯಾಗ್, ಓಬಿಸಿ ಟ್ಯಾಗ್, ಲಿಂಗಾಯತರ ಟ್ಯಾಗ್, ಮುಸ್ಲಿಂ ಟ್ಯಾಗ್ ಹಾಕಿ ರಾಜಕೀಯ ಮಾಡುವುದು ಸೂಕ್ತ ಅಲ್ಲ. ಯಾವುದೋ ಸಮುದಾಯ ಒಲೈಕೆ ಮಾಡಿಕೊಳ್ಳಲು ಈ ರೀತಿ ಟಾರ್ಗೆಟ್ ರಾಜಕೀಯ ಮಾಡುತ್ತಿದ್ದಾರೆ. ಇವೆಲ್ಲ ಬಿಟ್ಟು ಮೂರು ಮುಕ್ಕಾಲು ವರ್ಷ ಸಮಯ ಇದೆ. ಜನ ಅಧಿಕಾರ ಮಾಡಲು ಅವಕಾಶ ಕೊಟ್ಟಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನ ಕೊಡಲಿ. ಸರ್ಕಾರ ಬಂದೂ ಇಷ್ಟು ದಿನ ಆದರೂ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಈ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಶುರುವಾಗಿದೆ. ನಾಳೆ ಚುನಾವಣೆ ನಡೆದರೆ ಕಾಂಗ್ರೆಸ್ ಸರ್ಕಾರವನ್ನ ರಾಜ್ಯದ ಜನ ತಿರಸ್ಕಾರ ಮಾಡುತ್ತಾರೆ. ಆ ಮಟ್ಟದ ವಾತಾವರಣ ಸರ್ಕಾರದ ವಿರುದ್ದ ಇದೆ. ಅವರ ತಪ್ಪು ಮುಚ್ಚಿಕೊಳ್ಳಲು ನಿತ್ಯ ಹಗರಣಗಳು, ಅಕ್ರಮಗಳು ನಡೆಯುತ್ತಿವೆ. ನಾವು ವಿರೋಧ ಪಕ್ಷವಾಗಿ ಪ್ರಜಾಪ್ರಭುತ್ವದಲ್ಲಿ ನಮಗೆ ಹಕ್ಕು ಕೊಟ್ಟಿದ್ದಾರೆ. ಅದನ್ನು ಬಯಲಿಗೆ ಎಳೆಯೋದೇ ತಪ್ಪಾ ಎಂದು ಪ್ರಶ್ನೆ ಮಾಡಿದರು.ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳು ಹಗಲು-ರಾತ್ರಿ ಗುಂಡಿ ಮುಚ್ಚೋ ಕೆಲಸ ಮಾಡ್ತಿದ್ದಾರೆ: ಡಿಕೆಶಿ