ನಾಲ್ವರ ಕೊಂದ ಆರೋಪಿ ಮೇಲೆ ಜನಾಕ್ರೋಶ; ರಸ್ತೆ ತಡೆದು ಸಾರ್ವಜನಿಕರ ಪ್ರತಿಭಟನೆ, ಲಾಠಿ ಪ್ರಹಾರ – ಉಡುಪಿ ಉದ್ವಿಗ್ನ

Public TV
2 Min Read
udupi murder case 1

ಉಡುಪಿ: ನಾಲ್ವರನ್ನು ಕೊಂದ ಪಾಪಿ ಆರೋಪಿ ಇದ್ದ ಪೊಲೀಸ್ ಜೀಪ್‌ಗೆ ಸಾರ್ವಜನಿಕರ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಆಕ್ರೋಶಿತರನ್ನು ಚದುರಿಸಲು ಪೊಲೀಸರ ಲಘು ಲಾಠಿ ಪ್ರಹಾರ ನಡೆಸಿದರು. ಆರೋಪಿಯನ್ನ ನಮಗೆ ಕೊಡಿ ಎಂಬ ಆಕ್ರೋಶದ ಮಾತು ಪ್ರತಿಭಟನಾಕಾರರಿಂದ ಕೇಳಿಬಂತು. ಈ ಎಲ್ಲಾ ದೃಶ್ಯಗಳಿಂದಾಗಿ ಉಡುಪಿಯ ತೃಪ್ತಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಉಡುಪಿಯ ತೃಪ್ತಿ ನಗರದಲ್ಲಿ ನಾಲ್ವರನ್ನು ಕೊಂದ ಆರೋಪಿಯ ತನಿಖೆ ಆಗುತ್ತಿದೆ. 14 ದಿನ ಪೊಲೀಸ್ ಕಸ್ಟಡಿಗೆ ಪಡೆದು ಮಲ್ಪೆ ಠಾಣಾ ಪೊಲೀಸರು ಆರೋಪಿ ಪ್ರವೀಣ್ ಚೌಗುಲೆಯನ್ನು ವಿಚಾರಣೆ ಮತ್ತು ಮಹಜರು ಪ್ರಕ್ರಿಯೆಗೆ ಒಳಪಡಿಸಿದ್ದಾರೆ. ದಿನಪೂರ್ತಿ ಮಾಹಿತಿ ಸಂಗ್ರಹಿಸಿ ಕೃತ್ಯ ನಡೆದ ತೃಪ್ತಿ ಲೇಔಟ್‌ಗೆ ಆರೋಪಿಯನ್ನು ಪೊಲೀಸರು ಇಂದು (ಗುರುವಾರ) ಸಂಜೆ ಕರೆ ತಂದಿದ್ದರು.

Udupi Murder Case

ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಆರೋಪಿಯನ್ನ ಕೃತ್ಯ ನಡೆದ ಮನೆಯಲ್ಲಿ ಮಹಜರು ನಡೆಸಲಾಯಿತು. ಆಗಲೇ ಧಿಕ್ಕಾರದ ಕೂಗು ಜಮಾಯಿಸಿದ ಜನರಿಂದ ಕೇಳಿಬಂತು. ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಸಂಜೆ 4:55 ಕ್ಕೆ ನೇಜಾರು ತೃಪ್ತಿ ನಗರದ ಕೃತ್ಯ ನಡೆದ ಮನೆಗೆ ಪೊಲೀಸರು ಕರೆತಂದರು. ಅಷ್ಟೊತ್ತಿಗಾಗಲೇ ನೂರಾರು ಮಂದಿ ಸ್ಥಳದಲ್ಲಿ ಜವಾಯಿಸಿದ್ದರು. ಆರೋಪಿಯನ್ನ ಕರೆ ತಂದಿದ್ದಾರೆ ಎಂಬ ಮಾಹಿತಿ ತಿಳಿದ ಸಾರ್ವಜನಿಕರು ಆಕ್ರೋಶ ಮತ್ತು ಕುತೂಹಲ ಹೆಚ್ಚಿ ಮತ್ತಷ್ಟು ಸಂಖ್ಯೆಯಲ್ಲಿ ಜಮಾಯಿಸಿದರು.

ಪೊಲೀಸರು ಬ್ಯಾರಿಕೇಡ್‌ಗಳನ್ನ ಹಾಕಿ ಜನರನ್ನ ತಡೆಯಲು ಯತ್ನಿಸಿದರೂ ಆಕ್ರೋಶಿತರ ಕೋಪ ಎಷ್ಟಿತ್ತೆಂದರೆ, ಆರೋಪಿ ಇದ್ದ ವಾಹನಕ್ಕೆ ಮುತ್ತಿಗೆ ಹಾಕಲು ಜನ ನುಗ್ಗಿದರು. ತಡೆದ ಪೊಲೀಸರು ಜನರನ್ನು ತಳ್ಳಿ, ಲಘು ಲಾಠಿ ಪ್ರಹಾರ ಮಾಡಿ ಜನರನ್ನ ಚದುರಿಸಿದರು. ಜನಸಂದಣಿ ನಡುವೆ ಸಿಲುಕಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಸ್ಥಳದಿಂದ ಕರೆದೊಯ್ದರು. ಈ ಸಂದರ್ಭ ಹತ್ತಾರು ಜನರಿಗೆ ಲಾಟಿಯೇಟು ಬಿದ್ದಿದೆ. ಜನರ ಆಕ್ರೋಶ ಪೊಲೀಸರ ಕಡೆ ತರುಗಿತು.

udupi murder case1

ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದ ಮುಂದುವರೆಯಿತು. ರಸ್ತೆಯಲ್ಲಿ ಕೂತು ಜನ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಎಸ್‌ಪಿ, ಡಿಸಿ ಬರಬೇಕು ಎಂದು ಒತ್ತಾಯಿಸಿದರು. ಮುಸ್ಲಿಂ ಸಮುದಾಯದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ಆರೋಪಿಯನ್ನು ಚುಚ್ಚಿ ಚುಚ್ಚಿ ಸಾಯಿಸಿ ಎಂದು ಆಕ್ರೋಶ ಹೊರಹಾಕಿದರು.

ಸುಮಾರು ಅರ್ಧ ಗಂಟೆಗಳ ಕಾಲ ಸಂತೆಕಟ್ಟೆ-ಕೆಮ್ಮಣ್ಣು-ಮಲ್ಪೆ ರಸ್ತೆಯಲ್ಲಿ ಯಾವುದೇ ವಾಹನಗಳು ಓಡಾಡಲಿಲ್ಲ. ವಾಹನಗಳನ್ನ ಪ್ರತಿಭಟನಾಕಾರರು ವಾಪಸ್ ಕಳುಹಿಸಿದರು. ಮಲ್ಪೆ ಎಸ್ಐ ಗುರುನಾಥ ಹಾದಿಮನಿ ಪ್ರತಿಭಟನೆಕಾರರ ಮನವೊಲಿಕೆ ಮಾಡಿದರು. ಮುಸಲ್ಮಾನ ಸಮುದಾಯದ ಮುಖಂಡರು ಪರಿಸ್ಥಿತಿಯನ್ನು ವಿವರಿಸಿದರು. ಆನಂತರ ಸಾರ್ವಜನಿಕರು ರಸ್ತೆ ತಡೆಯನ್ನು ವಾಪಸ್ ತೆಗೆದುಕೊಂಡು. ಸುಗಮ ವಾಹನ ಸಂಚಾರಕ್ಕೆ ಅವಕಾಶ ಕೊಟ್ಟರು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಜನರನ್ನ ಸ್ಥಳದಿಂದ ಚದುರಿಸಲಾಗಿದೆ. ಆರೋಪಿ ಬಗೆಗಿನ ಆಕ್ರೋಶ ಜನರಲ್ಲಿ ಮಡುಗಟ್ಟಿದೆ.

Share This Article