ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಬಳಿಕ ವೀರಾಪುರ ಓಣಿಯಲ್ಲಿ ಯುವತಿ ಅಂಜಲಿ ಅಂಬಿಗೇರ (Anjali Ambigera) ಕೊಲೆ ಪ್ರಕರಣ ಇಡೀ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಹಂತಕ ವಿಶ್ವ ಸಿಐಡಿ ಅಧಿಕಾರಿಗಳ ಮುಂದೆ ಅಂಜಲಿ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ.
ನ್ಯಾಯಾಲಯದ ಅನುಮತಿ ಪಡೆದು ಸಿಐಡಿ (CID) ಎಸ್‍ಪಿ ವೆಂಕಟೇಶ್ ನೇತೃತ್ವದ ತಂಡ ಅಂಜಲಿ ಹಂತಕ ವಿಶ್ವನನ್ನು ಇಂದು ಕಿಮ್ಸ್ ಆಸ್ಪತ್ರೆಯಿಂದ ವಶಕ್ಕೆ ಪಡೆದಿದೆ. ಬಳಿಕ ಬೆಂಡಿಗೇರಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಈ ವೇಳೆ ಹಂತಕ, ನಾನು ಮೈಸೂರಿಗೆ ಬಾ ಅಂತ ಕರೆದೆ, ಅವಳು ಬರಲಿಲ್ಲ. ಅಲ್ಲದೇ ಕೊಲೆಯಾಗುವ ಹಿಂದಿನ ದಿನ 1000 ರೂ. ಫೋನ್ ಪೇ ಮಾಡಿದ್ದೆ ಹಣ ತಗೊಂಡು ಬ್ಲಾಕ್ ಮಾಡಿಬಿಟ್ಟಳು. ಅದೇ ಕಾರಣಕ್ಕೆ ಸಿಟ್ಟು ಬಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇತ್ತ ಹಂತಕ ವಿಶ್ವನ ತಾಯಿಯನ್ನು ಕೂಡ ಸಿಐಡಿ ತಂಡವು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದೆ. ಅಲ್ಲದೇ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಮೇ 13ರಿಂದ ನಾಪತ್ತೆಯಾಗಿದ್ದ ಸಂಸದ ಶವವಾಗಿ ಪತ್ತೆ- ಮೂವರ ಬಂಧನ
ಮೇ 15 ರಂದು ಅಂಜಲಿಯನ್ನು ವಿಶ್ವ ಕೊಲೆ ಮಾಡಿ ಪರಾರಿಯಾಗಲು ದಾವಣಗೆರೆ (Davanagere) ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ಈ ವೇಳೆ ರೈಲಿನಲ್ಲಿ ಮಹಿಳೆ ಜೊತೆ ಗಲಾಟೆ ಮಾಡಿ ಸಿಟ್ಟಾಗಿ ಚಾಕು ಹಾಕಲು ಮುಂದಾಗಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಪ್ರಯಾಣಿಕರು ಆತನಿಗೆ ರೈಲಿನಲ್ಲೇ ಹಿಗ್ಗಾಮುಗ್ಗ ಥಳಿಸಿದ್ದರು. ಜನರಿಂದ ತಪ್ಪಿಸಿಕೊಳ್ಳಲು ವಿಶ್ವ ರೈಲಿನಿಂದ ಜಿಗಿದಿದ್ದ. ಹಳಿಯಲ್ಲಿ ಬಿದ್ದು ಗಾಯಗೊಂಡಿದ್ದ ಈತನನ್ನು ದಾವಣಗೆರೆ ರೈಲ್ವೇ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ವೇಳೆ ವಿಶ್ವನ ವಿಳಾಸ ಇತ್ಯಾದಿ ಮಾಹಿತಿಗಳನ್ನು ಪರಿಶೀಲಿಸಿದಾಗ ಈತನೇ ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ಎನ್ನುವುದು ಪೊಲೀಸರಿಗೆ ದೃಢಪಡುತ್ತದೆ. ಬಳಿಕ ವಿಶ್ವನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.