ಸರ್ಕಾರಿ ಶಾಲೆಯ ಕೊಠಡಿಯನ್ನೇ ಸ್ವಿಮ್ಮಿಂಗ್‌ ಪೂಲ್‌ ಮಾಡಿದ್ರು- ಯಾಕೆ ಗೊತ್ತಾ?

Public TV
1 Min Read
UP SCHOOL

ಲಕ್ನೋ: ದೇಶಾದ್ಯಂತ ಹೀಟ್‌ ವೇವ್‌ ಜೋರಾಗಿದೆ. ಬಿಸಿಲಿನ ತಾಪಕ್ಕೆ ಹಲವು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನೂ ಕೆಲವೆಡೆಗಳಲ್ಲಿ ಶಾಲಾ ಮಕ್ಕಳಿಗೆ ರಜೆಯನ್ನು ಘೋಷಿಸಿದ್ದಾರೆ. ಆದರೆ ಉತ್ತರಪ್ರದೇಶದ ಸರ್ಕಾರಿ ಶಾಲೆಯಲ್ಲಿ (Uttarpradesh Govt School) ವಿಭಿನ್ನ ಉಪಾಯವೊಂದನ್ನು ಮಾಡಿದ್ದಾರೆ.

ಹೌದು. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತರಗತಿ ಕೊಠಡಿಯನ್ನು ಈಜುಕೊಳವನ್ನಾಗಿ (Swimming Pool)  ಮಾಡಲಾಗಿದೆ. ಶಾಲಾ ಮಕ್ಕಳು ಸಮವಸ್ತ್ರದಲ್ಲಿಯೇ ನೀರಿನಲ್ಲಿ ಈಜುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಈ ವೀಡಿಯೋವನ್ನು ಬಳಕೆದಾರರೊಬ್ಬರು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, ಬಿರು ಬೇಸಿಗೆಯ ನಡುವೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಈ ಐಡಿಯಾವನ್ನು ಮಾಡಿದ್ದಾರೆ. ಯುಪಿಯ ಕನೌಜ್‌ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿಯನ್ನು ವಿದ್ಯಾರ್ಥಿಗಳಿಗೆ ಈಜುಕೊಳವನ್ನಾಗಿ ಮಾಡಲಾಗಿದೆ. ಶಾಲಾ ಅಧಿಕಾರಿಗಳ ಪ್ರಕಾರ, ಬೆಳೆ ಕೊಯ್ಲು ಮತ್ತು ವಿಪರೀತ ಬಿಸಿಲಿನಿಂದಾಗಿ ಮಕ್ಕಳು ಸಾಲೆಗೆ ಬರಲು ಹಿಂಜರಿಯುತ್ತಾರೆ. ಹೀಗಾಗಿ ವಿದ್ಯಾರ್ಥಿಗಳ ಹಾಜರಾತಿಯನ್ನು ಕಾಪಾಡಿಕೊಳ್ಳಲು ಇದನ್ನು ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಪರ-ವಿರೋಧ ಕಾಮೆಂಟ್‌ಗಳು ಬರುತ್ತಿವೆ. ಕೆಲವರು ಶಾಲಾ ಅಧಿಕಾರಿಗಳ ಕ್ರಮವನ್ನು ಶ್ಲಾಘಿಸಿದರೆ, ಇತರರು ಇದೊಂದು ಜೋಕ್‌ ಎಂದು ಹೇಳಿದ್ದಾರೆ. ಇನ್ನೂ ಕೆಲವರು, ಈ ದೇವತೆಗಳಿಗೆ ಈಜುಕೊಳದ ಅಗತ್ಯವಿದೆ. ಅವರು ಎಷ್ಟು ಸಂತೋಷವಾಗಿದ್ದಾರೆ ನೋಡಿ. ಅಂದ್ರೆ ಮತ್ತೆ ಕೆಲವರು, ಇದೊಂದು ಉತ್ತಮ ಕೆಲಸವಾಗಿದ್ದು, ಶಾಲೆಯಲ್ಲಿ ಈಜುವುದನ್ನು ಕಡ್ಡಾಯಗೊಳಿಸಬೇಕು ಎಂದು ಕಾಮೆಂಟ್‌ ಮಾಡಿದ್ದಾರೆ.

Share This Article