ದುಬೈ: 2025ರಲ್ಲಿ ನಡೆಯಬೇಕಿದ್ದ ಐಸಿಸಿ ಚಾಂಪಿಯನ್ಸ್ ಕ್ರಿಕೆಟ್ ಟೂರ್ನಿ (ICC Champions Trophy 2025) ಪಾಕಿಸ್ತಾನದಲ್ಲಿ (Pakistan) ನಡೆಯುವುದು ಅನುಮಾನ.
ಹೌದು. ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಲು ಪಾಕಿಸ್ತಾನ ಉತ್ಸುಕವಾಗಿದ್ದರೂ ಐಸಿಸಿ (ICC) ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ದುಬೈಯಲ್ಲಿ (Dubai) ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಐಸಿಸಿ ಪಾಕಿಸ್ತಾನದಲ್ಲಿ ಪಂದ್ಯ ಆಯೋಜಿಸಲು ಅನುಮತಿ ನೀಡದೇ ಇರಲು ಕಾರಣ ಬಿಸಿಸಿಐ. ಮುಂಬೈ ದಾಳಿಯ ನಂತರ ರಾಜಕೀಯ ಮತ್ತು ಆಟಗಾರರ ಭದ್ರತಾ ಕಾರಣದಿಂದ ಟೀಂ ಇಂಡಿಯಾವನ್ನು (Team India) ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಸರ್ಕಾರ (Indian Government) ಇಲ್ಲಿಯವರೆಗೆ ಬಿಸಿಸಿಐಗೆ (BCCI) ಅನುಮತಿ ನೀಡಿಲ್ಲ. ಹೀಗಾಗಿ 2025ರಲ್ಲೂ ಟೀಂ ಇಂಡಿಯಾವನ್ನು ಪಾಕ್‌ಗೆ ಕಳುಹಿಸಲು ಭಾರತ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಭಾರೀ ಕಡಿಮೆ.
ಪಾಕಿಸ್ತಾನ ಮುಂದೆ ಸದ್ಯ ಎರಡು ಆಯ್ಕೆ ಇದೆ. ಒಂದನೇಯದ್ದು ಭಾರತದ ಪಂದ್ಯಗಳನ್ನು ಮಾತ್ರ ದುಬೈಯಲ್ಲಿ ನಡೆಸುವುದು ಎರಡನೇಯದ್ದು ಸಂಪೂರ್ಣ ಟೂರ್ನಿಯನ್ನೇ ದುಬೈಗೆ ಸ್ಥಳಾಂತರ ಮಾಡುವುದು. ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯದೇ ಇದರೆ ಆದ ನಷ್ಟಕ್ಕೆ ಐಸಿಸಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಪರಿಹಾರ ನೀಡಬೇಕಾಗುತ್ತದೆ. ಇದನ್ನೂ ಓದಿ: RCB ಸೇರಿದ ದೈತ್ಯ ಆಸೀಸ್ ಆಟಗಾರ – ರಾಯಲ್ ಚಾಲೆಂಜರ್ಸ್ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?
2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಪಾಕಿಸ್ತಾನವೇ ಆಯೋಜಿಸಿದ್ದರೂ ಭಾರತದ ಪಂದ್ಯಗಳು ಹೈಬ್ರಿಡ್ ಮಾದರಿಯಲ್ಲಿ ನಡೆದಿತ್ತು. ಫೈನಲ್ ಸೇರಿದಂತೆ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿತ್ತು.
ಭಾರತ ಏಕೆ ಪಾಕ್‌ಗೆ ಹೋಗ್ತಿಲ್ಲ?
ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.