ಬೆಂಗಳೂರು: ಮಂಡ್ಯದಲ್ಲಿ (Mandya) ಜೆಡಿಎಸ್ (JDS) ಸಮಾವೇಶ ನಡೆಯಲಿದ್ದು, ಸುಮ್ಮನೆ ಕೂರುವುದಕ್ಕೆ ಆಗುತ್ತಾ ಎಂದು ಸಂಸದೆ ಸುಮಲತಾ (Sumalatha) ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು (H.D. Deve Gowda) ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಜೆಪಿ ಭವನದಲ್ಲಿ ಮಾತನಾಡಿದ ಅವರು, ದಿನಾ ಬೆಳಗ್ಗೆ ಎದ್ದರೆ ಮಾಧ್ಯಮಗಳಲ್ಲಿ ಮಂಡ್ಯದ ಅನಾವಶ್ಯಕ ಚರ್ಚೆ ಆಗುತ್ತಿದೆ. ಅವರು ಸುಮ್ಮನೆ ದಿನಾ ಹೇಳಿಕೆ ಕೊಡುತ್ತಿದ್ದಾರೆ. ಅವರು ಹೇಳಿಕೆ ಕೊಡಲು ಸ್ವತಂತ್ರರು. ಯಾರ ಬಗ್ಗೆಯೂ ದೂಷಿಸಲು ಹೋಗುವುದಿಲ್ಲ. ಸೀಟು ಹಂಚಿಕೆ ಬಗ್ಗೆ ಅಮಿತ್ ಶಾ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರವೇಶಕ್ಕೆ ಮಂಜುನಾಥ್ ಸಮ್ಮತಿ ಸೂಚಿಸಲ್ಲ: ಹೆಚ್‌ಡಿಡಿ ಅಚ್ಚರಿಯ ಹೇಳಿಕೆ
ಮಾ.14 ಅಥವಾ 15 ರಂದು ಕೋಲಾರದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಆ ಸಮಾವೇಶದಲ್ಲಿ ಬಿಜೆಪಿ (BJP) ಜೊತೆ ಮೈತ್ರಿ ಸಂದೇಶ ರಾಜ್ಯಕ್ಕೆ ಹೋಗಬೇಕು. ಕೋಲಾರದಲ್ಲಿ ನಮ್ಮ ಶಕ್ತಿ ಇದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಕುಮಾರಸ್ವಾಮಿ (H.D Kumaraswamy) ಹಾಗೂ ಅಮಿತ್ ಶಾ ಯಾವ ತೀರ್ಮಾನ ಮಾಡ್ತಾರೆ ಮಾಡಲಿ. ನಮ್ಮ ಶಕ್ತಿ ಏನಿದೆ ಅನ್ನೋದನ್ನ ತೋರಿಸದೇ ಸುಮ್ಮನೆ ಕೂರುವುದಕ್ಕೆ ಆಗುತ್ತಾ? ಬಿಜೆಪಿ ಜೊತೆ ಮೈತ್ರಿ ಸಂಬಂಧ ಚೆನ್ನಾಗಿ ಉಳಿಸಿಕೊಳ್ಳುತ್ತೇವೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಮೈತ್ರಿ ಸೀಟು ಹಂಚಿಕೆ ಇನ್ನೂ ಅಂತಿಮ ಆಗಿಲ್ಲ. ಬಿಜೆಪಿ ಟಿಕೆಟ್ ವಿಚಾರವಾಗಿ ಕೆಲವು ಕ್ಷೇತ್ರಗಳ ಅಭಿಪ್ರಾಯ ಕೇಳಬಹುದು, ಆಗ ಅಭಿಪ್ರಾಯವನ್ನು ಹೇಳ್ತೀವಿ. ಚುನಾವಣೆ ಅಧಿಸೂಚನೆ ಆದ ಬಳಿಕ ಪ್ರವಾಸದ ಬಗ್ಗೆ ತೀರ್ಮಾನ ಮಾಡ್ತೀವಿ. ಮೋದಿ ಅವರ ಪ್ರವಾಸದ ಪ್ಲ್ಯಾನ್ ಬಹಳ ಸ್ಪೀಡ್ ಇದೆ, 10 ದಿನಗಳಲ್ಲಿ ಹಲವು ಟೂರ್ ಮಾಡ್ತಿದ್ದಾರೆ. ಈಗ ಯಾರನ್ನೂ ಅವರು ಕಟ್ಟಿಕೊಳ್ತಿಲ್ಲ. ಮುಂದೆ ಕರ್ನಾಟಕದಲ್ಲಿ ಜಿಲ್ಲೆಗಳ ಪ್ರವಾಸಕ್ಕೆ ಕರೆದಾಗ ನಾವು ಹೋಗ್ತೀವಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಪ್ರವಾಸದಲ್ಲಿ ಭಾಗವಹಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಾಂಬ್ ಸ್ಫೋಟವಾಗಲು ಎರಡೂ ರಾಷ್ಟ್ರೀಯ ಪಕ್ಷದವರು ಕಾರಣ: ಪ್ರಮೋದ್ ಮುತಾಲಿಕ್