ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಬಯಸಿ ಈ ವರ್ಷ ಸಿಇಟಿ ಪರೀಕ್ಷೆ (CET Exam) ಬರೆದು ಎ ಅರ್ಹತಾ ಕಂಡಿಕೆಯಡಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ವ್ಯಾಸಂಗ ಪ್ರಮಾಣಪತ್ರ ಮತ್ತು ಇತರ ದಾಖಲಾತಿಗಳ ಆನ್‌ಲೈನ್ ಪರಿಶೀಲನೆ ಜೂನ್ 27ರಿಂದ ಜುಲೈ 15ರವರೆಗೆ ನಡೆಯಲಿದೆ. ಅಭ್ಯರ್ಥಿಗಳು ಇದಕ್ಕಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority)ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಯಾವ ರ‍್ಯಾಂಕಿಂಗ್ ಪಡೆದಿರುವ ಅಭ್ಯರ್ಥಿಗಳು ಯಾವ ದಿನಾಂಕದಂದು ದಾಖಲಾತಿಗಳ ಪರಿಶೀಲನೆಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಜತೆಗೆ ವಿದ್ಯಾರ್ಥಿಗಳು ಯಾವ ದಾಖಲಾತಿಗಳನ್ನು ಹಾಜರುಪಡಿಸಬೇಕು ಎಂದೂ ವಿವರವಾಗಿ ಸೂಚಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್ ನೋಡಬಹುದು ಎಂದಿದ್ದಾರೆ.
ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ ಕೋಟಾ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಮುಂತಾದವುಗಳ ಪರಿಶೀಲನೆ ನಿಯಮಗಳ ಪ್ರಕಾರ ನಡೆಯಲಿದೆ. ಜಾತಿ/ಆದಾಯ ಪ್ರಮಾಣಪತ್ರಗಳನ್ನು ಅಭ್ಯರ್ಥಿಗಳ ಹೆಸರಿನಲ್ಲೇ ಪಡೆದಿರಬೇಕು ಎಂದು ಅವರು ಹೇಳಿದ್ದಾರೆ.
ಇವುಗಳ ಜೊತೆಗೆ ಅಭ್ಯರ್ಥಿಗಳು ಸಿಇಟಿ ಪ್ರವೇಶಪತ್ರ, ಅಂತಿಮವಾಗಿ ಅರ್ಜಿ ಪ್ರಿಂಟ್ ಮಾಡಿದ ಪ್ರತಿ, ಬಿಇಒ/ಡಿಡಿಪಿಯು ಅವರ ಮೇಲುರುಜು ಮಾಡಿರುವ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿ ಇವುಗಳನ್ನೂ ಪರಿಶೀಲನೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಅಮೆರಿಕ ಉಪರಾಯಭಾರಿ ಕಚೇರಿ ಪ್ರಾರಂಭ; ಪ್ರಧಾನಿ ಪ್ರಯತ್ನ ಶ್ಲಾಘಿಸಿದ ಬಿಜೆಪಿ ಮುಖಂಡ ಆನಂದ್
‘ಎ’ ಅರ್ಹತಾ ಕಂಡಿಕೆಯಡಿ ಸೀಟು ಬಯಸುವ ಅಭ್ಯರ್ಥಿಗಳು ಕರ್ನಾಟಕದ ಯಾವುದಾದರೂ ಸರ್ಕಾರಿ ಶಾಲೆಯಲ್ಲಿ ಕನಿಷ್ಠಪಕ್ಷ 7 ವರ್ಷಗಳಾದರೂ ವ್ಯಾಸಂಗ ಮಾಡಿರಬೇಕು. ಹಾಗೂ ಎಸ್‌ಎಸ್‌ಎಲ್‌ಸಿ/ಪಿಯುಸಿ ಪರೀಕ್ಷೆಯನ್ನು ಕರ್ನಾಟಕ ರಾಜ್ಯದಲ್ಲೇ ಬರೆದಿರಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ಉಳಿದಂತೆ ಬಿ, ಸಿ, ಡಿ, ಇ, ಎಫ್, ಜಿ, ಹೆಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಒ ಅರ್ಹತಾ ಕಂಡಿಕೆಗಳಡಿ ಸೀಟು ಬಯಸಿರುವ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಯು ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಆಫ್‌ಲೈನ್ ಮಾದರಿಯಲ್ಲಿ ನಡೆಯಲಿದೆ. ಈ ಸಂಬಂಧದ ದಿನಾಂಕಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ – ಜಗದೀಶ್ ಶೆಟ್ಟರ್ ಸೇರಿ ಕಾಂಗ್ರೆಸ್‌ನ ಮೂವರೂ ಅವಿರೋಧ ಆಯ್ಕೆ