ಯಶಸ್ಸಿನ ಶ್ರೇಯಸ್ಸು ಮಹಿ ಅಣ್ಣನಿಗೆ, CSKಗೆ ಸಲ್ಲಬೇಕು – ಚೆನ್ನೈಗೆ ಕ್ರೆಡಿಟ್‌ ಕೊಟ್ಟ ಶಿವಂ ದುಬೆ

Public TV
2 Min Read
Shivam Dube

ಇಂದೋರ್‌: ಅಫ್ಘಾನಿಸ್ತಾನ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಟೀಂ ಇಂಡಿಯಾ ಆಲ್‌ರೌಂಡರ್‌ ಶಿವಂ ದುಬೆ (Shivam Dube), ತನ್ನ ಯಶಸ್ಸನ್ನು ಎಂ.ಎಸ್‌ ಧೋನಿ (MS Dhoni) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಅರ್ಪಿಸಿದ್ದಾರೆ.

ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಶಿವಂ ದುಬೆ, ತಮ್ಮ ವೃತ್ತಿಜೀವನದಲ್ಲಿ ಮೇಲೇಳುವಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ಕೊಡುಗೆ ಅಪಾರ. ನಾಯಕ ಎಂ.ಎಸ್ ಧೋನಿ, ಕೋಚ್ ಸ್ಟೀಫನ್ ಫ್ಲೆಮಿಂಗ್ ಸೇರಿದಂತೆ ಸೂಪರ್ ಕಿಂಗ್ಸ್‌ ತಂಡದ ಹಿರಿಯ ಆಟಗಾರರು ನನ್ನ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ವಿರಾಟ್‌ ಪಾದ ಮುಟ್ಟಿ‌, ಅಪ್ಪಿಕೊಂಡ – ಭದ್ರತೆ ಉಲ್ಲಂಘಿಸಿದ ಕೊಹ್ಲಿ ಅಪ್ಪಟ ಅಭಿಮಾನಿಗೆ ಸಂಕಷ್ಟ

Shivam Dube Yashasvi Jaiswal

ನನಗೆ ಸಲ್ಲುತ್ತಿರುವ ಶ್ರೇಯಸ್ಸು, ಸಿಎಸ್‌ಕೆ ತಂಡ ಮತ್ತು ಮಹಿ ಅಣ್ಣನಿಗೆ ಸಲ್ಲಬೇಕು. ನಾನು ನನ್ನ ಆಟ ಆಡುತಿದ್ದೆ, ಆದರೆ ಸಿಎಸ್‌ಕೆ ನನ್ನ ನಿಜವಾದ ಪ್ರತಿಭೆಯನ್ನು ಹೊರತಂದಿದೆ. ತಂಡವು ನನ್ನಲ್ಲಿ ಆ ಆತ್ಮವಿಶ್ವಾಸ ತುಂಬಿದೆ. ನಾನು ಐಪಿಎಲ್‌ನಲ್ಲಿ ರನ್ ಗಳಿಸಲು ಸಾಧ್ಯವಿದೆ ಎಂಬುದನ್ನು ಅವರು ನನಗೆ ಮನವರಿಕೆ ಮಾಡಿದರು. ಅಲ್ಲದೇ ನನ್ನ ಮೇಲೆ ನಂಬಿಕೆ ಇಟ್ಟರು. ಮೈಕ್‌ ಹಸ್ಸಿ ಮತ್ತು ಫ್ಲೆಮಿಂಗ್ ಅವರಂಥ ಹಿರಿಯರು ನನ್ನ ಮೇಲೆ ನಂಬಿಕೆಯಿಟ್ಟಿದ್ದಾರೆ ಎಂದು ಭಾವುಕರಾಗಿದ್ದಾರೆ.

IND vs AFG

ನಾನು ಸಿಎಸ್‌ಕೆ ತಂಡದಲ್ಲಿದ್ದಾಗ, ಮಹಿ ಅಣ್ಣ ನನಗೆ ಚೆನ್ನಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. ಆದರೆ ಸ್ಮಾರ್ಟ್‌ ಆಗಿ ಆಡಲು ಅವರು ಹೇಳಿದರು. ಹೀಗಾಗಿ ನಾನು ನನ್ನ ಮಿತಿಗಳನ್ನು ನೋಡಿಕೊಂಡು ಇನ್ನೂ ಉತ್ತಮವಾಗಿ ಆಡಲು ಏನು ಮಾಡಬಹುದು ಎಂಬುದರ ಮೇಲೆ ಗಮನ ಹರಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಕ್ಸರ್‌, ಬೌಂಡರಿ ಸುರಿಮಳೆ – ಯಶಸ್ವಿ, ದುಬೆ ಸ್ಫೋಟಕ ಫಿಫ್ಟಿ; ಅಫ್ಘಾನ್‌ ವಿರುದ್ಧ ಭಾರತಕ್ಕೆ ಸರಣಿ ಜಯ

ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ:
ಯುವ ಆಲ್‌ರೌಂಡರ್‌ ಶಿವಂ ದುಬೆ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಹಿರಿಯ ಆಟಗಾರರ ಗಮನ ಸೆಳೆದಿದ್ದಾರೆ. ಅಫ್ಘಾನ್‌ ವಿರುದ್ಧ ಮೊದಲ ಪಂದ್ಯದಲ್ಲಿ 40 ಎಸೆತಗಳಲ್ಲಿ 2 ಸಿಕ್ಸರ್‌, 5 ಬೌಂಡರಿಗಳೊಂದಿಗೆ 60 ರನ್‌ ಚಚ್ಚಿದ ದುಬೆ, 2ನೇ ಪಂದ್ಯದಲ್ಲಿ 32 ಎಸೆತಗಳಲ್ಲಿ ಸ್ಫೋಟಕ 63 ರನ್‌ (4 ಸಿಕ್ಸರ್‌, 5 ಬೌಂಡರಿ) ಬಾರಿಸಿ ಮಿಂಚಿದ್ದಾರೆ. ಅಲ್ಲದೇ ಎರಡೂ ಪಂದ್ಯಗಳಲ್ಲಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದ್ದಾರೆ. ಜನವರಿ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3ನೇ ಪಂದ್ಯ ನಡೆಯಲಿದ್ದು, ಅಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಭಾರತಕ್ಕೆ ಸರಣಿ ಜಯ: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿರುವ ಭಾರತ, ತವರಿನಲ್ಲೇ ವೈಟ್‌ವಾಶ್‌ ಮಾಡುವ ಗುರಿ ಹೊಂದಿದೆ. ಭಾನುವಾರ ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡವು ಗುಲ್ಬದೀನ್ ನಯೀಬ್ ಅವರ ಅರ್ಧಶತಕದ ನೆರವಿನಿಂದ 20 ಓವರ್​​​ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ್ದ ಭಾರತ ಯಶಸ್ವಿ ಜೈಸ್ವಾಲ್‌, ಶಿವಂ ದುಬೆ ಸ್ಫೋಟಕ ಅರ್ಧಶತಕಗಳ ನೆರವಿನಿಂದ 15.4 ಓವರ್‌ಗಳಲ್ಲೇ 173 ರನ್‌ ಗಳಿಸಿ ಗೆಲುವು ಸಾಧಿಸಿತು.

Share This Article