ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸಿ: ಕರ್ನಾಟಕಕ್ಕೆ ಸೂಚನೆ

Public TV
2 Min Read
KRS MANDYA

ನವದೆಹಲಿ: ನಿತ್ಯ 3,000 ಸಾವಿರ ಕ್ಯೂಸೆಕ್ ನೀರನ್ನು (Cauvery River Water) ಹದಿನೈದು ದಿನಗಳ ಕಾಲ ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕರ್ನಾಟಕಕ್ಕೆ ಆದೇಶಿಸಿದೆ. ಇಂದು ಸಭೆ ನಡೆಸಿದ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ ಹಲ್ದಾರ್ ಕಾವೇರಿ ನೀರು ಹರಿಸಲು ನೀರು ನಿಯಂತ್ರಣ ಸಮಿತಿ (CWRC) ಮಾಡಿದ್ದ ಶಿಫಾರಸ್ಸು ಪಾಲಿಸಲು ಸೂಚಿಸಿದ್ದಾರೆ.

ಸಭೆಯಲ್ಲಿ ಭಾಗಿಯಾಗಿದ್ದ ತಮಿಳುನಾಡು (Tamil Nadu) ಅಧಿಕಾರಿಗಳು ನಿತ್ಯ 16,000 ಕ್ಯೂಸೆಕ್ ನೀರನ್ನು ಹದಿನೈದು ದಿನಗಳ ಕಾಲ ಹರಿಸಲು ಮನವಿ ಮಾಡಿದರು. ಇದರ ಜೊತೆಗೆ ಬಾಕಿ ಉಳಿಸಿಕೊಂಡಿರುವ ಸುಮಾರು 19 ಟಿಎಂಸಿ ನೀರು ಹರಿಸಲು ನಿರ್ದೇಶಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಅ.31 ರವರೆಗೆ ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಿ – ಕರ್ನಾಟಕಕ್ಕೆ CWRC ಸೂಚನೆ

ಇದಕ್ಕೆ ಪ್ರತಿಯಾಗಿ ವಾದಿಸಿದ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ತಮಿಳುನಾಡಿನಲ್ಲಿ ಉತ್ತಮ ನೀರಿನ ಪ್ರಮಾಣ ಇದ್ದು ಅನುಕೂಲ ಸ್ಥಿತಿಯಲ್ಲಿದೆ. ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಇದು ತಮಿಳುನಾಡಿಗೆ ಅನುಕೂಲಕರವಾಗಿದೆ. ಕರ್ನಾಟಕವು ಇಲ್ಲಿಯವರೆಗೆ ಬಿಳಿಗುಂಡ್ಲುವಿಗೆ ನೀರು ಬಿಡುವ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ಧಾರವನ್ನು ಪಾಲಿಸುತ್ತಾ ಬಂದಿದೆ. ಪ್ರಸ್ತುತ ಜಲಾಶಯಗಳಲ್ಲಿನ ಹರಿವಿನ ಕೊರತೆಯಿಂದ ಮತ್ತಷ್ಟು ನೀರನ್ನು ಹರಿಸಲು ಕರ್ನಾಟಕಕ್ಕೆ ಸಾಧ್ಯವಾಗುತ್ತಿಲ್ಲ ಎಂದು ವಾದಿಸಿದರು.

ಸ್ಟೇಟ್ ಆಫ್ ಅರಿರೋನಾ ಹಾಗೂ ಸ್ಟೇಟ್ ಆಫ್ ಕ್ಯಾಲಿಫೋರ್ನಿಯಾ ಪ್ರಕರಣದಲ್ಲಿ ಅಮೇರಿಕ ಸುಪ್ರೀಂಕೋರ್ಟ್ ಕೊರತೆಗಳ ಅನುಪಾತ ಹಂಚಿಕೆಯು ಸಮಾನವೆನಿಸುವುದಿಲ್ಲ ಎಂಬ ಅಂಶವನ್ನು ಉಲ್ಲೇಖಿಸುವ ಮೂಲಕ ತಮಿಳುನಾಡಿನ ಮನವಿಯನ್ನು ತಿರಸ್ಕರಿಸಲು ಮನವಿ ಮಾಡಲಾಯಿತು. ಅಂತಿಮವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸ್ಸು ಮಾಡಿದಂತೆ ಅ.16 ರಿಂದ ಅ.31 ರವರೆಗೆ ಬಿಳಿಗುಂಡ್ಲುವಿನಲ್ಲಿ ಕರ್ನಾಟಕವು 3,000 ಕ್ಯೂಸೆಕ್ ನೀರಿನ ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಾಧಿಕಾರ ಆದೇಶಿಸಿದೆ.

ಸಭೆಯ ಬಳಿಕ ಮಾತನಾಡಿದ ರಾಕೇಶ್ ಸಿಂಗ್, ನಾವು ನೀರು ಹರಿಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದೆವು. ಪ್ರಾಧಿಕಾರ ನೀರು ಹರಿಸಲು ಸೂಚಿಸಿದೆ. ಅ.16 ರಿಂದ ಆದೇಶ ಜಾರಿಗೆ ಬರಲಿದೆ. ಅದಕ್ಕೂ ಮುನ್ನ ಹಳೆಯ ಆದೇಶ ಪಾಲಿಸಿ, ಮುಂದಿನ ಆದೇಶ ಪಾಲಿಸಲು ಸಾಧ್ಯವಿಲ್ಲ ಮರು ಪರಿಶೀಲನೆಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಮೇಕೆದಾಟು ಆಣೆಕಟ್ಟು ಬಗ್ಗೆ ಕರ್ನಾಟಕ ಪ್ರಸ್ತಾಪ ಮಾಡಿದ್ದು, ಸಭೆಯಲ್ಲಿ ಇದರ ಚರ್ಚೆ ಮಾಡಲು ಒತ್ತಾಯಿಸಲಾಗಿದೆ. ಪ್ರತ್ಯೇಕ ಸಭೆ ಕರೆದು ಸುಪ್ರೀಂಕೋರ್ಟ್ ಮೌಕಿಕ ಆದೇಶದಂತೆ ಚರ್ಚೆ ಮಾಡಬೇಕು. ಇಲ್ಲದಿದ್ದರೇ ನಾವು ಸುಪ್ರೀಂಕೋರ್ಟ್‍ನಲ್ಲಿ ಮತ್ತೆ ಈ ವಿಚಾರ ಪ್ರಸ್ತಾಪಿಸುವುದಾಗಿ ಹೇಳಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಷಾ ದಸರಾ ಹಿಂದೂ ಸಂಸ್ಕೃತಿಗೆ ಅಪಮಾನಿಸಲು ಷಡ್ಯಂತ್ರ: ಶೋಭಾ ಕರಂದ್ಲಾಜೆ

Web Stories

Share This Article