ಪತ್ನಿ ಮೇಲೆ ವಿಪರೀತ ಸಂಶಯ – ಚಾಕುವಿನಿಂದ 5 ಬಾರಿ ಇರಿದು, ನೇಣಿಗೆ ಶರಣಾದ ಪತಿ

Public TV
2 Min Read
Madikeri Piriyapatna

ಮಡಿಕೇರಿ: ಪತ್ನಿ ಮೇಲೆ ವಿಪರೀತ ಸಂಶಯ ಪಡುತ್ತಿದ್ದ ಗಂಡನೊಬ್ಬ ಆಕೆ ತವರು ಮನೆಗೆ ಹೋಗಿದ್ದಾಗ ಅಲ್ಲಿ ಆಕೆಗೆ ಚಾಕುವಿನಿಂದ 5 ಬಾರಿ ಇರಿದು, ಬಳಿಕ ತನ್ನ ಮನೆಗೆ ಪರಾರಿಯಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ (Piriyapatna) ತಾಲೂಕಿನ ಮುತ್ತಿನಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ.

ಕಳೆದ ಒಂದೂವರೆ ವರ್ಷದ ಹಿಂದೆ ಮುತ್ತಿನ ಮುಳುಸೋಗೆ ಗ್ರಾಮದ ಶ್ವೇತಾ ಎಂಬಾಕೆಯನ್ನು ಗ್ರಾಮದ ಪ್ರಸನ್ನ (36) ಎಂಬಾತ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ. ಆದರೆ ದಿನಕಳೆದಂತೆ ತನ್ನ ಪತ್ನಿ ಮೇಲೆ ಪ್ರಸನ್ನ ವಿಪರೀತ ಸಂಶಯ ಪಟ್ಟು ಆಕೆಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ.

COUPLE arguments in a relationship

ಈ ಬಗ್ಗೆ ಹಲವಾರು ಬಾರಿ ಮೈಸೂರು ಹಾಗೂ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ, ದಂಪತಿಯ ರಾಜಿ ಸಂಧಾನ ಮಾಡಿ ಕಳುಹಿಸಿದ್ದರು. ಆದರೆ ಪ್ರಸನ್ನ ಮಾತ್ರ ಪತ್ನಿ ಮೇಲೆ ಅನುಮಾನ ಪಡುವುದು ಬಿಟ್ಟಿರಲಿಲ್ಲ. ಆಕೆಯ ತಂಗಿಯ ಮೇಲೆ ವ್ಯಾಮೋಹವೂ ಹೆಚ್ಚಾಗಿ, ಆಕೆಯೊಂದಿಗೆ ಮದುವೆ ಮಾಡಿಸು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಪತಿಯ ಕಿರುಕುಳದಿಂದ ಬೇಸತ್ತು ಶ್ವೇತಾ ಕಳೆದ ಒಂದು ತಿಂಗಳ ಹಿಂದೆ ತವರು ಮನೆಗೆ ಬಂದು ಅಲ್ಲಿಂದಲೇ ಕೆಲಸ ಮಾಡುತ್ತಿದ್ದಳು. ಗುರುವಾರ ಬೆಳಗ್ಗೆ ತವರು ಮನೆಯಿಂದ ಕೆಲಸಕ್ಕೆ ಹೊರಟಿದ್ದ ವೇಳೆ ಹೊರಗೆ ಕಾದು ಕುಳಿತಿದ್ದ ಪ್ರಸನ್ನ ಆಕೆಗೆ ಚಾಕು ತೋರಿಸಿ ತಮ್ಮ ಮನೆಗೆ ಹೋಗೋಣ ಎಂದು ಕರೆದಿದ್ದಾನೆ. ಆದರೆ ಮನೆಯಲ್ಲಿ ಯಾರೂ ಇಲ್ಲ, ಅವರೆಲ್ಲಾ ಬಂದ ಮೇಲೆ ತಮ್ಮ ಮನೆಗೆ ಹೋಗೋಣ ಎಂದು ಕೇಳಿಕೊಂಡಿದ್ದಾಳೆ. ಇದನ್ನೂ ಓದಿ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಇಬ್ಬರು ಸವಾರರು ಸ್ಥಳದಲ್ಲೇ ಸಾವು

POLICE JEEP 1

ಹೇಳದ ಮಾತು ಕೇಳದೇ ಹೋಗಿದ್ದಕ್ಕೆ ಪ್ರಸನ್ನ ಜಗಳವಾಡಿದ್ದಾನೆ. ಹೀಗೆ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಪ್ರಸನ್ನ ಪತ್ನಿ ಶ್ವೇತಾ ಹೊಟ್ಟೆಗೆ ಹಾಗೂ ಬೆನ್ನಿಗೆ ಚಾಕುವಿನಿಂದ 5 ಬಾರಿ ಇರಿದಿದ್ದಾನೆ. ಪತ್ನಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರೂ ಆಕೆಯನ್ನು ಅಲ್ಲೇ ಬಿಟ್ಟು ತನ್ನ ಮನೆಗೆ ಓಡಿ ಹೋಗಿದ್ದಾನೆ. ನಂತರ ಅಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇತ್ತ ಶ್ವೇತಾಳ ಚೀರಾಟ ಕೇಳಿ ಅಲ್ಲಿಗೆ ಧಾವಿಸಿದ ಗ್ರಾಮಸ್ಥರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದುದನ್ನು ಕಂಡು ತಕ್ಷಣ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಗಾಯಗಳಾಗಿರುವ ಶ್ವೇತಾಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಸನ್ನ ಮೃತದೇಹವನ್ನು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಅಂತರ್ಜಾತಿ ಪ್ರೇಮ ವಿವಾಹವಾಗಿದ್ದಕ್ಕೆ ಯುವಕನ ಕಡೆಯವರ ಆಟೋಗೆ ಬೆಂಕಿ ಹಚ್ಚಿದ ಹುಡುಗಿ ಕಡೆಯವರು

Share This Article