ಎರಡು ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ರಂಜಿಸಿರುವ ನಟಿ ದೀಪಿಕಾ ದಾಸ್ (Deepika Das) ಯಾಕೋ ಬಿಗ್ ಬಾಸ್ ಮೇಲೆ (Bigg Boss Kannada) ಕೋಪಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ ಹತ್ತರ ಕಂಟೆಸ್ಟೆಂಟ್ (Contestant) ಬಗ್ಗೆ ಅವರು ಗರಂ ಆಗಿದ್ದಾರೆ. ಜೊತೆಗೆ ತಮ್ಮ ಮನದಾಳದ ಅಭಿಪ್ರಾಯವನ್ನೂ ಅವರು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಎರಡೆರಡು ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗಲು ಅವಕಾಶ ಸಿಗುವುದು ತುಂಬಾ ವಿರಳ. ಅಂಥದ್ದೊಂದು ಅವಕಾಶವನ್ನು ದೀಪಿಕಾ ಪಡೆದುಕೊಂಡಿದ್ದರು. ಎರಡೂ ಬಾರಿಯೂ ಅವರು ಉತ್ತಮ ಕಂಟೆಸ್ಟೆಂಟ್ ಆಗಿಯೇ ಜನಪ್ರಿಯತೆ ಪಡೆದರು. ಹಾಗಾಗಿ ಈ ಬಾರಿಯ ಕಂಟೆಸ್ಟೆಂಟ್ ಬಗ್ಗೆ ಅವರು ಕೋಪವಿದೆ. ಅಲ್ಲದೇ, ದೊಡ್ಮನೆಯ ಸದಸ್ಯರು ಆಡುತ್ತಿರುವ ಟಾಸ್ಕ್ ಬಗ್ಗೆ ಅವರಿಗೆ ಅಸಮಾಧಾನವಿದೆ. ಹಾಗಾಗಿಯೇ ಅವರು ಸೋಷಿಯಲ್ ಮೀಡಿಯಾದಲ್ಲಿ ತಮಗೆ ಅನಿಸಿದ್ದನ್ನು ಬರೆದುಕೊಂಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳಿಂದ ಇಂತಹ ಹುಚ್ಚುತನ, ಸಂವೇದನಾರಹಿತ ನಡೆ ಮತ್ತು ಅಸಹಿಷ್ಣುತೆಯ ವರ್ತನೆಯನ್ನು ಸಹಿಸಿಕೊಳ್ಳಲು ಅಸಾಧ್ಯ. ನಾನು ಮಾಜಿ ಸ್ಪರ್ಧಿ ಆಗಿರುವುದರಿಂದ ಯಾರನ್ನು ದೂಷಿಸಬೇಕು ಎಂದು ಅರ್ಥವಾಗುತ್ತಿಲ್ಲ. ಬಿಗ್ ಬಾಸ್ ಅವರನ್ನು ದೂಷಿಸಬೇಕಾ? ಸ್ಪರ್ಧಿಗಳನ್ನಾ ಅಥವಾ ಈ ಕಾರ್ಯಕ್ರಮ ನೋಡುವ ಪ್ರೇಕ್ಷಕರನ್ನಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಯಾರನ್ನೂ ವೈಯಕ್ತಿಕ ಗುರಿಯಾಗಿಸೋದು ಸ್ಪರ್ಧೆ ಆಗಲ್ಲ. ನನ್ನ ಪ್ರಕಾರ ಆಟವು ಆಟದಂತೆಯೇ ಇರಬೇಕು ಎಂದು ಅವರು ಸಲಹೆ ಕೂಡ ನೀಡಿದ್ದಾರೆ.
ನಿನ್ನೆಯ ಬೈಗುಳದ ಟಾಸ್ಕ್ ಬಗ್ಗೆ ಸಾಕಷ್ಟು ಜನರು ಅಸಮಾಧಾನ ತೋಡಿಕೊಂಡಿದ್ದಾರೆ. ಅದೊಂದು ರೀತಿಯ ಪರ್ಸನಲ್ ಅಟ್ಯಾಕ್ ಆಗಿತ್ತು ಎಂದು ದೂರಿದ್ದಾರೆ. ಸ್ನೇಹಿತ್ ಆಡಿದ ಮಾತಿಗೆ ಸ್ವತಃ ತನಿಷಾ ಕಣ್ಣೀರಿಟ್ಟಿದ್ದಾರೆ. ಕಾರ್ತಿಕ್ ಮತ್ತು ಸಂಗೀತಾಗೆ ಸ್ನೇಹಿತ್ ಮತ್ತು ನಮ್ರತಾ ಆಡಿದ ಮಾತಿಗೆ ಅನೇಕರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವುಗಳ ಬಗ್ಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ ಕೂಡ ಬಂದಿದೆ. ಹಾಗಾಗಿ ನಟಿ ದೀಪಿಕಾ ದಾಸ್ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಸುದೀಪ್ ಯಾವ ರೀತಿಯಲ್ಲಿ ಕಾಮೆಂಟ್ ಮಾಡುತ್ತಾರೆ ಎನ್ನುವುದನ್ನು ಕಾದನೋಡಬೇಕು.