ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆ: ಪೂರ್ಣಿಮಾ ಶ್ರೀನಿವಾಸ್

Public TV
4 Min Read
Poornima Srinivas

ಬೆಂಗಳೂರು: ಬಿಜೆಪಿ (BJP) ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Poornima Srinivas) ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ (Congress) ಸೇರ್ಪಡೆಗೊಂಡಿದ್ದಾರೆ. ನಾನು ಕಾಂಗ್ರೆಸ್‍ನ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರಿದ್ದೇನೆ ಎಂದಿದ್ದಾರೆ.

ಬಹಳ ದಿನಗಳಿಂದ ನನ್ನನ್ನ ಅಧ್ಯಕ್ಷರು ಸಂಪರ್ಕ ಮಾಡಿದ್ದರು. ಈಗಲೂ ಕೃಷ್ಣಪ್ಪ ಕುಟುಂಬಕ್ಕೆ ಅವರು ಗೌರವ ಕೊಡುತ್ತಾರೆ. ನನ್ನನ್ನ ಯಾವಾಗಲು ಕಾಂಗ್ರೆಸ್ ಕೃಷ್ಣಪ್ಪನವರ ಮಗಳು ಎಂದು ಪರಿಚಯ ಮಾಡಿಕೊಡುತ್ತಿದ್ದರು. ಕಾರಣಾಂತರಗಳಿಂದ ಕಹಿ ಘಟನೆಯಿಂದ ನಮ್ಮ ತಂದೆ ಕೃಷ್ಣಪ್ಪನವರು ಪಕ್ಷ ಬಿಟ್ಟಿದ್ದರು. ಎಲ್ಲರ ಅಪೇಕ್ಷೆಯಂತೆ ಈ ದಿನ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿದ್ದೇನೆ. ಹಿಂದುಳಿದ ವರ್ಗಗಳ ಸಮಾಜದವರಿಗೆ ಅವಕಾಶ ಸಿಗುವುದು ಕಷ್ಟ. ಸಿಎಂ, ಡಿಸಿಎಂ ಅವರು ಹಿಂದುಳಿದ ವರ್ಗಗಳ ಕೆಳ ಸಮುದಾಯಕ್ಕೆ ಹೆಚ್ಚು ಅವಕಾಶ ಕೊಡಬೇಕು. ಕಾಂಗ್ರೆಸ್‍ನ ರಕ್ತ ನಿನ್ನಲ್ಲಿ ಇದೆ ಎಂದು ಅನೇಕರು ನನಗೆ ಹೇಳುತ್ತಿದ್ದರು. ಈಗ ಕಾಂಗ್ರೆಸ್‍ನಲ್ಲಿ ಪ್ರಯಾಣ ಶುರುವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ನೂರಕ್ಕೆ ನೂರರಷ್ಟು ತಪ್ಪಿತಸ್ಥ, ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ಲಿ- ಈಶ್ವರಪ್ಪ ಆಗ್ರಹ

Poornima

ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಮಾತನಾಡಿ, ನನಗೆ ಕೆಎಎಸ್ ಇಂಟರ್ ವ್ಯೂ ಬಂದಾಗ ನಾನು ನನ್ನ ಮಾವ ಹೋದಾಗ ವೀರಪ್ಪ ಮೊಯ್ಲಿ ಸಹಕಾರ ಮಾಡಿ ಎಂದು ಫೋನ್ ಮಾಡಿದ್ದರು. ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಕೊಟ್ಟವರು ವೀರಪ್ಪ ಮೊಯ್ಲಿ. ನಾನು ಕಾಂಗ್ರೆಸ್‍ಗೆ ಬಂದಿದ್ದೇನೆ. ನಮ್ಮದು ದೊಡ್ಡ ಬೇಡಿಕೆ ಏನು ಇಲ್ಲ. ಹಟ್ಟಿಗಳಲ್ಲಿ ವಾಸ ಮಾಡೋ ಸಮುದಾಯಗಳನ್ನ ಎಸ್‍ಟಿ ಸಮುದಾಯಕ್ಕೆ ಸೇರಿಸಬೇಕು. ಈಗಾಗಲೇ ಈ ವಿಚಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಹೋಗಿದೆ ಎಂದಿದ್ದಾರೆ.

ಅಲೆಮಾರಿ ಸಮುದಾಯದ ಕುಲಶಾಸ್ತ್ರ ಅಧ್ಯಯನ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಅಲೆಮಾರಿ ಸಮುದಾಯಗಳು (ಎಂಬಿಸಿಗಳನ್ನ) ಪ್ರತ್ಯೇಕ ಮಾಡಿ ರಾಜಕೀಯ ಮೀಸಲಾತಿ ಕೊಡಬೇಕು. ತೆಲಂಗಾಣ ಮಾದರಿಯಲ್ಲಿ ವಿಶೇಷ ರಾಜಕೀಯ ಮೀಸಲಾತಿ ರಾಜ್ಯದಲ್ಲಿ ಕೊಡಬೇಕು. ಕಾಡುಗೊಲ್ಲರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆಗೆ ಕೇಂದ್ರಕ್ಕೆ ಸರ್ಕಾರ ಶಿಫಾರಸ್ಸು ಮಾಡಬೇಕು ಎಂದು ಅವರು ಸಿಎಂ ಹಾಗೂ ಡಿಸಿಎಂಗೆ ಬೇಡಿಕೆ ಇಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೂರ್ಣಿಮಾ ಹಾಗೂ ಶ್ರೀನಿವಾಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಇವರ ಜೊತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್‍ಗೆ ಸೇರಿದ್ದಾರೆ. ಎಲ್ಲರನ್ನೂ ಬರಮಾಡಿಕೊಳ್ಳುತ್ತೇವೆ. 2013ರಲ್ಲಿ ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಲು ನಾನೇ ಕಾರಣ. ಈ ಬಗ್ಗೆ ಪೂರ್ಣಿಮಾ ಶ್ರೀನಿವಾಸ್ ನನ್ನ ಮೇಲೆ ಬೇಸರ ಮಾಡಿಕೊಂಡಿಲ್ಲ. ಪಕ್ಷದ್ರೋಹದ ಕೆಲಸ ಮಾಡಿದ ಬೈರತಿ ಬಸವರಾಜ್‍ಗೆ ಟಿಕೆಟ್ ಕೊಡಿಸುವ ಸಲುವಾಗಿ ಕೃಷ್ಣಪ್ಪಗೆ ಟಿಕೆಟ್ ತಪ್ಪಿತು. ಕೃಷ್ಣಪ್ಪ ಅವರು ಪಕ್ಷ ಕಟ್ಟಿದವರು. ಟಿಕೆಟ್ ಸಿಗದೇ ಇದ್ದಾಗ ಅವರು ಬಹಳ ನೊಂದುಕೊಂಡಿದ್ದರು. ಪಕ್ಷವನ್ನು ತೊರೆದು ಹೋಗಿದ್ದರು. ಪೂರ್ಣಿಮಾ ಹಿರಿಯೂರಿನಿಂದ ಬಿಜೆಪಿ ಟಿಕೆಟ್ ಪಡೆದು ಶಾಸಕಿ ಆದರು. ಆದರೂ ಅವರಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿತ್ತು. ಪೂರ್ಣಿಮಾ ಪತಿ ಶ್ರೀನಿವಾಸ್ ಒಲ್ಲದ ಮನಸ್ಸಿನಿಂದಲೇ ಬಿಜೆಪಿಯಲ್ಲಿದ್ದರು. ಪೂರ್ಣಿಮಾ ಕೂಡ ಒಲ್ಲದ ಮನಸ್ಸಿನಿಂದ ಬಿಜೆಪಿಯಲ್ಲಿ ಇದ್ದರು. ಕಾಂಗ್ರೆಸ್ ಪಕ್ಷ ಧರ್ಮದ ಆಧಾರದ ಮೇಲೆ ಒಡೆಯುವ ಪಕ್ಷ ಅಲ್ಲ. ಬಿಜೆಪಿ ಜಾತಿ ವ್ಯವಸ್ಥೆ ಮೇಲೆ ನಂಬಿಕೆ ಇರುವ ಪಕ್ಷ. ಪೂರ್ಣಿಮಾ ಒತ್ತಾಯದ ಮೇರೆಗೆ ಅವರ ಪತಿ ಬಿಜೆಪಿಯಲ್ಲಿ ಇದ್ದರು ಅನ್ನಿಸುತ್ತದೆ. ಕೃಷ್ಣ ಜಯಂತಿಯಲ್ಲಿ ಶ್ರೀನಿವಾಸ್ ಬಿಜೆಪಿ ವಿರೋಧಿ ಭಾಷಣ ಮಾಡಿದ್ದರು ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಕೃಷ್ಣಪ್ಪ ಅವರು ಬೆಂಗಳೂರು ಜಿಲ್ಲೆಯಲ್ಲಿ ನಾವೆಲ್ಲ ಒಟ್ಟಾಗಿ ಸೇರಿ ಜೊತೆಗೆ ರಾಜಕೀಯ ಮಾಡಿಕೊಂಡು ಬಂದವರು. ವೀರಪ್ಪ ಮೊಯ್ಲಿ ಅವರ ಬೆಳವಣಿಗೆ ಪುಷ್ಠಿಕೊಟ್ಟಿದ್ದರು. ವೀರಪ್ಪ ಮೊಯ್ಲಿ ಕೃಷ್ಣಪ್ಪ ಅವರಿಗೆ ಟಿಕೆಟ್ ಕೊಟ್ಟಿದ್ದರು. ನಮ್ಮದೇ ಆದ ತಪ್ಪುಗಳಿಂದ ಕೊಂಡಿ ತಪ್ಪಿ ಹೋಗಿತ್ತು. ಇವತ್ತು ಅ ಕೊಂಡಿ ಮತ್ತೆ ಬೆಸುಗೆ ಆಗಿದೆ. ಕೃಷ್ಣಪ್ಪರ ಮಗಳು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ ಪಕ್ಷಕ್ಕೆ ಸೇರ್ಪಡೆಯಾಗ್ತಿದ್ದಾರೆ. ಅನೇಕ ದಿನಗಳಿಂದ ಇಬ್ಬರಿಗೂ ಗಾಳ ಹಾಕ್ತಿದ್ದೆ. ಆದರೆ ಕಚ್ಚಿರಲಿಲ್ಲ. ಈಗ ಗಾಳಕ್ಕೆ ಇಬ್ಬರು ಬಿದ್ದಿದ್ದಾರೆ ಅಂದಿದ್ದಾರೆ.

ಕಾಂಗ್ರೆಸ್ ಸೇರ್ಪಡೆಯಾಗುವವರ ದೊಡ್ಡ ಪಟ್ಟಿ ಇದೆ. ಈಗ ಪಟ್ಟಿ ಹೇಳುವುದಿಲ್ಲ. ಒಬ್ಬೊಬ್ಬರಾಗಿ ಸೇರ್ಪಡೆ ಮಾಡಿಕೊಳ್ತೀವಿ. ಈ ಸೇರ್ಪಡೆ ಕಾರ್ಯಕ್ರಮ ಇಷ್ಟಕ್ಕೆ ನಿಲ್ಲಬಾರದು. ಬ್ಲಾಕ್ ಹಾಗೂ ಗ್ರಾಮ ಮಟ್ಟದಲ್ಲಿ ಪಕ್ಷ ಸೇರ್ಪಡೆ ಆಗಲಿ. ಪಕ್ಷ ಸೇರ್ಪಡೆ ಮಾಡಿ ಅದರ ಫೋಟೋ ಹಾಗೂ ವೀಡಿಯೋ ಕಚೇರಿಗೆ ಕಳುಹಿಸಿ ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಮೇಲೆ ಎರಡು ರಾಜ್ಯ ಗೆದ್ದಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಇದರಿಂದ ಐ.ಎನ್.ಡಿ.ಐ.ಎ ಕೂಟ ರಚನೆ ಆಗಿದೆ. ಇದಕ್ಕೆ ಎಲ್ಲರೂ ಬೆಂಬಲವಾಗಿ ನಿಂತಿದ್ದೀರಾ. ಬಿಜೆಪಿ-ಜೆಡಿಎಸ್‍ನ ಅನೇಕ ಜನ ಕಾಂಗ್ರೆಸ್ ಸೇರ್ಪಡೆಗೆ ಮುಂದೆ ಬಂದಿದ್ದಾರೆ. ಮುಂದೆ ಒಬ್ಬೊಬ್ಬರನ್ನೇ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವ ಸುಧಾಕರ್, ಕಾರ್ಯಾಧ್ಯಕ್ಷ ಚಂದ್ರಪ್ಪ, ಸಲೀಂ ಅಹಮದ್, ಎಂಎಲ್‍ಸಿ ನಾಗರಾಜ್ ಯಾದವ್, ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ, ಎಂಎಲ್‍ಸಿ ನಜೀರ್ ಅಹಮದ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ಡಿಕೆಶಿ ಬೆಳಗಾವಿ ಮಾತ್ರವಲ್ಲ ರಾಜ್ಯ, ರಾಷ್ಟ್ರ ರಾಜಕಾರಣವನ್ನೂ ಮಾಡ್ತಾರೆ: ಅಶೋಕ್ ಪಟ್ಟಣ

Web Stories

Share This Article