ವಿಮಾನ ಬಿಡಿ , ರೈಲ್ವೇ ಟಿಕೆಟ್‌ ಖರೀದಿಸಲು ಆಗುತ್ತಿಲ್ಲ – ಕಾಂಗ್ರೆಸ್‌ ಖಾತೆ ಫ್ರೀಜ್‌, ಕೇಂದ್ರದ ವಿರುದ್ಧ ರಾಹುಲ್‌ ಕಿಡಿ

Public TV
4 Min Read
Rahul gandhi sonia gandhi mallaikarjun kharge

ನವದೆಹಲಿ: ಫ್ರೀಜ್ ಆಗಿರುವುದು ಕಾಂಗ್ರೆಸ್ (Congress) ಖಾತೆ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯೇ ಫ್ರೀಜ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಗೃಹ ಸಚಿವರು ಉದ್ದೇಶ ಪೂರ್ವಕವಾಗಿ ಇದನ್ನು ಮಾಡುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ (Rahul Gandhi) ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಮಾತನಾಡಿ, ಒಂದು ಮನೆ ಅಥವಾ ವ್ಯವಹಾರದ ಆರ್ಥಿಕ ಮೂಲಗಳನ್ನು ನಿರ್ಬಂಧಿಸಿದರೆ ಏನಾಗಬಹುದು ಎಂದು ನೀವು ಯೋಚಿಸಿ. ಒಂದು ತಿಂಗಳಿಂದ ನಮ್ಮ ಖಾತೆಗಳನ್ನು ನಿರ್ಬಂಧಿಸಿದ್ದು ನಮ್ಮ ಪರಿಸ್ಥಿತಿಯೂ ಹೀಗೆ ಆಗಿದೆ. ನಮಗೆ ಚುನಾವಣಾ ಪ್ರಚಾರ (Election Campaign) ಮಾಡಲು ಸಾಧ್ಯವಾಗುತ್ತಿಲ್ಲ, ಜಾಹೀರಾತು ನೀಡಲು ಸಾಧ್ಯವಾಗುತ್ತಿಲ್ಲ, ವಿಮಾನ ಇರಲಿ ರೈಲ್ವೇ ಮೂಲಕ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಬಿಜೆಪಿ ನಾಯಕರು ವಿಶೇಷ ವಿಮಾನದಲ್ಲಿ ಓಡಾಡುತ್ತಿದ್ದಾರೆ ಎಂದು ದೂರಿದರು.

ಸಾಂವಿಧಾನಿಕ ಸಂಸ್ಥೆಗಳು ಪ್ರಜಾಪ್ರಭುತ್ವ ರಕ್ಷಣೆಗೆ ಇದೆ. ಆದರೆ ಚುನಾವಣಾ ಆಯೋಗ ಈ ಬಗ್ಗೆ ಒಂದು ಮಾತು ಆಡುತ್ತಿಲ್ಲ. ಯಾವ ಸಂಸ್ಥೆಗಳು ಮಾತನಾಡುತ್ತಿಲ್ಲ, ಇದು ಯಾವ ಪ್ರಜಾಪ್ರಭುತ್ವ? ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ, ಇಂದಿಗೂ ನಮ್ಮ ಖಾತೆಗಳು ಫ್ರೀಜ್ ಆಗಿದೆ ನಮ್ಮ ವಿರುದ್ಧ ಪಿತೂರಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿಯ 1 ಪುಟದ ನೋಟಿಸ್‌ಗೆ 170 ಪುಟಗಳ ಉತ್ತರ ನೀಡಿದ್ದೇವೆ: ಎಸ್‌ಟಿ ಸೋಮಶೇಖರ್‌

ಲೋಕಸಭೆ ಚುನಾವಣೆಗೂ (Lok Sabha Election) ಮುನ್ನ ಕಾಂಗ್ರೆಸ್ (Congress) ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಒಂದು ಕಡೆ ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ಹಣ ಪಡೆದಿರುವ ಬಿಜೆಪಿ ಸರ್ಕಾರ ನಮ್ಮ ಖಾತೆಗಳನ್ನು ನಿರ್ಬಂಧಿಸುವ ಕೆಲಸ ಮಾಡಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ.

ದೆಹಲಿಯ ಎಐಸಿಸಿ ಕಚೇರಿಯಲ್ಲಿ ಈ ಸಂಬಂಧ ಜಂಟಿ ಸುದ್ದಿಗೋಷ್ಠಿ ನಡೆಸಲಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಗಾಂಧಿ, ರಾಹುಲ್ ಗಾಂಧಿ, ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಖಚಾಂಚಿ ಅಜೆಯ್ ಮಾಕೇನ್,ಸಂಸದ ಜೈರಾಮ್ ಠಾಕೂರ್ ಭಾಗಿಯಾಗಿದ್ದರು. ಇದನ್ನೂ ಓದಿ: ಬಿಜೆಪಿಯಲ್ಲೇ ಇದ್ದು ಶುದ್ದೀಕರಣದ ಕಡೆ ನನ್ನ ನಡೆ: ಡಿವಿಎಸ್‌ ಘೋಷಣೆ

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಗಾಂಧಿ (Sonia Gandhi) ಆದಾಯ ತೆರಿಗೆ (Income Tax) ಇಲಾಖೆಯಿಂದ ಕಾಂಗ್ರೆಸ್‌ ಖಾತೆಯನ್ನು ನಿರ್ಬಂಧಿಸಿರುವುದು ತುಂಬಾ ಗಂಭೀರ ವಿಷಯವಾಗಿದೆ. ಇದು ಕೇವಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೇಲೆ ಪರಿಣಾಮ ಬೀರುವುದಿಲ್ಲ ಇದು ನಮ್ಮ ಪ್ರಜಾಪ್ರಭುತ್ವದ ಮೇಲೆ ಅತ್ಯಂತ ಮೂಲಭೂತವಾಗಿ ಪರಿಣಾಮ ಬೀರುತ್ತದೆ ಎಂದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಆರ್ಥಿಕವಾಗಿ ಕುಗ್ಗಿಸಲು ಪ್ರಧಾನಿಯವರಿಂದ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಸ್ಥಗಿತಗೊಳಿಸಲಾಗುತ್ತಿದೆ ಮತ್ತು ನಮ್ಮ ಖಾತೆಗಳ ಹಣವನ್ನು ಬಲವಂತವಾಗಿ ತೆಗೆದುಕೊಳ್ಳಲಾಗುತ್ತಿದೆ. ಈ ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ ಸಹ ನಮ್ಮ ಚುನಾವಣಾ ಪ್ರಚಾರದ ಪರಿಣಾಮಕಾರಿತ್ವವನ್ನು ಕಾಪಾಡಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ.

ಒಂದೆಡೆ ಚುನಾವಣಾ ಬಾಂಡ್ ವಿಚಾರವಾಗಿ ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದೆ. ಚುನಾವಣಾ ಬಾಂಡ್‌ಗಳು ಬಿಜೆಪಿಗೆ ಭಾರೀ ಲಾಭ ತಂದುಕೊಟ್ಟಿವೆ. ಮತ್ತೊಂದೆಡೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌‌ನ ಹಣಕಾಸು ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಬಲವಂತವಾಗಿ 115.32 ಕೋಟಿ ಹಿಂತೆಗೆದುಕೊಳ್ಳುವ ಮೂಲಕ ಜನಸಾಮಾನ್ಯರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ದೇಣಿಗೆಯನ್ನು ಬಿಜೆಪಿ ಲೂಟಿ ಮಾಡಿದೆ. ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಆದಾಯ ತೆರಿಗೆ ಪಾವತಿಸುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷದ 11 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಇದರ ಉದ್ದೇಶ ಏನು ಎಂದು ಪ್ರಶ್ನಿಸಿದರು.

ನಮ್ಮ ಖಾತೆಗಳನ್ನು ಫ್ರೀಜ್ ಮಾಡುವ ಸಮಯ 2017-18 ರಲ್ಲಿ 199 ಕೋಟಿ ರೂ. ದೇಣಿಗೆಯನ್ನು ಸ್ವೀಕರಿಸಿದ್ದೇವೆ, ಆದರೆ 7 ವರ್ಷಗಳ ನಂತರ, 13ನೇ ಫೆಬ್ರವರಿ 2024 ರಂದು 210.25 ಕೋಟಿ ರೂ. ದೇಣಿಗೆ ಬಂದಿದೆ. ನಮ್ಮ ಬ್ಯಾಂಕ್ ಖಾತೆಗಳನ್ನು ವಾಸ್ತವಿಕವಾಗಿ ಸೀಲ್ ಮಾಡಲಾಗಿದೆ ಮತ್ತು ನಂತರ 115.32 ಕೋಟಿಯನ್ನು ಬಲವಂತವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ದೂರಿದರು.

ನಮ್ಮ ಸಂಸದರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ದೇಣಿಗೆಯಾಗಿ ನಗದು ರೂಪದಲ್ಲಿ 14.49 ಲಕ್ಷ ರೂ. ನೀಡಿದ್ದು ನಮ್ಮ ಖಾತೆಗಳನ್ನು ಫ್ರೀಜ್ ಮಾಡಲು ಕಾರಣವಾಗಿದೆ. 14.49 ಲಕ್ಷ ರೂ. ನಮ್ಮ ಒಟ್ಟು ದೇಣಿಗೆಯ ಕೇವಲ 0.07% ಆಗಿದೆ. ಮತ್ತು ಶಿಕ್ಷೆ 106% ಆಗಿತ್ತು. ಇದಕ್ಕೆ 10 ಸಾವಿರ ರೂ. ಗರಿಷ್ಠ ದಂಡ ವಿಧಿಸಬಹುದು ಆದರೆ ಖಾತೆಗಳನ್ನು ನಿರ್ಬಂಧಿಸಿದೆ‌. 210 ಕೋಟಿ ರೂ.ಗಳನ್ನು ಸೀಲ್ ಮಾಡಿದ್ದು ಮಾತ್ರವಲ್ಲದೆ ಕಾಂಗ್ರೆಸ್ ತನ್ನ ಠೇವಣಿ ಮೊತ್ತವಾದ 285 ಕೋಟಿ ರೂ.ಗಳನ್ನು ಬಳಸದಂತೆ ತಡೆಹಿಡಿಯಲಾಗಿದೆ ಎಂದು ಕಿಡಿಕಾರಿದರು.

ಚುನಾವಣಾ ಬಾಂಡ್ ಮೂಲಕ ಬಿಜೆಪಿ 56% ಹಣ ಸಂಗ್ರಹಿಸಿದೆ ಕಾಂಗ್ರೆಸ್ 11% ದೇಣಿಗೆ ಪಡೆದಿದೆ. ಕಾಂಗ್ರೆಸ್ ಸೇರಿ ಯಾವುದೇ ವಿಪಕ್ಷ ಬಿಜೆಪಿಗೆ ಸರಿಸಾಟಿಯಾಗಿಲ್ಲ. ಪಾರದರ್ಶಕ ಚುನಾವಣೆ ನಡೆಯಬೇಕಾದರೆ ನಮ್ಮ ಬ್ಯಾಂಕ್ ನಿರ್ಬಂಧ ತೆರವು ಮಾಡಬೇಕು ಎಂದು ಸಂವಿಧಾನಿಕ ಸಂಸ್ಥೆಗಳಿಗೆ ನಾವು ಮನವಿ ಮಾಡುತ್ತೇವೆ. ಬಿಜೆಪಿ ಈ ಹಿಂದೆ ಹೀಗೆ ಇರಲಿಲ್ಲ, ಈಗ ಬೇರೆ ಪಕ್ಷಗಳು ಚುನಾವಣೆ ಎದುರಿಸದಂತೆ ಮಾಡುತ್ತೀವೆ ಜನರಿಗೆ ಇದು ಅರ್ಥವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

 

Share This Article