ಇಸ್ಲಾಮಾಬಾದ್/ಕೊಲಂಬೊ: ಏಕದಿನ ಏಷ್ಯಾಕಪ್ (Asia Cup 2023) ಕ್ರಿಕೆಟ್ ಟೂರ್ನಿಯ ಸೂಪರ್-4 ಹಂತ ಆರಂಭವಾಗಿದ್ದು, ಪಾಕಿಸ್ತಾನ ಮೊದಲ ಜಯದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾನುವಾರ ಮತ್ತೊಮ್ಮೆ ಟೀಂ ಇಂಡಿಯಾ (Team India) ವಿರುದ್ಧ ಸೂಪರ್-4 ಹಂತದಲ್ಲಿ ಕಾದಾಟಕ್ಕೆ ಇಳಿಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಆದ್ರೆ ಮೊದಲ ಪಂದ್ಯಕ್ಕೆ ಅಡ್ಡಿಯಾದಂತೆ 2ನೇ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಭೀತಿ ಶುರುವಾಗಿದೆ. ಒಂದು ವೇಳೆ ಮಳೆಯಾಗಿ (Rain) ಪಂದ್ಯ ರದ್ದಾರೆ ಅದುವೇ ಪಾಕ್ ತಂಡಕ್ಕೆ (Pakisstan Team) ವರದಾನವಾಗಲಿದ್ದು, ಈ ಬಾರಿ ಏಷ್ಯಾಕಪ್ ಕಿರೀಟ ಪಾಕಿಸ್ತಾನಕ್ಕೆ ಒಲಿಯಲಿದೆ ಎಂದು ಮಾಜಿ ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ.
ಹೈವೋಲ್ಟೇಜ್ ಪಂದ್ಯಕ್ಕೆ ಶ್ರೀಲಂಕಾ (Sri Lanka) ರಾಜಧಾನಿ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣ ಸಜ್ಜಾಗಿದೆ. ಉಭಯ ತಂಡಗಳ ಕ್ರಿಕೆಟ್ ಪ್ರಿಯರು ಕಾದು ಕುಳಿತಿದ್ದಾರೆ. ಇತ್ತಂಡಗಳೂ ಸಹ ನೆಟ್ಸ್‌ನಲ್ಲಿ ಸಮರಾಭ್ಯಾಸ ನಡೆಸುತ್ತಿವೆ. ಆದ್ರೆ ಹವಾಮಾನ ಇಲಾಖೆ ಇಂಡೋ-ಪಾಕ್ ಕದನಕ್ಕೆ ಮತ್ತೆ ಮಳೆ (Rain) ಅಡ್ಡಿಯಾಗುವ ಮುನ್ಸೂಚನೆ ನೀಡಿದೆ. ಇದು ಅಭಿಮಾನಿಗಳ ಆಸೆಗೂ ತಣ್ಣೀರು ಎರಚಿದಂತಾಗಿದೆ. ಕಳೆದ ವಾರ ಲೀಗ್ ಸುತ್ತಿನ ಪಂದ್ಯಕ್ಕೂ ಮಳೆ ಅಡ್ಡಿಯಾಗಿ ಪಂದ್ಯ ಫಲಿತಾಂಶವಿಲ್ಲದೇ ಅಂತ್ಯಗೊಂಡಿತ್ತು. ಸೂಪರ್-4 ಪಂದ್ಯ ವೇಳೆಯೂ 80% ನಿಂದ 90% ನಷ್ಟು ಮಳೆ ಅಡ್ಡಿಯಾಗುವ ಮುನ್ಸೂಚನೆ ನೀಡಿದೆ.
ಇದು ಪಾಕ್ ತಂಡಕ್ಕೆ ವರದಾನವಾದಂತೆ ಆಗಲಿದೆ. ಏಕೆಂದರೆ ಈಗಾಗಲೇ ಸೂಫರ್ ಫೋರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಪಾಕಿಸ್ತಾನ ತಂಡ ಅಗ್ರಸ್ಥಾನ ಕಾಯ್ದುಕೊಂಡಿದೆ. ಒಂದು ವೇಳೆ ಟೀಂ ಇಂಡಿಯಾ ವಿರುದ್ಧದ ಪಂದ್ಯ ರದ್ದಾಗಿ ತಲಾ ಒಂದೊಂದು ಅಂಕ ಪಡೆದುಕೊಂಡರೇ ಪಾಕಿಸ್ತಾನ 3 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಳ್ಳಲಿದ್ದೆ. ಆಗ ಭಾರತ ಸೆ.12 ರಂದು ಶ್ರೀಲಂಕಾ ವಿರುದ್ಧ ಹಾಗೂ ಸೆ.15ರಂದು ಬಾಂಗ್ಲಾದೇಶದ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ಎರಡು ಪಂದ್ಯಗಳಲ್ಲಿ ಭಾರತ ಒಂದರಲ್ಲಿ ಸೋತು ಲಂಕಾ ವಿರುದ್ಧ ಪಾಕ್ ಗೆಲುವು ಸಾಧಿಸಿದರೆ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಶ್ರೀಲಂಕಾಗೆ ಇನ್ನೂ 3 ಪಂದ್ಯಗಳ ಅವಕಾಶವಿದ್ದು, 2ರಲ್ಲಿ ಗೆಲುವು ಸಾಧಿಸಿದರೂ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಒಂದು ವೇಳೆ ಬಲಿಷ್ಠ ಬೌಲಿಂಗ್ ಹಾಗೂ ಬ್ಯಾಟಿಂಗ್ ಪಡೆ ಹೊಂದಿರುವ ಪಾಕಿಸ್ತಾನ ಫೈನಲ್ ಪ್ರವೇಶಿಸಿದರೆ ಟ್ರೋಫಿ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ ಎಂದು ಪಾಕ್ ಮಾಜಿ ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ.
ಕಳೆದ ವರ್ಷ ಟಿ20 ಏಷ್ಯಾಕಪ್ ಹಾಗೂ ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ಅಭಿಮಾನಿಗಳಿಗೆ ರಸದೌತಣ ನೀಡಿದ್ದವು. ಟಿ20 ಏಷ್ಯಾಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಭಾರತದ ವಿರುದ್ಧ ಸೋತಿದ್ದ ಪಾಕ್ ಸೂಪರ್ ಫೋರ್ ಹಂತದಲ್ಲಿ ಗೆದ್ದು ಸೇಡುತೀರಿಸಿಕೊಂಡಿತ್ತು. ಈ ಮೂಲಕ ಟೀಂ ಇಂಡಿಯಾ ಫೈನಲ್ ತಲುಪುವುದಕ್ಕೂ ಮುಳುವಾಗಿತ್ತು. ಹಾಗಾಗಿ ಈ ಬಾರಿ ಪ್ರಶಸ್ತಿಗೆ ಮುತ್ತಿಡಲೇಬೇಕೆಂದು ಪಣ ತೊಟ್ಟಿರುವ ರೋಹಿತ್ ಬಳಕ ಪಾಕ್ ತಂಡವನ್ನ ಬಗ್ಗು ಬಡಿಯಲು ಸಜ್ಜಾಗಿದೆ. ಕಳೆದ ವಾರ ಗ್ರೂಪ್ ಹಂತದಲ್ಲಿ ಪಾಕ್ ವಿರುದ್ಧ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಆಲೌಟ್ ಆಗಿತ್ತು.
Web Stories