ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಸಂಗೀತಾ

Public TV
2 Min Read
Bigg Boss 10

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ನಡೆದ ಟಾಸ್ಕ್ ನಲ್ಲಿ ಮನೆ ಮಂದಿ ಮನ ಬಿಚ್ಚಿ ಮಾತನಾಡಿದ್ದಾರೆ. ಮನಸುಗಳ ಜೊತೆ ಮಾತನಾಡಿದ್ದಾರೆ. ಜಗತ್ತಿನೆದುರು ಎಷ್ಟಾದರೂ ಸುಳ್ಳು ಹೇಳಬಹುದು, ತಮ್ಮನ್ನು ತಾವು ಬೇರೆ ಏನೋ ಆಗಿ ಪ್ರೊಜಕ್ಟ್ ಮಾಡಿಕೊಳ್ಳಬಹುದು. ಆಕ್ಟ್ ಮಾಡಬಹುದು, ಯಾಮಾರಿಸಬಹುದು. ಆದರೆ ಆತ್ಮಸಾಕ್ಷಿಯ ಕನ್ನಡಿಯ ಎದುರು ನಿಂತಾಗ ನಮಗೆ ಎದುರಾಗುವುದು ಸುತ್ತಲಿನ ಜಗತ್ತಲ್ಲ. ಅಲ್ಲಿನ ಜೈಕಾರ, ಹೀಗಳಿಕೆಗಳಲ್ಲ. ಹೊಗಳಿಕೆ ತೆಗಳಿಕೆಗಳಲ್ಲ… ಬದಲಾಗಿ ಆತ್ಮಸಾಕ್ಷಿಯ ಕನ್ನಡಿಯ ಎದುರು ಕಾಣಿಸುವುದು ನಮ್ಮ ಚಿತ್ರವೇ. ಅದು ನಮ್ಮೊಳಗಿನ ನಿಜದ ಚಿತ್ರ. ಅಲ್ಲಿ ನಮ್ಮ ಚಿತ್ರದ ಜೊತೆಗೆ ಕಾಣಿಸುವುದು ಹೊರಜಗತ್ತಿನೆದುರು ನಾವು ನಡೆದುಕೊಂಡ ರೀತಿ. ಅದು ಪ್ರಾಮಾಣಿಕವಾಗಿದ್ದರೆ ಹೂವಂತೆ ನೇವರಿಸುತ್ತದೆ. ಅಪ್ರಾಮಾಣಿಕವಾಗಿದ್ದರೆ ಮುಳ್ಳಂತೆ ಚುಚ್ಚುತ್ತದೆ. ಇಂಥದ್ದೊಂದು ಆತ್ಮಸಾಕ್ಷಿಯ ಕನ್ನಡಿ ಈಗ ಬಿಗ್‌ಬಾಸ್‌ ಮನೆಯ ಫಿನಾಲೆ ವಾರದ ಆರು ಸ್ಪರ್ಧಿಗಳ ಎದುರಿಗೆ ಇಡಲಾಗಿದೆ. ಆಗ ಅವರ ರಿಯಾಕ್ಷನ್ ಹೇಗಿತ್ತು ಎಂಬುದು ಬಿಡುಗಡೆ ಮಾಡಿದ ಪ್ರೋಮೊದಲ್ಲಿ ಸೆರೆಯಾಗಿದೆ.

Bigg Boss 3 1

ಫಿನಾಲೆಗೆ ಇನ್ನೆರಡೇ ದಿನ ಬಾಕಿ ಇರುವಾಗ ಬಿಗ್‌ಬಾಸ್ ಸ್ಪರ್ಧಿಗಳು ತಮ್ಮ ದೇಹದೊಟ್ಟಿಗೆ ಮನಸ್ಸನ್ನೂ ಕಾಣಿಸುವ ಆಳೆತ್ತರದ ಕನ್ನಡಿಯೆದುರು ಕೂತಿದ್ದಾರೆ. ವಿನಯ್ ಗೌಡ ತಮ್ಮ ಬಿಂಬವನ್ನು ನೋಡಿಕೊಂಡು, ‘ಹಲೋ ಮಿಸ್ಟರ್ ವಿನಯ್ ಗೌಡ’ ಎಂದು ಕರೆದುಕೊಂಡಿದ್ದಾರೆ. ‘ಈ ಮನೆಯಲ್ಲಿ ಜಾಸ್ತಿ ಮಾತಾಡಿರುವುದು ನಿನ್ ಜೊತೆ. ಯಾರೂ ಜೊತೆಗಿಲ್ಲದಿರುವಾಗ ನೀನು ಇರ್ತೀಯಾ. ನನ್ನನ್ನು ನಾನು ಹುಡುಕಿಕೊಂಡಿದೀನಿ. ಐ ಆಮ್ ವೆರಿ ಪ್ರೌಢ್ ಆಫ್ ಯು’ ಎಂದು ಸಂಗೀತಾ ತಮ್ಮ ಬಿಂಬದ ಎದುರು ಸ್ವಗತವಾಡುತ್ತ ಕಣ್ಣೀರಾಗಿದ್ದಾರೆ.

Bigg Boss 2

ಹೌದು, ಸಂಗೀತಾ (Sangeetha) ಕನ್ನಡ ಮುಂದೆ ಕುಂತಾಗ ತುಸು ಭಾವುಕರೇ ಆಗಿದ್ದರು. ಹಲವಾರು ಸಂಗತಿಗಳನ್ನು ಮೊದಲಿಗೆ ನೆನಪಿಸಿಕೊಂಡರು. ಬಿಗ್ ಬಾಸ್ ಮನೆಯಲ್ಲಿ ತಮ್ಮೊಂದಿಗೆ ಜೊತೆಯಾಗಿ ಇದ್ದವರು ಯಾರು ಎನ್ನುವುದನ್ನು ಮನನ ಮಾಡಿಕೊಂಡರು. ಕೊನೆಗೆ ತಮ್ಮ ಬಿಂಬಿದೊಂದಿಗೆ ತಾವೇ ಮಾತನಾಡಿದರು. ನಕ್ಕರು, ದುಃಖಿಸಿದರು, ತಮ್ಮನ್ನು ತಾವೇ ಹೊಗಳಿಕೊಂಡು ಬೆನ್ನು ಚಪ್ಪರಿಸಿಕೊಂಡರು.

 

‘ನನ್ನನ್ನು ನಾನೇ ನೋಡಿಕೊಂಡಾಗ ಕೆಲವು ಸಂಗತಿಗಳು ಮನಸಲ್ಲಿ ಚುಚ್ಚುತ್ತವೆ’ ಎಂದು ಪ್ರತಾಪ್ ಓಪನ್‌ಅಪ್ ಆಗಿದ್ದಾರೆ. ‘ಫ್ರೆಂಡ್‌ಷಿಪ್‌ನ ಯೂಸ್ ಮಾಡ್ಕೊತಾನೆ ಅಂತಾರೆ’ ಎಂದು ಇಲ್ಲ ಎನ್ನುವಂತೆ ತಲೆಯಾಡಿಸಿದ್ದಾರೆ ಕಾರ್ತಿಕ್. ಇಷ್ಟು ದಿನಗಳಲ್ಲಿ ಕಟ್ಟಿಕೊಂಡ ತಮ್ಮದೇ ವ್ಯಕ್ತಿಚಿತ್ರಗಳನ್ನು ಕನ್ನಡಿಯೆದುರು ಕಂಡ ವಿಶಿಷ್ಟ ಗಳಿಗೆಗೆ ಬಿಗ್‌ಬಾಸ್‌ ಸ್ಪರ್ಧಿಗಳು ಕರಗಿದ್ದಾರೆ. ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ಈ ಭಾವುಕ ಕ್ಷಣಗಳು ನಿಜಕ್ಕೂ ಭಾವುಕರನ್ನಾಗಿ ಮಾಡಿಸುತ್ತವೆ.

Share This Article