ರಾಯಚೂರಿನಲ್ಲಿ ಬಿಸಿಲಲ್ಲೇ ಪಾಠ ಮಾಡ್ತಾರೆ: ತಲೆ ಮೇಲೆ ಟವಲ್ ಹಾಕ್ಕೊಂಡು ಹುಡುಗ್ರು ಪಾಠ ಕೇಳ್ತಾರೆ

Public TV
2 Min Read
RCR 12 3 17 HOT SCHOOL 6

– ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ವಿದ್ಯಾರ್ಥಿಗಳಿಗೆ ಶಾಲಾ ಕಟ್ಟಡಗಳಿಲ್ಲ
-ಪ್ರಾಣಭಯ, ಆರೋಗ್ಯ ಭಯದಲ್ಲೇ ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳು

ರಾಯಚೂರು: ಬಿಸಿಲು ಅಂದ್ರೆ ಥಟ್ ಅಂತ ನೆನಪಾಗೋದು ರಾಯಚೂರು ಜಿಲ್ಲೆ. ಆದ್ರೆ ಇಂತಹ ಬಿಸಿಲನ್ನೇ ಲೆಕ್ಕಿಸದೇ ಇಲ್ಲಿನ ವಿದ್ಯಾರ್ಥಿಗಳು ಮೈದಾನದಲ್ಲಿ ಕುಳಿತು ಪ್ರತಿನಿತ್ಯ ಪಾಠ ಕೇಳ್ತಿದ್ದಾರೆ. ಇದು ತಪ್ಪು ಮಾಡಿದಕ್ಕೆ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುತ್ತಿರೋ ಶಿಕ್ಷೆಯಲ್ಲ. ಬದಲಾಗಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಉಸ್ತುವಾರಿ ಜಿಲ್ಲೆಯಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಘೋರಾತಿಘೋರ ಶಿಕ್ಷೆ.

RCR 12 3 17 HOT SCHOOL 1

ಮೈದಾನದಲ್ಲೇ ಪಾಠ: ರಾಯಚೂರು ತಾಲೂಕಿನ ಮಂಜರ್ಲಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲಾ ಕಟ್ಟಡವಿಲ್ಲದೆ ಪ್ರತಿದಿನ ತಲೆ ಮೇಲೆ ಟವಲ್, ಕರ್ಚಿಫ್ ಹಾಕಿಕೊಂಡು ಬಿರುಬಿಸಿಲಿನಲ್ಲಿ ಪಾಠ ಕೇಳುತ್ತಿದ್ದಾರೆ. 1958 ರಲ್ಲಿ ನಿರ್ಮಿಸಲಾದ ಶಾಲೆ ಈಗ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ತಕ್ಕಮಟ್ಟಿಗೆ ಇರುವ ಎರಡು ಕೊಠಡಿಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಪಾಠಮಾಡಲು ಸಾಧ್ಯವಿಲ್ಲ. ಹೀಗಾಗಿ ಮರದ ಕೆಳಗೆ ಹಾಗೂ ಮೈದಾನದಲ್ಲೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಹೊತ್ತು ಕಳೆದಂತೆ ಬಿಸಿಲು ಏರುವುದರಿಂದ ಮಕ್ಕಳು ತಮ್ಮ ರಕ್ಷಣೆಗಾಗಿ ನಿತ್ಯ ಶಾಲೆಗೆ ಟವೆಲ್ ತರುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಆಗಾಗ ಮಕ್ಕಳು ಆರೋಗ್ಯ ಸಮಸ್ಯೆಗಳಿಗೂ ತುತ್ತಾಗುತ್ತಿದ್ದಾರೆ. 131 ಬಾಲಕರು, 139 ಬಾಲಕಿಯರು ಸೇರಿ ಒಟ್ಟು 270 ವಿದ್ಯಾರ್ಥಿಗಳು ಕಟ್ಟಡವಿಲ್ಲದ ಶಾಲೆಯಲ್ಲಿ ಓದುತ್ತಿದ್ದಾರೆ.

RCR 12 3 17 HOT SCHOOL 2

ಶಾಲೆಗೆ ಜಾಗ ಕೊಡಲ್ಲ: ಇನ್ನೂ ಗ್ರಾಮದಲ್ಲಿ ಶಾಲೆಗೆ ಅಂತ ಯಾವ ಜಾಗವೂ ಇಲ್ಲ, ಸದ್ಯ ಇರುವ ಜಾಗವನ್ನ ಈ ಹಿಂದೆ ಯಾರೋ ದಾನ ಮಾಡಿದ್ದು. ಈಗ ಅವರ ಮಕ್ಕಳು ಇದ್ದ ಜಾಗದಲ್ಲೇ ಶಾಲೆ ಕಟ್ಟಿಕೊಳ್ಳಿ ಒಂದಿಂಚು ಹೆಚ್ಚು ಜಾಗವನ್ನೂ ಕೊಡುವುದಿಲ್ಲ ಅಂತಿದ್ದಾರೆ. ಶಾಲೆಯ ಮುಂದೆ ಮಾರಿಕಾಂಬ ದೇವಾಲಯವಿರುವುದರಿಂದ ಮೈದಾನ ಉಳಿದುಕೊಂಡಿದೆ. ಶಿಕ್ಷಣ ಇಲಾಖೆ ಹೆಸರಿನಲ್ಲಿ ಜಾಗವಿಲ್ಲದಿರುವುದರಿಂದ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ. ಎಚ್‍ಕೆಆರ್‍ಡಿಬಿ ಅನುದಾನಕ್ಕೆ ಅರ್ಜಿ ಹಾಕಿರುವ ಕೇತ್ರಶಿಕ್ಷಣಾಧಿಕಾರಿಗಳು, ಹಣ ಬಿಡುಗಡೆಯಾದ್ರೆ ಮುಂದುವರೆಯುವುದಾಗಿ ಹೇಳುತ್ತಿದ್ದಾರೆ.

RCR 12 3 17 HOT SCHOOL 3

ಒಟ್ಟಿನಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಶಾಲೆಯ ಮರು ನಿರ್ಮಾಣ ನಡೆಯಬೇಕಿದೆ. ಅಧಿಕಾರಿಗಳು ಭೂದಾನಿಗಳ ಮನವೊಲಿಸಿ ಇಲ್ಲವೇ ಪರ್ಯಾಯ ಜಾಗದಲ್ಲಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲೆಯನ್ನ ನಿರ್ಮಿಸಬೇಕಿದೆ. ಜಿಲ್ಲಾ ಉಸ್ತುವಾರಿ ಹೊತ್ತಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್ ಕೂಡಲೇ ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ.

RCR 12 3 17 HOT SCHOOL 4

RCR 12 3 17 HOT SCHOOL 5

 

Share This Article
Leave a Comment

Leave a Reply

Your email address will not be published. Required fields are marked *