ಬೆಂಗಳೂರು: ಆಗಸ್ಟ್ 31 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳು (International Flight) ಕೆಂಪೇಗೌಡ ವಿಮಾನ ನಿಲ್ದಾಣದ (Kempegowda Airport) ಟರ್ಮಿನಲ್ 2ನಿಂದ (Terminal-2) ಟೇಕಾಫ್ ಮತ್ತು ಲ್ಯಾಂಡಿಂಗ್ ಆಗಲಿದೆ.
ಆಗಸ್ಟ್ 31, 2023 ರಂದು ಬೆಳಗ್ಗೆ 10:45 ರಿಂದ ಎಲ್ಲಾ ನಿಗದಿತ ಅಂತರರಾಷ್ಟ್ರೀಯ ವಿಮಾನಗಳು ಟರ್ಮಿನಲ್ 2 ರಿಂದ ಆಗಮಿಸುತ್ತವೆ ಮತ್ತು ನಿರ್ಗಮಿಸುತ್ತವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಹೇಳಿದೆ.
ಸೆಪ್ಟೆಂಬರ್ 1 ರಂದು ಅಂತರಾಷ್ಟ್ರೀಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಬಿಐಎಎಲ್ ಯೋಜಿಸಿತ್ತು. ಆದರೆ ಈಗ ಒಂದು ದಿನ ಮೊದಲೇ ಆರಂಭಿಸಲು ನಿರ್ಧರಿಸಿದೆ.
ಇನ್ನು ಮುಂದೆ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಟರ್ಮಿನಲ್-2ಗೆ ಸ್ಥಳಾಂತರವಾಗಲಿದೆ. ಟರ್ಮಿನಲ್-1 ಪ್ರತ್ಯೇಕವಾಗಿ ದೇಶೀಯ ಟರ್ಮಿನಲ್ (Domestic Operations) ಆಗಿ ಕಾರ್ಯನಿರ್ವಹಿಸಲಿದೆ. ಸಿಂಗಾಪುರ್ ಏರ್‌ಲೈನ್ಸ್ ಆಗಸ್ಟ್ 31 ರಂದು ಟರ್ಮಿನಲ್- 2 ನಲ್ಲಿ ಇಳಿಯುವ ಮೊದಲ ಅಂತರರಾಷ್ಟ್ರೀಯ ವಿಮಾನವಾಗಿದೆ. ಇದನ್ನೂ ಓದಿ: ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು
ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸುಮಾರು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟಿಸಿದ್ದರು. ಈ ವರ್ಷದ ಜನವರಿ 15 ದಿಂದ ದೇಶೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
ಟರ್ಮಿನಲ್-2 ಅನ್ನು ಗಾರ್ಡನ್ ಟರ್ಮಿನಲ್(Garden Terminal) ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದೆ. ಬೆಂಗಳೂರನ್ನು ಭಾರತದ ʼಗಾರ್ಡನ್ ಸಿಟಿʼಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ. ಪ್ರಯಾಣಿಕರಿಗೆ ಉದ್ಯಾನವನದ ಅನುಭವ ನೀಡಲು ಕೃತಕ ಮರಗಿಡಗಳು, ಹಕ್ಕಿಗಳ ಕಲರವ-ಚಿಲಿಪಿಲಿ ನಾದವನ್ನು ಇಲ್ಲಿ ಕೇಳಬಹುದು.
ಹೊಸದಾಗಿ ಟರ್ಮಿನಲ್ 2 (Bengaluru Terminal 2) ಎರಡನೇ ರನ್ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಏರ್‌ಪೋರ್ಟ್ ಒಳಾಂಗಣವು ಸಂಪೂರ್ಣ ವುಡ್ ಡಿಸೈನ್, ಹಸಿರಿನೊಂದಿಗೆ ವಿನ್ಯಾಸಗೊಂಡಿದೆ. ಗ್ರೌಂಡ್ ಎಸಿ ಆಟೋಮ್ಯಾಟಿಕ್ ಪಾಸ್‍ಪೋರ್ಟ್ ವೆರಿಫಿಕೇಷನ್, ಆಕರ್ಷಕ ಫ್ಲೋರಿಂಗ್ ಹಾಗೂ ಅತ್ಯಾಧುನಿಕ ಟೆಕ್ನಾಲಜಿಯನ್ನು ಹೊಂದಿದೆ.
ವಿಮಾನ ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನಿಷನ್, ಫಿಂಗರ್ ಪ್ರಿಂಟ್ ಸೆನ್ಸರ್ ಸೌಲಭ್ಯವಿದೆ. ಕೆಐಎಎಲ್ ನೂತನ ಟರ್ಮಿನಲ್‍ನಲ್ಲಿ ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳ ಬಗ್ಗೆ ಪ್ಯಾಸೆಂಜರ್‌ಗಳಿಗೆ ಮಾಹಿತಿ ಪಡೆಯಲು ಇನ್ ಬಿಲ್ಟ್ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ತಂತ್ರಜ್ಞಾನ ರೂಪಿಸಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಂಪಸ್ ಅನ್ನು ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು 100% ಸುಸ್ಥಿರತೆಯೊಂದಿಗೆ ರಚಿಸಲಾಗಿದೆ.
ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‌ಮೋರ್, ಓವಿಂಗ್ಸ್ & ಮೆರಿಲ್ (SOM) ಕಂಪನಿ ಟರ್ಮಿನಲ್ ವಿನ್ಯಾಸ ಮಾಡಿದೆ. ಏಕಕಾಲದಲ್ಲಿ 6 ಸಾವಿರ ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲಿ ಇರುವುದು ವಿಶೇಷ. ಹೊಸ ಟರ್ಮಿನಲ್‌ನ ಮೊದಲ ಹಂತವು ಒಂದು ವರ್ಷದಲ್ಲಿ 2.5 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಎರಡನೇ ಟರ್ಮಿನಲ್‌ನ ಮೊದಲ ಹಂತದ ನಿರ್ಮಾಣದ ಅಂದಾಜು ವೆಚ್ಚ 13,000 ಕೋಟಿ ರೂ. ಆಗಿದ್ದು ಈ ಟರ್ಮಿನಲ್ ಸರಿಸುಮಾರು 2.5 ಲಕ್ಷ ಚದರ ಮೀಟರ್‌ನ ಪ್ರದೇಶವನ್ನು ಹೊಂದಿದೆ. ಎರಡನೇ ಹಂತದಲ್ಲಿ ಈ ಟರ್ಮಿನಲ್‌ಗೆ ಇನ್ನೂ 4.41 ಲಕ್ಷ ಚ.ಮೀ ಹೊಸದಾಗಿ ಸೇರ್ಪಡೆಗೊಳ್ಳಲಿದೆ.
Web Stories