ಗದಗ: ಸ್ವಂತ ತಂಗಿಗೆ ಲೈಂಗಿಕ ಕಿರುಕುಳ ನೀಡಿರುವ ಕಾಮುಕ ಅಣ್ಣನೊಬ್ಬನ ಮೇಲೆ ಪ್ರಕರಣವೊಂದು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಫೆಬ್ರವರಿ 28 ರಂದು ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
40 ವರ್ಷದ ಅಣ್ಣ ಉಮರ್‍ಸಾಬ್ ನದಾಫ್ ಕಳೆದ ಒಂದು ವರ್ಷದಿಂದ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ತನ್ನ 35 ವರ್ಷದ ಸಂತ್ರಸ್ತ ಮಹಿಳೆ ಮಾಧ್ಯಮಗಳ ಮುಂದೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಉಮರ್‍ಸಾಬ್‍ನಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರು ಹೆಂಡತಿಯರು ಅವನನ್ನು ಬಿಟ್ಟು ಹೋಗಿದ್ದಾರೆ. ಇನ್ನು ಸಂತ್ರಸ್ತ ಮಹಿಳೆಗೂ ಮದುವೆಯಾಗಿದ್ದು ಗಂಡ ಇವರನ್ನು ಬಿಟ್ಟು ಹೋಗಿದ್ದರಿಂದ ಅಣ್ಣನ ಮನೆಯಲ್ಲಿ ವಾಸವಾಗಿದ್ದರು. ಅಣ್ಣನ ಲೈಂಗಿಕ ಕಿರುಕುಳದಿಂದ ಬೇಸತ್ತ ಮಹಿಳೆ ವಿಷ ಸೇವಿಸಿ ಅತ್ಮಹತ್ಯೆಗೂ ಪ್ರಯತ್ನಿಸಿದ್ದರು. ಆದರೂ ಕಾಮುಕ ಅಣ್ಣನ ದರ್ಪ ನಿಂತಿರಲಿಲ್ಲ.
ಮಹಿಳಾ ಸಂಘಗಳ ಸಹಾಯದಿಂದಾಗಿ ಈಗ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾದ ಬಳಿಕ ಅಣ್ಣ ಉಮರ್‍ಸಾಬ್ ನಾಪತ್ತೆಯಾಗಿದ್ದಾನೆ. ನೊಂದ ಮಹಿಳೆ ಜಿಲ್ಲಾ ಆಸ್ಪತ್ರೆಯ ಮಹಿಳಾ ವಿಶೇಷ ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ.