ಈ ಬಾರಿ ಚನ್ನಪಟ್ಟಣದ ಬೊಂಬೆ ಆಡಿಸುವವರ‍್ಯಾರು?

Public TV
4 Min Read
kumaraswamy cp yogeshwar

– ಹೆಚ್‌ಡಿಕೆ ಹಾಗೂ ಸಿಪಿವೈ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಗಲಿರೋ ಚನ್ನಪಟ್ಟಣ

ರಾಮನಗರ: ಬೊಂಬೆಗಳ ತಯಾರಿಕೆಯಲ್ಲಿ ವಿಶ್ವಖ್ಯಾತಿ ಪಡೆದಂತೆ, ಹೋರಾಟದಲ್ಲೂ ತನ್ನದೇ ಆದ ಹೆಸರು ಗಳಿಸಿರೋ ಚನ್ನಪಟ್ಟಣ (Channapatna) ವಿಧಾನಸಭಾ ಕ್ಷೇತ್ರ, ರಾಜಕೀಯವಾಗಿಯೂ ವಿಶಿಷ್ಟಗಳಿಂದ ಕೂಡಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P.Yogeshwara) ಸ್ಪರ್ಧೆ ಮಾಡುವ ಹೈವೋಲ್ಟೇಜ್ ಕ್ಷೇತ್ರ ಚನ್ನಪಟ್ಟಣ. ಜೆಡಿಎಸ್‌ನಿಂದ (JDS) ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯಿಂದ (BJP) ಸಿ.ಪಿ.ಯೋಗೇಶ್ವರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಈ ಬಾರಿ ಬೊಂಬೆ ಆಡಿಸುವವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.

ದೊಡ್ಡಗೌಡ್ರ ನಾಮಬಲ, ವೈಯಕ್ತಿಕ ವರ್ಚಸ್ಸಲ್ಲಿ ಹೆಚ್‌ಡಿಕೆ ಫೈಟ್
ಒಕ್ಕಲಿಗ ಪ್ರಾಬಲ್ಯವಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸಾಂಪ್ರದಾಯಿಕ ಮತಗಳನ್ನ ಹೊಂದಿದೆ. ಮಾಜಿ ಸಿಎಂ ಕುಮಾರಸ್ವಾಮಿ ಈ ಕ್ಷೇತ್ರದಿಂದ ಇದು ನನ್ನ ಕಡೇ ಚುನಾವಣೆ. ಮುಂದಿನ ಭಾರಿ ಇಲ್ಲಿ ಸ್ಥಳೀಯ ಕಾರ್ಯಕರ್ತರನ್ನು ನಿಲ್ಲಿಸುತ್ತೇನೆ ಎನ್ನುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದ್ದಾರೆ. ಪಂಚರತ್ನ, ಬಮೂಲ್ ಉತ್ಸವಗಳ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಅಲೆ ಎಬ್ಬಿಸಿದ್ದಾರೆ. ಹೆಚ್ಡಿಕೆಗೆ ಸಿಎಂ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆಯು ಮತದಾರರಿಗಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ ಚುನಾವಣೆಯಲ್ಲಿ ಗೆಲ್ಲುವುದು ಸಹ ಅನಿವಾರ್ಯ. ಅಲ್ಲದೇ ಎರಡು ಬಾರಿ ಸಿಎಂ ಆಗಿರುವ ಹೆಚ್ಡಿಕೆಗೆ ಮಾಜಿ ಪ್ರಧಾನಿ ದೇವೇಗೌಡರ ನಾಮಬಲವು ಇದೆ. ಅಲ್ಲದೇ ತನ್ನದೇ ಆದ ವೈಯಕ್ತಿಕ ವರ್ಚಸ್ಸನ್ನು ಕುಮಾರಸ್ವಾಮಿ ಹೊಂದಿದ್ದು ಕ್ಷೇತ್ರದಲ್ಲಿ ಗೆಲುವಿಗೆ ಕಸರತ್ತು ನಡೆಸಿದ್ದಾರೆ. ಇದನ್ನೂ ಓದಿ: ಸೋಲಿಲ್ಲದ ಸರದಾರ ಡಿಕೆಶಿಗೆ ಸಾಮ್ರಾಟ್ ಸವಾಲ್..!

KUMARASWAMY TWEET 1

ಸಿಪಿವೈ ಭಾವನಾತ್ಮಕ ಅಸ್ತ್ರ ಪ್ರಯೋಗ
ಇನ್ನೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೂಡಾ ಸ್ವಾಭಿಮಾನಿ ಸಂಕಲ್ಪ ನಡಿಗೆ ಮೂಲಕ ಕ್ಷೇತ್ರದ ಮನೆಮನೆಗೆ ತೆರಳುತ್ತಿದ್ದಾರೆ. ನಾನು ಈ ಮಣ್ಣಿನ ಮಗ, ಇದೇ ತಾಲೂಕಿನಲ್ಲಿ ಹುಟ್ಟಿ ಬೆಳೆದಿದ್ದೇನೆ ಎಂಬ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಭಗೀರಥ ಎಂಬ ಖ್ಯಾತಿ ಸಿಪಿವೈಗಿದೆ. ಅಲ್ಲದೇ ಜೆಡಿಎಸ್ ವೈಫಲ್ಯಗಳ ಬಗ್ಗೆಯೂ ಧ್ವನಿ ಎತ್ತಿರುವ ಸಿಪಿವೈ ಕಳೆದ ಬಾರಿ ಸೋತಿರುವ ಅನುಕಂಪವನ್ನೂ ಗಿಟ್ಟಿಸಿಕೊಂಡು ಚುನಾವಣೆಯಲ್ಲಿ ಗೆಲ್ಲಲು ಸರ್ಕಸ್ ಮಾಡ್ತಿದ್ದಾರೆ. ಸದ್ಯ ಕಾಂಗ್ರೆಸ್ ನಿಂದ ಕೊನೆಯ ಕ್ಷಣದಲ್ಲಿ ಜಿಲ್ಲಾಧ್ಯಕ್ಷ ಗಂಗಾಧರ್ ಗೆ ಚನ್ನಪಟ್ಟಣ ಟಿಕೆಟ್ ನೀಡಲಾಗಿದೆ. ಹಿಂದೆ ಸಂಭಾವ್ಯ ಅಭ್ಯರ್ಥಿ ಕಾಂಗ್ರೆಸ್ ಗೆ ಕೈಕೊಟ್ಟು ಜೆಡಿಎಸ್ ಸೇರ್ಪಡೆ ಆಗಿದ್ದು ಸೂಕ್ತ ಅಭ್ಯರ್ಥಿಗೆ ಹುಡುಕಾಟ ನಡೆಸಿದ್ದ ಕಾಂಗ್ರೆಸ್ ಕೊನೆಗೆ ಜಿಲ್ಲಾಧ್ಯಕ್ಷನಿಗೆ ಟಿಕೆಟ್ ನೀಡಿ ಘಟಾನುಘಟಿಗಳ ಮಧ್ಯೆ ಕಣಕ್ಕಿಳಿಸಿದೆ.

ಮಹಿಳಾ ಮತದಾರರ ಕೈಯಲ್ಲಿ ಪ್ರಬಲರ ಭವಿಷ್ಯ
ಮತದಾರರ ವಿಷಯದಲ್ಲೂ ವಿಶೇಷತೆ ಹೊಂದಿರೋ ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ, ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ. ಯಾವುದೇ ಅಭ್ಯರ್ಥಿ ಗೆಲುವಿನಲ್ಲಿ ನೀರೆಯರೇ ನಿರ್ಣಾಯಕವಾಗಿದ್ದಾರೆ. ಹೋರಾಟದ ಹಿನ್ನೆಲೆಯುಳ್ಳ ನೆಲದಲ್ಲಿ ಈಗಾಗಲೇ ಈ ಬಾರಿಯ ಚುನಾವಣಾ ಕಾವು ರಂಗೇರಿದೆ. ಇದನ್ನೂ ಓದಿ: ವರುಣಾದಲ್ಲಿ ಬಿಗ್‌ ಫೈಟ್‌: ಸಿದ್ದು v/s ಸೋಮಣ್ಣ – ಯಾರ ಕೈ ಹಿಡೀತಾರೆ ವರುಣಾ ಮತದಾರ?

YOGESHWAR

ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಆರ್ಭಟ!
ಸಿನೆಮಾ ಸ್ಟಾರ್ ಆಗಿ ವರ್ಚಸ್ಸು ಗಳಿಸಿದ್ದ ಸಿ.ಪಿ. ಯೋಗೇಶ್ವರ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ನಂತರ 2004, 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಡಿಎಸ್‌ನ ಎಂ.ಸಿ.ಅಶ್ವಥ್ ಅವರನ್ನು ಎರಡು ಬಾರಿ ಮಣಿಸಿದ್ದರು. ಇನ್ನು 2009ರಲ್ಲಿ ಆಪರೇಷನ್ ಕಮಲದ ಸಂದರ್ಭದಲ್ಲಿ ಸಿ.ಪಿ. ಯೋಗೇಶ್ವರ್ ಬಿಜೆಪಿ ಸೇರಿದ ಪರಿಣಾಮ ಉಪ ಚುನಾವಣೆ ಎದುರಾಯ್ತು. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ಸಿ. ಅಶ್ವಥ್ ಅವರು ಗೆಲುವು ಸಾಧಿಸಿದರಾದ್ರೂ, ಮುಂದಿನ ದಿನಗಳಲ್ಲಿ ಅವರೂ ಕೂಡಾ ಬಿಜೆಪಿ ಸೇರಿದರು. ಹೀಗಾಗಿ, 2011ರಲ್ಲಿ ಚನ್ನಪಟ್ಟಣ ಕ್ಷೇತ್ರ ಮತ್ತೊಂದು ಉಪ ಚುನಾವಣೆಯನ್ನು ಎದುರಿಸಬೇಕಾಯ್ತು. ಈ ವೇಳೆ, ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಸ್.ಎಲ್. ನಾಗರಾಜ್ ಅವರನ್ನು ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮಣಿಸಿದರು. ನಂತರ 2013ರ ಚುನಾವಣೆ ವೇಳೆಗೆ ಎಸ್‌ಪಿಗೆ ಹಾರಿದ್ದ ಸಿ.ಪಿ. ಯೋಗೇಶ್ವರ್ ಆ ಚುನಾವಣೆಯಲ್ಲೂ ಗೆಲುವು ಸಾಧಿಸಿದರು. ನಂತರ 2018ರ ಚುನಾವಣೆ ವೇಳೆಗೆ ಮತ್ತೆ ಬಿಜೆಪಿಗೆ ಬಂದ ಸಿ.ಪಿ. ಯೋಗೇಶ್ವರ್‌ಗೆ ಠಕ್ಕರ್ ಕೊಟ್ಟಿದ್ದು ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ. ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿಯಾಗಿ ಖುದ್ದು ಕುಮಾರಸ್ವಾಮಿ ಅವರೇ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ಗೆ ಸೋಲಿನ ರುಚಿ ತೋರಿಸಿದರು. ಅಂದಿನಿಂದಲೂ ಚನ್ನಪಟ್ಟಣದಲ್ಲಿ ಉಭಯ ನಾಯಕರ ಮಧ್ಯೆ ಮಲ್ಲಯುದ್ಧ ನಡೆಯುತ್ತಿದೆ.

ಇನ್ನೂ 2023ರ ವಿಧಾನಸಭಾ ಚುನಾವಣೆಯಲ್ಲೂ ಯೋಗೇಶ್ವರ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಮಧ್ಯೆಯೇ ನೇರ ಸ್ಪರ್ಧೆ ಏರ್ಪಟ್ಟಿದೆ. ಹಾಗೆ ನೋಡಿದ್ರೆ ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣದಲ್ಲಿ ಈವರೆಗೆ ಕಂಡ ಎಲ್ಲ ಗೆಲುವುಗಳೂ ವೈಯಕ್ತಿಕ ವರ್ಚಸ್ಸಿನಿಂದಲೇ. ಏಕೆಂದರೆ, ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಗೆದ್ದಿದ್ದು ಒಂದೇ ಬಾರಿ. ಇನ್ನು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮಂಕಾಗಿಸಿದ ಶ್ರೇಯಸ್ಸು ಕೂಡಾ ಸಿ.ಪಿ. ಯೋಗೇಶ್ವರ್ ಅವರಿಗೇ ಸಲ್ಲುತ್ತೆ. ಯಾವಾಗ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಪಕ್ಷ ತೊರೆದರೋ, ಅಂದಿನಿಂದಲೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಇದನ್ನೂ ಓದಿ: ಡಿಕೆಶಿ ಆಥಿತ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ – ಅಶ್ವಥ್‌ ನಾರಾಯಣ್‌

ಚನ್ನಪಟ್ಟಣದ ಜಾತಿ ಲೆಕ್ಕಾಚಾರ ಏನು?
ಚನ್ನಪಟ್ಟಣದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಹೀಗಾಗಿ, ಒಕ್ಕಲಿಗರಾದ ಸಿ.ಪಿ. ಯೋಗೇಶ್ವರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಇಬ್ಬರೂ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಬಾರಿ ಒಕ್ಕಲಿಗರು ಯಾರ ಪರ ವಾಲುತ್ತಾರೋ, ಅವರದ್ದೇ ಗೆಲುವು. ಇನ್ನುಳಿದಂತೆ ಮುಸ್ಲಿಂ ಮತದಾರರು ಎರಡನೇ ದೊಡ್ಡ ಸಂಖ್ಯೆಯಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ದಲಿತರಿದ್ದಾರೆ. ಹೀಗಾಗಿ, ಮುಸ್ಲಿಂ ಹಾಗೂ ದಲಿತ ಮತಗಳೂ ಯಾವುದೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಿರ್ಣಾಯಕ ಆಗಲಿವೆ. ಕ್ಷೇತ್ರದಲ್ಲಿ ಒಟ್ಟು 2,24,886 ಮತದಾರರಿದ್ದಾರೆ. ಅದರಲ್ಲಿ 1,09,133 ಪುರುಷ ಮತದಾರರು ಹಾಗೂ 1,15,753 ಮಹಿಳೆಯರು, 1054 ಇತರೆ ಮತದಾರರಿದ್ದಾರೆ. ಇನ್ನೂ ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ -1,20,000, ದಲಿತ- 41,000, ಮುಸ್ಲಿಂ-30,000, ಲಿಂಗಾಯತ-11,000, ತಿಗುಳರು -9,000, ಬೆಸ್ತರು -10,500 ಹಾಗೂ ಇತರೆ 10,500 ಮತದಾರರಿದ್ದಾರೆ.

Share This Article