ನವದೆಹಲಿ: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ (Rama Mandira Ayodhya) ಉದ್ಘಾಟನಾ ಕಾರ್ಯಕ್ರಮವಿದೆ. ಈ ಹಿನ್ನೆಲೆಯಲ್ಲಿ ಗಣ್ಯಾತೀಗಣ್ಯರಿಗೆ ಟ್ರಸ್ಟ್ ಆಹ್ವಾನಗಳನ್ನು ನೀಡುತ್ತಿದೆ. ಅಂತೆಯೇ ಇದೀಗ ಕಾಂಗ್ರೆಸ್ ನಾಯಕರಿಗೂ ಆಮಂತ್ರಣ ಪತ್ರಿಕೆ ನೀಡಿದ್ದು, ಅದಕ್ಕೆ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಆಮಂತ್ರಣ ಪತ್ರಿಕೆಯನ್ನು (Invitation) ಕಳುಹಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi) ಹಾಗೂ ಪಕ್ಷದ ನಾಯಕ ಅಧೀರ್ ರಂಜನ್ (Adhir Ranjan Chowdhury) ಅವರು ಈ ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಅಡ್ವಾಣಿ, ಜೋಶಿಗೆ ಆಹ್ವಾನ
ಈ ಸಂಬಂಧ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರೋ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪಕ್ಷದ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಪಕ್ಷದ ನಿಲುವು ಏನೆಂದು ನಿಮಗೆ ತಿಳಿಯಲಿದೆ. ನಾವು ಭಾಗವಹಿಸುತ್ತೇವೆಯೋ ಇಲ್ಲವೋ ಎಂಬುದು ಜನವರಿ 22 ರಂದು ನಿಮಗೆ ಗೊತ್ತಾಗಲಿದೆ. ಅವರು ನಮಗೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅವರ ಆಹ್ವಾನಕ್ಕೆ ನಾವೂ ಆಭಾರಿಯಾಗಿದ್ದೇವೆ, ಮುಂದೆ ಕಾದು ನೋಡೋಣ ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಹಾಗೂ ಹೆಚ್.ಡಿ ದೇವೇಗೌಡರಿಗೂ (HD Devegowda) ಈಗಾಗಲೇ ಆಹ್ವಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಪಕ್ಷದ ನಾಯಕರಿಗೂ ಆಹ್ವಾನ ಪತ್ರಿಕೆಯನ್ನು ಟ್ರಸ್ಟ್ ಕಳುಹಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.