ಹನುಮಾನ್‌ ಚಾಲೀಸಾ ಕೇಸ್‌ – ಹಲ್ಲೆಗೆ ಒಳಗಾದ ಅಂಗಡಿ ಮಾಲೀಕನನ್ನೇ ವಶಕ್ಕೆ ಪಡೆದ ಪೊಲೀಸರು

Public TV
2 Min Read
‘attacked for playing ‘Hanuman Chalisa shop owner Shobha Karandlaje hindu activists detained Bengaluru

– ಬೆಂಗಳೂರಿನ ನಗರತ್‌ ಪೇಟೆಯಲ್ಲಿ ಬಿಗುವಿನ ವಾತಾವರಣ
– ಶೋಭಾ ಕರಂದ್ಲಾಜೆ ಸೇರಿದಂತೆ ಹಿಂದೂ ಕಾರ್ಯಕರ್ತರು ವಶಕ್ಕೆ

ಬೆಂಗಳೂರು: ನಗರ್ತ ಪೇಟೆಯ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದಕ್ಕೆ ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ಸೇರಿ ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಹನುಮಾನ್‌ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಅಂಗಡಿ ಮಾಲೀಕ ಮುಕೇಶ್‌ (Mukesh) ಮೇಲೆ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಬಂಧನಕ್ಕೆ ಒಳಗಾದವರು ಹಲ್ಲೆ ಮಾಡಿದ ವ್ಯಕ್ತಿಗಳಲ್ಲ. ಹಲ್ಲೆ ಮಾಡಿದ ಯುವಕರನ್ನು ರಕ್ಷಿಸಲು ಬೇರೆ ಯುವಕರನ್ನು ಬಂಧಿಸಿದ್ದನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಸಲು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರು.

ಅಂಗಡಿ ಮಾಲೀಕ ಮುಕೇಶ್‌ (Mukesh) ಅವರು ಪ್ರತಿಭಟನಾ ರ‍್ಯಾಲಿಗೆ ಮುಂದಾಗುತ್ತಿದ್ದಂತೆ ಪೊಲೀಸರು ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಹೇಳಿ ಅವರನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ರಾಜಾಜಿನಗರದ ಶಾಸಕ ಸುರೇಶ್‌ ಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಯೋಗ ಗುರು ಬಾಬಾ ರಾಮ್‌ದೇವ್, ಪತಂಜಲಿ ಮುಖ್ಯಸ್ಥನಿಗೆ ಸುಪ್ರೀಂ ಸಮನ್ಸ್

 

ಮಾಧ್ಯಮಗಳ ಜೊತೆ ಮಾತನಾಡಿದ ಮುಕೇಶ್‌, ನಾವು ಬೆಂಗಳೂರಿನಲ್ಲಿ ಇಲ್ಲ. ಹಿಂದೆ ಕಾಶ್ಮೀರದಲ್ಲಿ ಆದಂತೆ ಇಲ್ಲಿ ಆಗುತ್ತಿದೆ. ನಮ್ಮ ಮೇಲೆ ಇಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಕಿಡಿಕಾರಿದರು. 500ಕ್ಕೂ ಹೆಚ್ಚು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.  ಇದನ್ನೂ ಓದಿ: ಬಿಜೆಪಿ ಅಸಮಾಧಾನಿತರಿಗೆ ಕಾಂಗ್ರೆಸ್ ಗೇಟ್ ಬಂದ್ – ಸಿಎಂ ಹೇಳಿದ ಖಡಕ್‌ ಮಾತು ಏನು?

ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಸ್ಥಳೀಯರು, ಆ ಗ್ಯಾಂಗ್‌ ಮೇಲೆ ಬಹಳಷ್ಟು ದೂರುಗಳು ದಾಖಲಾಗಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಬಂಧನ ಮಾಡಿದವರ ಫೋಟೋ ಬಿಡುಗಡೆ ಮಾಡಿ ಎಂದರೆ ಪೊಲೀಸರು ಇಲ್ಲಿಯವರೆಗೆ ರಿಲೀಸ್‌ ಮಾಡಿಲ್ಲ. ಈ ಕಾರಣಕ್ಕೆ ನಾವೆಲ್ಲ ಇಲ್ಲಿ ಬಂದಿದ್ದೇವೆ. ಎಷ್ಟು ಜನರನ್ನು ಬಂಧಿಸುತ್ತಾರೋ ನಾವು ನೋಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ಸ್ಥಳದದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ್ದಾರೆ.

Share This Article