ನಮ್ಮ ವರಿಷ್ಠರು ಸಂಸದೆ ಸುಮಲತಾರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ: ವಿಜಯೇಂದ್ರ

Public TV
2 Min Read
vijayendra

– ಸುಮಲತಾರಿಗೆ ಟಿಕೆಟ್ ಮಿಸ್ ಆದ ಬಗ್ಗೆ ನಾನೇನು ಮಾತಾಡಲ್ಲ ಎಂದ ನಾರಾಯಣಗೌಡ

ಬೆಂಗಳೂರು: ನಮ್ಮ ವರಿಷ್ಠರು ಸಂಸದೆ ಸುಮಲತಾ (Sumalatha) ಅವರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (Vijayendra) ತಿಳಿಸಿದರು.

ಮಂಡ್ಯದಲ್ಲಿ (Mandya) ಜೆಡಿಎಸ್‌ಗೆ ಬೆಂಬಲಿಸುವ ವಿಚಾರವಾಗಿ ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ನಡೆದ ಸಭೆಗೂ ಮುನ್ನ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಿನಲ್ಲಿ ಎದುರಿಸಿ ಎಲ್ಲ ಕ್ಷೇತ್ರ ಗೆಲ್ಲಲು ಹೊರಟಿದ್ದೇವೆ. ನಮ್ಮ ನಾರಾಯಣಗೌಡರು ಬಿಜೆಪಿಗೆ ಬಂದು ಸಚಿವರಾಗಿ ಕೆಲಸ ಮಾಡಿದ್ದಾರೆ. ನಮ್ಮೆಲ್ಲ ಮುಖಂಡರೂ ಜತೆಗೆ ಸೇರಿ ಸಭೆ ಮಾಡಿದ್ದೇವೆ. ಮಂಡ್ಯ ಗೆಲ್ಲಬೇಕು, ಮೋದಿ ಕೈಬಲಪಡಿಸಬೇಕು ಅನ್ನೋದು ನಮ್ಮ ಗುರಿ. ನಾರಾಯಣ ಗೌಡರಾದಿಯಾಗಿ ಎಲ್ಲರೂ ಒಗ್ಗಟ್ಟಾಗಿ ಹೋಗುವ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ಜಾಹೀರಾತಿನಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಭಾವಚಿತ್ರ

narayana gowda

ನಮ್ಮ ವರಿಷ್ಠರು ಸಂಸದೆ ಸುಮಲತಾ ಅವರ ಮೇಲೆ ಅಪಾರ ಗೌರವ ಇಟ್ಕೊಂಡಿದ್ದಾರೆ. ನಾನು ಮೈಸೂರು, ಮಂಡ್ಯ ಪ್ರವಾಸ ಬಳಿಕ ಸುಮಲತಾ ಅವರ ಭೇಟಿ ಮಾಡ್ತೇನೆ. ಅವರನ್ನು ಗೌರವಯುತವಾಗಿ ನಡೆಸಿಕೊಳ್ತೇವೆ ಎಂದರು. ಇದೇ ವೇಳೆ, ನಾರಾಯಣ ಗೌಡರು ಪಕ್ಷ ಬಿಡಲ್ಲ. ಅವರು ಬಿಜೆಪಿಯಲ್ಲೇ ಇರ್ತಾರೆ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ ನಾರಾಯಣಗೌಡ ಮಾತನಾಡಿ, ನನ್ನನ್ನು ಕಾಂಗ್ರೆಸ್‌ನವರು ಕರೆಯುತ್ತಿದ್ದಾರೆ. ಆದರೆ ನಾನು ಪಕ್ಷಕ್ಕೆ ಬರ್ತೇನೆ ಅಂತ ಹೇಳಿಲ್ಲ. ಕಾಂಗ್ರೆಸ್‌ನವರ ಬಳಿ ಚಿಕ್ಕಪುಟ್ಟ ಸಮಸ್ಯೆ ಇದ್ದಾಗ ಹೋಗಲೇಬೇಕಾಗುತ್ತದೆ. ಚೆಲುವರಾಯಸ್ವಾಮಿ ಅವರೂ ಪಕ್ಷಕ್ಕೆ ಕರೆಯುತ್ತಿದ್ದಾರೆ ಎಂದರು. ಅಲ್ಲದೇ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ಇನ್ನೂ ನಾವು ತೀರ್ಮಾನ ಮಾಡಿಲ್ಲ, ಯೋಚನೆ ಮಾಡಿಲ್ಲ. ಜೆಡಿಎಸ್ ಜತೆ ಹೊಂದಿಕೊಂಡು ಹೋಗಲು ಆಗುತ್ತಾ, ಇಲ್ವಾ ಅಂತ ನೋಡಬೇಕು. ನಮ್ಮ ಕುಟುಂಬದ ನಿರ್ಧಾರವೂ ಮುಖ್ಯ ಆಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಅಕ್ರಮ ಬೋರ್‌ವೆಲ್‌ಗಳ ವಿರುದ್ಧ ಜಲಮಂಡಳಿ ಕಟ್ಟುನಿಟ್ಟಿನ ಕ್ರಮ – 20 ಜನರ ವಿರುದ್ಧ ದೂರು

ಸುಮಲತಾ ಅವರಿಗೆ ಟಿಕೆಟ್ ಮಿಸ್ ಆದ ಬಗ್ಗೆ ನಾನು ಏನೂ ಮಾತಾಡಲ್ಲ. ಸುಮಲತಾ ಅವರು ನಮ್ಮ ಸಂಪರ್ಕದಲ್ಲಿ ಇಲ್ಲ. ಅವರು ಟಿಕೆಟ್ ಸಿಕ್ಕಿಲ್ಲ ಅಂತ ನೋವಲ್ಲಿದ್ದಾರೆ. ಅವರಿಗೆ ಟಿಕೆಟ್ ಬೇಕು ಅಂತ ಆರಂಭದಲ್ಲಿ ಹೋರಾಟ ಮಾಡಿದ್ದೇ ನಾವು. ಅವರಿಗೆ ಟಿಕೆಟ್ ಬೇಡಿಕೆ ಸಂದರ್ಭ ಇದ್ದಾಗ ನಾವು ಬೇಕಾಗಿತ್ತು. ಇದೂ ನಮಗೆ ನೋವಿದೆ. ಮಂಡ್ಯದಲ್ಲಿ ಶುಗರ್ ಫ್ಯಾಕ್ಟರಿ ತರುವ ಬಗ್ಗೆ ಹೆಚ್ಚಿನ ಶಕ್ತಿ ತುಂಬಿದವನು ನಾನು. ನನ್ನ ಹೆಸರನ್ನೇ ಅವರು ಹೇಳಲಿಲ್ಲ ಎಂದು ಸಂಸದೆ ಸುಮಲತಾ ನಡೆಗೆ ನಾರಾಯಣ ಗೌಡ ಅಸಮಾಧಾನ ಹೊರಹಾಕಿದರು.

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ಮೈತ್ರಿ ಧರ್ಮ ಪಾಲಿಸಲೇಬೇಕು. ಹೈಕಮಾಂಡ್ ನಿರ್ಣಯಕ್ಕೆ ಗೌರವಿಸಿ ಅಂತ ವಿಜಯೇಂದ್ರ ಹೇಳಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ಮುಂದೆ ಪರಿಹಾರ ಮಾಡ್ತೇವೆ, ಬೆಂಬಲ ಕೊಡಿ ಅಂದಿದ್ದಾರೆ. ನನಗೆ ಇದುವರೆಗೆ ಕಾಂಗ್ರೆಸ್‌ನಿಂದ ಪಕ್ಷ ಸೇರಲು ಆಹ್ವಾನ ಬಂದಿಲ್ಲ. ಜೆಡಿಎಸ್‌ನಿಂದಲೂ ಆಹ್ವಾನ ಬಂದಿಲ್ಲ. ಆಹ್ವಾನ ಬಂದರೆ ಕೂತು ಚರ್ಚೆ ಮಾಡ್ತೇನೆ. ಕುಮಾರಸ್ವಾಮಿ ಅಭ್ಯರ್ಥಿ ಆಗ್ತಿದ್ದಾರೆ, ಅವರು ನಮ್ಮ ನಾಯಕರು. ಮುಂದಿನ ನಿರ್ಧಾರ ಚರ್ಚಿಸಿ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಇಂದು ಮಂಡ್ಯ‌ ಮೈತ್ರಿ ಅಭ್ಯರ್ಥಿ ಘೋಷಣೆ – ಸಕ್ಕರೆ ನಾಡಿನಿಂದ ಹೆಚ್‌ಡಿಕೆ ಸ್ಪರ್ಧೆ ಫಿಕ್ಸ್?

Share This Article