ಬಿಜೆಪಿಗೆ ಹಿಜಬ್ ಅಸ್ತ್ರ, ಕಾಂಗ್ರೆಸ್‍ನಲ್ಲಿ ಸ್ಟ್ಯಾಂಡ್ ಗೊಂದಲ

Public TV
2 Min Read
Siddaramaiah 10

– ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವದ ವಿರುದ್ಧ ಸೆಟೆದು ನಿಲ್ಲುತ್ತಾ ಕಾಂಗ್ರೆಸ್?

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಹಿಜಬ್ (Hijab) ಸದ್ದು ಭಾರೀ ಸದ್ದು ಮಾಡುತ್ತಿದ್ದು, ಹಿಜಬ್ ನಿಷೇಧ ಆದೇಶದ ವಾಪಸ್ ಬಗ್ಗೆ ಮಾತಾಡಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ತೀರ್ಮಾನ ಆಗಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಈ ನಡುವೆ ಕಾಂಗ್ರೆಸ್ (Congress) ಸ್ಟ್ಯಾಂಡ್ ಬಗ್ಗೆ ಗೊಂದಲ ಉಂಟಾಗಿದ್ದು, ಕೆಪಿಸಿಸಿ ಅಧ್ಯಕ್ಷರು ತುಟಿಬಿಚ್ಚಿಲ್ಲ. ಈ ನಡುವೆ ಬಿಜೆಪಿ ಹಿಜಬ್ ಅಸ್ತ್ರ ಹಿಡಿದು ಸಿಎಂ ಮೇಲೆ ಮುಗಿಬಿದ್ದಿದೆ.

ವಿಧಾನಸಭೆಗೆ ಸಾಫ್ಟ್ ಹಿಂದುತ್ವ, ಲೋಕಸಭೆಗೆ ನೇರಾ ನೇರ ಫೈಟ್, ಈ ಕಾಂಗ್ರೆಸ್ ಲೆಕ್ಕಾಚಾರ ಏನು? ಎಂಬ ಬಗ್ಗೆ ಚರ್ಚೆ ಕೂಡ ಶುರುವಾಗಿದೆ. ಹಿಜಬ್ ವಿಚಾರದಲ್ಲಿ ಕಾಂಗ್ರೆಸ್ ಸ್ಟ್ಯಾಂಡ್ ಬಿಜೆಪಿಗೆ ಅಸ್ತ್ರವಾಗಿದ್ದು, ಸಿಎಂ ಹೇಳಿಕೆಯಿಂದ ಕೆಪಿಸಿಸಿ ಅಧ್ಯಕ್ಷರಿಗೆ ತಳಮಳ ಶುರುವಾಗಿದೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆ ವೇಳೆ ನಮ್ಮದು ಬದುಕಿನ ಜೊತೆ ಹೋರಾಟ, ಬಿಜೆಪಿಯವರದ್ದು ಭಾವನೆಗಳ ಜೊತೆ ಹೋರಾಟ ಎಂದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಕಡೇ ತನಕವೂ ಎಚ್ಚರ ತಪ್ಪಿರಲಿಲ್ಲ. ಚುನಾವಣೆ ಮುಗಿಯುವ ತನಕ ಸಾಫ್ಟ್ ಹಿಂದುತ್ವದಲ್ಲೇ ಕೆಪಿಸಿಸಿ ಅಧ್ಯಕ್ಷರ ತಂತ್ರಗಾರಿಕೆ ನಡೆದಿತ್ತು. ಈಗ ಮುಸ್ಲಿಮರಿಗೆ ಸಂಪತ್ತು ಹಂಚಿಕೆ ವಿವಾದದ ಬಳಿಕ ಹಿಜಬ್ ವಾಪಸ್ ಎಂಬ ಸಿಎಂ ಘೋಷಣೆ ಗೊಂದಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕುಮಾರಸ್ವಾಮಿ ಪಕ್ಷ ಉಳಿಸಿಕೊಳ್ಳಲು ಹೇಳಿಕೆ ನೀಡುತ್ತಿದ್ದಾರೆ ಡಿ.ಕೆ.ಸುರೇಶ್

Siddaramaiah And DK Shivakumar

ಶುಕ್ರವಾರ ಮೈಸೂರಿನಲ್ಲಿ ಹಿಜಬ್ ನಿಷೇಧವನ್ನು ವಾಪಾಸ್ ಪಡೆಯಲು ಹೇಳಿದ್ದೇನೆ ಎಂದಿದ್ದ ಸಿಎಂ, ಈಗ ಸರ್ಕಾರ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಇದರ ಜೊತೆಗೆ ಸಿಎಂ ಮಾತನ್ನ ಸಮರ್ಥನೆ ಮಾಡಿಕೊಂಡಿರುವ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಎರಡರಿಂದ ಮೂರು ದಿನದಲ್ಲಿ ಆದೇಶ ಆಗಲಿದೆ ಎಂದು ಗೊಂದಲ ಹುಟ್ಟು ಹಾಕಿದ್ದಾರೆ. ಈ ಬಗ್ಗೆ ಇಲ್ಲಿಯ ತನಕ ಕೆಪಿಸಿಸಿ ಅಧ್ಯಕ್ಷರು ಮಾತ್ರ ತುಟಿ ಬಿಚ್ಚಿಲ್ಲ.

ಸಿಎಂ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧ ಮುಗಿಬಿದ್ದಿದೆ. ಹಿಂದುತ್ವ ಅಸ್ತ್ರವನ್ನ ಹಿಡಿದು ಲೋಕಸಭೆ ಸಮರಕ್ಕೆ ಇಳಿಯಲು ಸಜ್ಜಾದಂತೆ ಕಾಣ್ತಿದೆ. ಸಿದ್ದರಾಮಯ್ಯ ತುಷ್ಟೀಕರಣದ ಪರಾಕಾಷ್ಟೆ ಇದು. ಹಿಜಬ್ ಎಲ್ಲಾ ಕಡೆ ನಿಷೇಧ ಮಾಡಿಲ್ಲ, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಇರುವ ಕಡೆ ನಿಷೇಧ ಆಗಿದೆ. ಹಾಗಾಗಿ ಶಾಲೆಗಳಲ್ಲಿ ಹಿಜಬ್ ಬೇಡ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಅನೇಕರು ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದ್ದಾರೆ.

ಒಟ್ಟಾರೆ ಸಿಎಂ ಸಿದ್ದರಾಮಯ್ಯ ಅವರ ಮುಸ್ಲಿಂ ಸಮುದಾಯಕ್ಕೆ ಸಂಪತ್ತಿನ ಸಮಾನ ಹಂಚಿಕೆ, ಹಿಜಬ್ ನಿಷೇಧ ವಾಪಸ್ ಎರಡು ಹೇಳಿಕೆಗಳ ಬಗ್ಗೆ ಕೆಪಿಸಿಸಿಯಿಂದ ಸ್ಪಷ್ಟ ನಿಲುವು ಇರದಿದ್ದರೂ ಸಿಎಂ ಹೇಳಿಕೆ ಸಮರ್ಥನೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಬೆಳವಣಿಗೆಯಿಂದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್ ನಿಲುವು ಹಿಂದುತ್ವದ ವಿರುದ್ಧ ಸೆಟೆದು ನಿಲ್ಲಲಿದೆಯೇ ಎಂಬ ಕುತೂಹಲ ಮನೆ ಮಾಡಿದೆ. ಇದನ್ನೂ ಓದಿ: ಹಿಜಬ್ ವಿಚಾರದಲ್ಲಿ ಸರ್ಕಾರದ ಆದೇಶ 2, 3 ದಿನದಲ್ಲಿ ಹೊರಬೀಳುತ್ತೆ: ಹೆಚ್.ಕೆ. ಪಾಟೀಲ್

Share This Article