ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ (VK Saxena) ಅವರು ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ವಿರುದ್ಧ ಎನ್‍ಐಎ (NIA) ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಕೇಜ್ರಿವಾಲ್ ವಿರುದ್ಧ ನಿಷೇಧಿತ ಭಯೋತ್ಪಾದಕ ಸಂಘಟನೆ `ಸಿಖ್ಸ್ ಫಾರ್ ಜಸ್ಟೀಸ್’ನಿಂದ ದೇಣಿಗೆ ಪಡೆದ ಆರೋಪದ ಮೇಲೆ ಎನ್‍ಐಎ ತನಿಖೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದು ರಾಜಭವನ ಮೂಲಗಳು ತಿಳಿಸಿವೆ.
ಈ ಸಂಬಂಧ ಸಕ್ಸೆನಾ ಅವರು ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಕೇಜ್ರಿವಾಲ್ ನೇತೃತ್ವದ ಎಎಪಿಯು ದೇವೇಂದ್ರ ಪಾಲ್ ಭುಲ್ಲರ್ ಬಿಡುಗಡೆಗೆ ಅನುಕೂಲವಾಗುವಂತೆ ಉಗ್ರ ಖಲಿಸ್ತಾನಿ ಗುಂಪುಗಳಿಂದ ದೇಣಿಗೆ ಪಡೆದಿರುವ ಬಗ್ಗೆ ತಮಗೆ ದೂರು ಬಂದಿದೆ. ದೂರುದಾರರು ಕಳುಹಿಸಿರುವ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪರೀಕ್ಷೆ ಒಳಪಡಿಸುವುದು ಹಾಗೂ ಈ ಪ್ರಕರಣದ ತನಿಖೆ ಎನ್‍ಐಎಗೆ ವಹಿಸುವ ಅಗತ್ಯವಿದೆ ಎಂದು ಸಕ್ಸೆನಾ ಹೇಳಿದ್ದಾರೆ.
ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಮುಂದಾಗಿರುವ ಹೊತ್ತಲ್ಲೇ ಸಕ್ಸೆನಾ ಅವರ ಈ ಶಿಫಾರಸು ಕೇಜ್ರಿವಾಲ್ ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಎನ್‍ಐಎ ತನಿಖೆ ಶಿಫಾರಸು ಬಿಜೆಪಿಯ (BJP )ಮತ್ತೊಂದು ಪಿತೂರಿ ಎಂದು ಆಪ್ (AAP) ಆರೋಪಿಸಿದೆ. ಕೇಜ್ರಿವಾಲ್ ಪ್ರಸ್ತುತ ನೂತನ ಮದ್ಯ ನೀತಿ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.