ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ 55 ಮಂದಿ ಸಾವು ಪ್ರಕರಣ – ಪ್ರಮುಖ ಆರೋಪಿ ಅರೆಸ್ಟ್‌

Public TV
1 Min Read
Tamil Nadu Toxic Liquor case

ಚೆನ್ನೈ: ತಮಿಳುನಾಡಿನ (Tamil Nadu) ಕಲ್ಲಕುರಿಚಿಯಲ್ಲಿ ಕಳ್ಳಭಟ್ಟಿ (Toxic Liquor) ಸೇವಿಸಿ 55 ಮಂದಿ ದುರಂತ ಸಾವಿಗೀಡಾದ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕರುಣಾಪುರಂ ಗ್ರಾಮಕ್ಕೆ ಡಿಸ್ಟಿಲ್ಡ್ ಮದ್ಯವನ್ನು ಪೂರೈಸಿದ ಆರೋಪದ ಮೇಲೆ ಚಿನ್ನದೊರೈ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳಭಟ್ಟಿ ಸೇವಿಸಿದ್ದ ಇನ್ನೂ ಅನೇಕರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಗ್ರಾಮದಲ್ಲಿ ನಿತ್ಯ ಒಂದೊಂದು ಸಾವು ವರದಿಯಾಗುತ್ತಿದೆ. ಇದನ್ನೂ ಓದಿ: ದೆಹಲಿಯಲ್ಲಿ ನೀರಿನ ಬಿಕ್ಕಟ್ಟು – 2ನೇ ದಿನಕ್ಕೆ ಕಾಲಿಟ್ಟ ಸಚಿವೆ ಅತಿಶಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ನಿನ್ನೆ ಸಂಜೆಯವರೆಗೂ 29 ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಮೃತರ ಅಂತ್ಯಕ್ರಿಯೆ ಕೂಡ ನಡೆದಿದೆ ಜಿಲ್ಲಾಧಿಕಾರಿ ಪ್ರಶಾಂತ್ ಎಂ.ಎಸ್. ತಿಳಿಸಿದ್ದಾರೆ.

ನ್ಯಾಯಮೂರ್ತಿ ಬಿ ಗೋಕುಲದಾಸ್ (ನಿವೃತ್ತ) ಅವರಿರುವ ಏಕವ್ಯಕ್ತಿ ಆಯೋಗವು ಘಟನೆಯ ತನಿಖೆಯನ್ನು ಪ್ರಾರಂಭಿಸಿದೆ. ವರದಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಹಲವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದೆ. ಇದನ್ನೂ ಓದಿ: ಬೆಳಗ್ಗೆ 9:15ರೊಳಗೆ ಕಚೇರಿಗೆ ಬರದಿದ್ದರೇ ಅರ್ಧ ದಿನದ ಸಂಬಂಳ ಕಟ್ – ಕೇಂದ್ರ ಸರ್ಕಾರಿ ನೌಕರರಿಗೆ ಡಿಒಪಿಟಿ ಎಚ್ಚರಿಕೆ!

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸ್ಟಾಲಿನ್ ಅಸಮರ್ಥರು ಎಂದು ಎಐಎಡಿಎಂಕೆ ಮುಖ್ಯಸ್ಥ ಇ.ಪಳನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಕನಿಷ್ಠ ಒಂದು ಸಾವಿರ ಮದ್ಯದ ಅಂಗಡಿಗಳನ್ನು ಸರ್ಕಾರ ಮುಚ್ಚಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಒತ್ತಾಯಿಸಿದ್ದಾರೆ.

Share This Article