ಪೂಜಾ ಹೆಗ್ಡೆ (Pooja hegde) ವಾರದಿಂದ ಸುದ್ದಿಯಲ್ಲಿದ್ದಾರೆ. ಒಂದೇ ಸಿನಿಮಾ ಬಿಟ್ಟು ಹೊರ ಬಂದಿದ್ದೇ ಕಾರಣ. ಸತತ ಸೋಲಿನಿಂದ ಒದ್ದಾಡುತ್ತಿರುವ ಪೂಜಾ ‘ಗುಂಟೂರು ಖಾರಂ’ನಿಂದ ದೂರವಾದರು. ಮಹೇಶ್ ಬಾಬು ಜೊತೆ ನಟಿಸುವ ಅವಕಾಶ ಕಳೆದುಕೊಂಡರು. ಇದಕ್ಕೆಲ್ಲ ಯಾವ್ಯಾವುದೋ ಕಾರಣ ಎನ್ನುವ ಖಬರ್ ಹರಡಿತು. ಆದರೆ ಅಸಲಿಗೆ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಇದಕ್ಕೆ ಮೂಲ ಹೂರಣ ಎನ್ನುವ ಮಾತು ಹೊಗೆಯಾಡುತ್ತಿದೆ. ಯಾಕಾಗಿ ಪೂಜಾ ಖಾರ ತಿನ್ನಲು ಒಲ್ಲೆ ಎಂದರು? ಬಾಲಿವುಡ್ ನಿರ್ದೇಶಕನ ಸ್ಕೆಚ್ ಮತ್ತೇನು?
ಪೂಜಾ ಹೆಗ್ಡೆ ಕಳೆದ ನಾಲ್ಕು ವರ್ಷಗಳಿಂದ ಒಂದೇ ಒಂದು ಹಿಟ್ ಕೊಟ್ಟಿಲ್ಲ. ಟಾಪ್ ಸ್ಟಾರ್‌ಗಳ ಜೊತೆ ಕುಣಿದರೂ ಜನರು ಕ್ಯಾರೇ ಎನ್ನಲಿಲ್ಲ. ಒಂದಾದರೂ ಹಿಟ್ ಕೊಡಬೇಕು…ಇದನ್ನೇ ಜಪ ಮಾಡಿದರೂ ದೇವರು ಆಶೀರ್ವಾದ ಮಾಡಲಿಲ್ಲ. ಇದೇ ಹೊತ್ತಲ್ಲಿ ಮಹೇಶ್ ಬಾಬು ಜೊತೆ ಗುಂಟೂರು ಖಾರಂ ಸಿನಿಮಾಕ್ಕೆ ಬುಲಾವ್ ಬಂದಿತು. ಆದರೆ ಅದು ತಡವಾಯಿತು. ಪೂಜಾ ಕೊಟ್ಟ ಡೇಟ್ಸ್ ಮುಗಿಯಿತು. ಪೂಜಾ ಔಟ್ ಆದರು. ಆ ಜಾಗಕ್ಕೆ ಅದೇ ಚಿತ್ರಕ್ಕೆ ಸೆಕೆಂಡ್ ಹೀರೋಯಿನ್ ಆಗಿದ್ದ ಕನ್ನಡದ ಶ್ರೀಲೀಲಾ ಪವಡಿಸಿ ಪಕಪಕ ನಕ್ಕರು. ಆದರೆ ಪೂಜಾ ಆ ಚಿತ್ರದಿಂದ ಹೊರ ಬೀಳಲು ಅಸಲಿ ಕಾರಣ ಇದ್ಯಾವುದೂ ಅಲ್ಲ, ಬಾಲಿವುಡ್ ಡೈರೆಕ್ಟರ್ ಕರಣ್‌ಜೋಹರ್ ಅನ್ನೋದು ಗಿಚ್ಚಿ ಗಿಲಿಗಿಲಿ.
ಬಾಲಿವುಡ್‌ನಲ್ಲಿ ಪೂಜಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅದ್ಯಾವುದೂ ಹೇಳಿಕೊಳ್ಳುವ ಹೆಸರು ತರಲಿಲ್ಲ. ಖುದ್ದು ಸಲ್ಮಾನ್ ಖಾನ್ ಜೊತೆ ಕುಣಿದ ಕಿಸಿ ಕಾ ಭಾಯಿ ಕಿಸಿ ಕೀ ಜಾನ್ ಕೂಡ ಮಕಾಡೆ ಮಲಗಿತು. ಟಾಲಿವುಡ್‌ನಲ್ಲಿ ಗುಂಟೂರು ಖಾರಂ ಮಾತ್ರ ಕೈಯಲ್ಲಿತ್ತು. ನಿರ್ದೇಶಕ ತ್ರಿವಿಕ್ರಮ್ ಸ್ಕ್ರೀಪ್ಟ್ ಚೇಂಜ್ ಮಾಡಿದ್ದು, ಪೂಜಾ ಪಾತ್ರಕ್ಕೆ ಕತ್ತರಿ ಹಾಕಿದ್ದು, ಶ್ರೀಲೀಲಾಗೆ (Sreeleela) ರತ್ನಗಂಬಳಿ ಹಾಸಿದ್ದಾರೆ. ಬಳಿಕ ಪೂಜಾ ಚಿತ್ರದಿಂದ ಹೊರನಡೆದಿದ್ದಾರೆ. ಅದಕ್ಕೆ ‘ನೀನು ಬ್ಯಾಡ ನಿನ್ ಸಿನಿಮಾನೂ ಬ್ಯಾಡʼ ಅಂತ ಸ್ವಾಟೆ ತಿರುವಿ ಎದ್ದು ಬಂದರಂತೆ. ಇದೇ ನಿಜವಾ ಅಥವಾ ಬೇರೆ ಯಾರಾದರೂ ಊದಿನ ಕಡ್ಡಿ ಹಚ್ಚಿದರಾ? ಆಗ ಕರಣ್ ಕುಲುಕುಲು ನಗುತ್ತಾ ಬಂದರಲ್ಲಾ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕಿಡಿಕಾರಿದ ನಟ ರಾಜೀವ್ ಖಂಡೇಲ್ವಾಲ್
ಕರಣ್ ಜೋಹರ್ (Karan Johar) ಬಾಲಿವುಡ್‌ನ ದೊಡ್ಡ ಹೆಸರು. ಅವರದೇ ಬ್ಯಾನರ್‌ನ ಎರಡು ಸಿನಿಮಾಗಳಿಗೆ ಪೂಜಾರನ್ನು ಬುಕ್ ಮಾಡಿದ್ದಾರಂತೆ. ಕಾಲಿವುಡ್, ಟಾಲಿವುಡ್‌ಗೆ ಮಾರೋ ಗೋಲಿ…ಬಾಲಿವುಡ್‌ನಲ್ಲಿ ಆಡು ಬಾ ಹೋಳಿ ಹೀಗೆ ಎರಡೂ ಕೈಗಳಿಂದ ಅಪ್ಪಿಕೊಂಡಿದ್ದಾರೆ. ನಾಲ್ಕು ಸಿನಿಮಾ ಗೋತಾ ಹೊಡೆದ ಸುಸ್ತಿನಲ್ಲಿದ್ದ ಪೂಜಾಗೆ ಕರಣ್ ಕಣ್ಣಲ್ಲಿ ಐರನ್ ಕಂಟೆಂಟ್ ಇರುವ ಕರಿಬೇವಿನ ಸೊಪ್ಪು ಕಾಣಿಸಿದೆ. ಫಲಿತಾಂಶ…ಟಾಲಿವುಡ್‌ಗೆ ಟಾಟಾ…ಬಾಲಿವುಡ್‌ನಲ್ಲಿ ಆಟ. ಜಸ್ಟ್ ಆರಂಭ. ಹತ್ತಿದ ಏಣಿ ಒದ್ದಿರುವ ಡಸ್ಕಿ ಬ್ಯೂಟಿಗೆ ಬಾಲಿವುಡ್ ಮಾವಿನ ಹಣ್ಣು ತಿನ್ನಿಸುತ್ತಾ ಅಥವಾ ಹಸಿ ಹಾಗಲಕಾಯಿ ಹಸಿಹಸಿಯಾಗಿಯೇ ಮುಕ್ಕಿಸುತ್ತಾ? ನೋಡೋಣ. ಇದೀಗ ಬಾಲಿವುಡ್‌ನಲ್ಲಿನ ಆಫರ್‌ಗೆ ಅವಕಾಶ ಕೊಟ್ಟ ಟಾಲಿವುಡ್ ಅನ್ನೇ ಪೂಜಾ ಮರೆತ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.