‘ಬಿಗ್ ಬಾಸ್’ ಎಂಟ್ರಿಗೆ ಪ್ರದೀಪ್ ಈಶ್ವರ್ ಪಡೆದ ಹಣವೆಷ್ಟು? ಭರ್ಜರಿ ಲೆಕ್ಕಾಚಾರ

Public TV
2 Min Read
pradeep eshwar 1

ಬಿಗ್ ಬಾಸ್ (Bigg Boss Kannada) ಮನೆಗೆ ಹೋಗಲು ಕಂಟೆಸ್ಟೆಂಟ್ ಎಷ್ಟೆಲ್ಲ ಸಂಭಾವನೆ ಪಡೆಯುತ್ತಾರೆ ಎನ್ನುವ ವಿಚಾರ ಪ್ರತಿ ಸೀಸನ್ ನಲ್ಲೂ ಚರ್ಚೆ ಆಗುತ್ತದೆ. ಅದರಲ್ಲೂ ಹೆಸರಾಂತ ಸಿಲೆಬ್ರಟಿಗಳು ದೊಡ್ಮನೆಗೆ ಕಾಲಿಡುತ್ತಾರೆ ಎಂದಾಗ ಭಾರೀ ಸಂಭಾವನೆಯನ್ನು ಪಡೆದಿರುತ್ತಾರೆ ಎನ್ನುವುದು ಗುಟ್ಟಿನ ಸಂಗತಿ ಏನೂ ಅಲ್ಲ. ದಿನವೊಂದಕ್ಕೆ ಸಾವಿರ ಲೆಕ್ಕದಲ್ಲಿ ಸಂಭಾವನೆ ಪಡೆಯುವವರ ಸಂಖ್ಯೆ ತೀರಾ ಕಡಿಮೆ ಅಂತಾನೇ ಅಂದಾಜಿಸಬಹುದು. ಹಾಗಾಗಿ ಬಿಗ್ ಬಾಸ್ ಮನೆಗೆ ಹೋಗುವವರು ಲಕ್ಷದಲ್ಲೇ ಹಣ ಎಣಿಸುತ್ತಾರೆ. ಹಾಗಾಗಿ ಒಂದೇ ಒಂದು ದಿನ ಬಿಗ್ ಬಾಸ್ ಮನೆಗೆ ಹೋಗಿದ್ದ ಶಾಸಕ ಪ್ರದೀಪ್ ಈಶ್ವರ್ ಪಡೆದ ಸಂಭಾವನೆ ಎಷ್ಟು ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ.

pradeep eshwar 2

ಹೌದು, ಚಿಕ್ಕಬಳ್ಳಾಪುರ ಕ್ಷೇತ್ರ ಶಾಸಕ, ಜನಪ್ರಿಯ ಮಾತುಗಾರ ಪ್ರದೀಪ್ ಈಶ್ವರ್ (Pradeep Eshwar) ನಿನ್ನೆಯಷ್ಟೇ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದರು. ‍ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆಯೇ ಮನೆಗೆ ವಾತಾವರಣವೇ ಬದಲಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜೊತೆ ಪ್ರದೀಪ್ ಈಶ್ವರ್ ಕುಣಿದು ಕುಪ್ಪಳಿಸಿದರೆ, ಇತ್ತ ಬಿಗ್ ಬಾಸ್ ಮನೆ ಹೊರಗೆ ಅವರ ಎಂಟ್ರಿ ರಾಜಕೀಯ ವಲಯದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿತ್ತು. ಒಬ್ಬ ಜನಪ್ರತಿನಿಧಿಯಾಗಿ ಹೀಗೆ ಶೋನಲ್ಲಿ ಭಾಗಿ ಆಗಬಹುದಾ ಎಂದು ಹಲವರು ಪ್ರಶ್ನೆ ಕೇಳಿದರು. ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿದ್ದು, ಒಂದೊಳ್ಳೆ ಕಾರ್ಯಕ್ಕೆ ಎನ್ನುವಂತೆ ಬಿಂಬಿಸಲಾಯಿತು. ಈ ಶೋನಿಂದ ಬರುವ ಹಣವನ್ನು ಅವರು ಅನಾಥರಿಗೆ ನೀಡಲಿದ್ದಾರೆ ಎಂದೂ ಸುದ್ದಿ ಆಯಿತು.

PRADEEP ESHWAR

ಬಿಗ್ ಬಾಸ್ ಶೋನಿಂದ ಬರುವ ಹಣವನ್ನು ಅಪ್ಪ ಅಮ್ಮ ಇಲ್ಲದ ಮಕ್ಕಳಿಗೆ ಪ್ರದೀಪ್ ಈಶ್ವರ್ ಹಂಚುತ್ತಾರೆ ಎಂದು ಸುದ್ದಿ ಆಗುತ್ತಿದ್ದಂತೆಯೇ ಪ್ರದೀಪ್ ಎಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರೆ? ಮತ್ತು ಅವರು ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಪ್ರದೀಪ್ ಈಶ್ವರ್ ಭಾರೀ ಹೆಸರೇ ಮಾಡಿರುವುದರಿಂದ ದೊಡ್ಡ ಮೊತ್ತಕ್ಕೆ ಅವರು ಬಿಗ್ ಬಾಸ್ ಮನೆಗೆ ಹೋಗಲು ಒಪ್ಪಿರುತ್ತಾರೆ ಎಂದು ಅವರ ಆಪ್ತವಲಯ ಹೇಳಿಕೊಂಡಿತ್ತು. ಆ ಮೊತ್ತ ಎಷ್ಟು ಎಂದು ಯಾರೂ ಹೇಳಿರಲಿಲ್ಲ.

ಪ್ರದೀಪ್ ಈಶ್ವರ್ ಪಡೆದುಕೊಂಡ ಸಂಭಾವನೆ ಬಗ್ಗೆ ಇದೀಗ ಒಂದಷ್ಟು ಮಾಹಿತಿಗಳು ಹರಿದಾಡುತ್ತಿವೆ. ಒಂದು ಪೈಸೆಯನ್ನೂ ತೆಗೆದುಕೊಳ್ಳದೇ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ವಾಹಿನಿ ಜೊತೆಗೆ ಮಾತುಕತೆ ಆಗಿದ್ದೇ ಕೇವಲ ಮೂರೇ ಮೂರು ತಾಸು ಅಲ್ಲಿ ಇರುವುದಕ್ಕೆ. ಹಾಗಾಗಿ ಅವರು ಯಾವುದೇ ಸಂಭಾವನೆಯನ್ನು ಪಡೆದಿಲ್ಲ ಎನ್ನುವುದು ಸಿಕ್ಕಿರುವ ಮಾಹಿತಿ.

Web Stories

Share This Article