– ಮಹಿಳೆಯರಿಗೆ ಸಿಗುತ್ತಿಲ್ಲ ಫ್ರೀ ಬಸ್ ಸೌಲಭ್ಯ
ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ತವರು ಜಿಲ್ಲೆಯ 20 ಗ್ರಾಮಗಳಲ್ಲಿ ಜನರಿಗೆ ಸಂಚಾರ ಮಾಡಲು ಸುಸಜ್ಜಿತ ರಸ್ತೆಗಳು ಇಲ್ಲದಿರುವುದಕ್ಕೆ ಸಾರಿಗೆ ಸೇವೆ ನೀಡಲು ಕೆಎಸ್‌ಆರ್‌ಟಿಸಿ (KSRTC) ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಆದರೆ ಕುಂದಾನಗರಿ ಬೆಳಗಾವಿ (Belagavi) ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸುಸಜ್ಜಿತ ರಸ್ತೆಗಳು (Road) ಇಲ್ಲದೇ ಇರುವುದಕ್ಕೆ ಗ್ರಾಮಗಳ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ (Shakti Scheme) ಲಾಭ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ನಿತ್ಯ ರಾಜ್ಯದ ಲಕ್ಷಾಂತರ ಮಹಿಳೆಯರು ಶಕ್ತಿ ಯೋಜನೆಯಡಿ ಲಾಭ ಪಡೆಯುತ್ತಿದ್ದಾರೆ. ಹೀಗಿದ್ದರೂ ಬೆಳಗಾವಿಯ ಈ 20 ಗ್ರಾಮಗಳ ಮಹಿಳೆಯರಿಗಿಲ್ಲಿ ಶಕ್ತಿ ಯೋಜನೆಯ ಲಾಭವಿಲ್ಲ. ಉತ್ತಮ ರಸ್ತೆ ನಿರ್ಮಿಸಿದರೆ ಬಸ್ ಸೌಕರ್ಯ ಕಲ್ಪಿಸಲು ಸಿದ್ಧರಿದ್ದೇವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್ – ಸರ್ಕಾರಿ ಬಸ್‌ಗಳು ಫುಲ್ ರಶ್
ಬೆಳಗಾವಿ ವಿಭಾಗದಲ್ಲಿ ಖಾನಾಪುರ ತಾಲೂಕಿನ ಬಾಳಗುಂದ, ಹುಳಂದ, ಗವ್ವಾಳಿ, ಆಮಗಾಂವ ಗ್ರಾಮಗಳಲ್ಲಿ ಬಸ್ ಸೌಲಭ್ಯವಿಲ್ಲ. ಚಿಕ್ಕೋಡಿ ವಿಭಾಗದಲ್ಲಿ ಚಿಕ್ಕೋಡಿ ತಾಲೂಕಿನ ಪೋಗತ್ಯಾನಟ್ಟಿ, ನಿಪ್ಪಾಣಿ ತಾಲೂಕಿನ ಗವ್ವಾಣಿ, ಅಮಲಝರಿ, ರಾಯಬಾಗ ತಾಲೂಕಿನ ಗಿರಿನಾಯಕವಾಡಿ, ಅಥಣಿ ತಾಲೂಕಿನ ಜನವಾಡ, ದಬದಬಹಟ್ಟಿ, ಚಿಕ್ಕೂಡ, ಕೇಸರಕರ ದಡ್ಡಿ, ಕಾಗವಾಡ ತಾಲೂಕಿನ ತೆವರಟ್ಟಿ, ಅಗ್ರಾಣಿ ಇಂಗಳಗಾಂವ, ಗೋಕಾಕ ತಾಲೂಕಿನ ಗುಜನಾಳ, ಕಲಾರಕೊಪ್ಪ, ಚಿಗಡೊಳ್ಳಿ, ಮೆಳವಂಕಿ, ಗಡ್ಡಿಹೋಳಿ ಗ್ರಾಮಗಳಿಗೆ ಸುಸಜ್ಜಿತ ರಸ್ತೆಗಳಿಲ್ಲ.
ಧಾರವಾಡ ವಿಭಾಗ ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮಗಳಿಗೆ ಸುಸಜ್ಜಿತ ರಸ್ತೆಗಳು ಇಲ್ಲದೇ ಇರುವುದಕ್ಕೆ ಬಸ್ ಸೌಲಭ್ಯ ಕುಂಠಿತಗೊಂಡಿದೆ. ಇದರಿಂದ ಸಾಕಷ್ಟು ಜನರು ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಯಿಂದ ವಂಚಿತರಾಗಿದ್ದು ಉತ್ತಮ ರಸ್ತೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕ್ರಮ ವಹಿಸುತ್ತಾರಾ ಎಂಬುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: `ಗ್ಯಾರಂಟಿ’ಗೆ ಅರ್ಜಿ ಸಲ್ಲಿಸುವ ಮುನ್ನ ಹುಷಾರ್ – ಸೈಬರ್ ಕಳ್ಳರಿದ್ದಾರೆ ಎಚ್ಚರ!