ಇಂಡಿಯಾ ಒಕ್ಕೂಟ ಛಿದ್ರವಾಗಲಿದೆ – ಮಮತಾ ಬಳಿಕ ಮತ್ತಷ್ಟು ನಾಯಕರು ಹೊರಕ್ಕೆ: ಬೊಮ್ಮಾಯಿ

Public TV
2 Min Read
basavaraj bommai

-ಭಕ್ತಿಯ ಕನ್ನಡಕ ಹಾಕಿದರೆ ರಾಮ ಕಾಣಿಸುತ್ತಾನೆ: ಕಾಂಗ್ರೆಸ್‌ಗೆ ಮಾಜಿ ಸಿಎಂ ಟಾಂಗ್‌

ಬೆಂಗಳೂರು: ಕಾಂಗ್ರೆಸ್ ಪಕ್ಷದ ವರ್ತನೆಯಿಂದ ಬೇಸತ್ತು ಇಂಡಿಯಾ ಒಕ್ಕೂಟದ ಪಕ್ಷಗಳು ದೂರವಾಗುತ್ತಿದ್ದು, ಮಮತಾ ಬ್ಯಾನರ್ಜಿ (Mamata Banerjee) ಹೊರಗೆ ಹೋಗಿದ್ದಾರೆ. ಶರದ್‌ ಪವಾರ್, ನಿತೀಶ್ ಕುಮಾರ್ ಕೂಡ ಒಂದು ಹೆಜ್ಜೆ ಹೊರಗಿಟ್ಟಿದ್ದು, ಇಂಡಿಯಾ ಒಕ್ಕೂಟ (I.N.D.I.A Alliance) ಛಿದ್ರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯಪಟ್ಟರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೈತ್ರಿಯಿಂದ ಹೊರಗೆ ಬಂದಿದ್ದಾರೆ. ಶರದ್ ಪವಾರ್ ಕೂಡ ಹೊರ ಬರಲಿದ್ದಾರೆ. ಬಿಹಾರ ಸಿಎಂ ನಿತಿಶ್ ಕುಮಾರ್ ಕೂಡ ಒಂದು ಹೆಜ್ಜೆ ಹೊರಗೆ ಇಟ್ಟಿದ್ದಾರೆ‌. ಇಂಡಿಯಾ ಒಕ್ಕೂಟ ಮುಂದಿನ ದಿನಗಳಲ್ಲಿ ಉಳಿಯುವುದಿಲ್ಲ‌. ಕಾಂಗ್ರೆಸ್‌ನವರ ಕಾಟದಿಂದ ಅವರು ಹೊರಗೆ ಬರುತ್ತಿದ್ದಾರೆ. ಮೋದಿಯವರು 3ನೇ ಬಾರಿಗೆ ಪ್ರಧಾನಿಯಾದ ಮೇಲೆ ಒಕ್ಕೂಟ ಇರುವುದಿಲ್ಲ. ಮಮತಾ ಬ್ಯಾನರ್ಜಿಯವರಿಗೆ ಭ್ರಮ‌ನಿರಸನ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ತಲೆಗೆ ಪೆಟ್ಟು

MAMATA BANERJEE 2

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ
ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಗದೀಶ್ ಶೆಟ್ಟರ್ ಅವರು ಜನಸಂಘದಲ್ಲಿ ಇದ್ದವರು. ಅವರಿಗೆ ಕಾಂಗ್ರೆಸ್‌ನಲ್ಲಿ ಇರಲು ಕಷ್ಟವಾಗಲಿದೆ. ಅವರನ್ನು ಪಕ್ಷಕ್ಕೆ ಕರೆತರಲು ಯಾರ ಮೂಲಕ ಪ್ರಯತ್ನ ನಡೆಸಲಾಗುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲ. ಅವರ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.

ಬಿಹಾರದ ಮಾಜಿ ಸಿಎಂ ದಿ. ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ಎತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದಲಿತರು, ಒಬಿಸಿ ಕಾಂಗ್ರೆಸ್‌ನ ಗುತ್ತಿಗೆಯಲ್ಲ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿದ್ದು ಯಾರು? ಕಾಂಗ್ರೆಸ್ ಯಾಕೆ ಕೊಡಲಿಲ್ಲ? ಪ್ರಣಬ್ ಮುಖರ್ಜಿ, ಅಬ್ದುಲ್ ಕಲಾಂ ಅವರಿಗೆ ನಾವು ಕೊಟ್ಟಿದ್ದೇವೆ. ಯಾರು ಒಳ್ಳೆಯ ಕೆಲಸ ಮಾಡಿದ್ದಾರೆ ಅವರಿಗೆ ಬಿಜೆಪಿ ಗುರುತಿಸಿ ಭಾರತ ರತ್ನ ಗೌರ‌ವ‌ ಕೊಡುತ್ತಿದೆ ಎಂದರು. ಇದನ್ನೂ ಓದಿ: ಕಲಬುರಗಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಕೇಸ್‍ನಲ್ಲಿ ನಾಲ್ವರ ಬಂಧನ: ಪರಮೇಶ್ವರ್

ಭಕ್ತಿಯ ಕನ್ನಡಕ ಹಾಕಿದರೆ ರಾಮ ಕಾಣಿಸುತ್ತಾನೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಮನ ಕುರಿತು ಆಡಿರುವ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ರಾವಣನ ಕನ್ನಡಕ ಹಾಕಿಕೊಂಡು ನೋಡಿದರೆ ರಾಮ ರಾಜ್ಯ ಕಾಣಿಸುವುದಿಲ್ಲ. ಭಕ್ತಿಯ ಕನ್ನಡಕದಿಂದ ನೋಡಿದರೆ ಎಲ್ಲೆಡೆಯೂ ರಾಮ ಕಾಣಿಸುತ್ತಾನೆ ಎಂದು ಹೇಳಿದರು. ಹಾವೇರಿಯಲ್ಲಿ ಬಿಜೆಪಿ ಗೆಲ್ಲುವ ಅವಕಾಶ ಹೆಚ್ಚಿರುವುದರಿಂದ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಬಿ.ಸಿ.ಪಾಟೀಲ್, ಸಂದೀಪ್ ಪಾಟೀಲ್, ಈಶ್ವರಪ್ಪ ಮಗ ಬಹಳ ಜನ ಇದ್ದಾರೆ‌ ಎಂದು ಹೇಳಿದರು.

Share This Article