– ವರುಣಾದಲ್ಲಿ 3ನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದ ಸಿದ್ದರಾಮಯ್ಯ
– ಸೋಮಣ್ಣಗೆ ಒಲಿಯುತ್ತಾ ಗೆಲುವು?
– ವರುಣಾ ಕ್ಷೇತ್ರದ ರಾಜಕೀಯ, ಚುನಾವಣೆ, ಜಾತಿ ಲೆಕ್ಕಾಚಾರವೇನು?
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ವರುಣಾದಿಂದ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಠಕ್ಕರ್ ಕೊಡಲು ಬಿಜೆಪಿ ಮುಂದಾಗಿದೆ. ಲಿಂಗಾಯತ ಸಮುದಾಯದವರೇ ಹೆಚ್ಚಿರುವ ವರುಣಾದಿಂದ ಅದೇ ಸಮುದಾಯದ ಹಾಲಿ ಸಚಿವ ವಿ.ಸೋಮಣ್ಣ (V.Somanna) ಅವರ ಹೆಸರನ್ನು ಬಿಜೆಪಿ ಘೋಷಿಸಿದೆ. ಆ ಮೂಲಕ ಈ ಬಾರಿ ಚುನಾವಣೆಯಲ್ಲಿ ಈ ಕ್ಷೇತ್ರ ರಾಜಕೀಯವಾಗಿ ಹೆಚ್ಚು ಗಮನ ಸೆಳೆಯಲಿದೆ.
Advertisement
ವರುಣಾ (Varuna) ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಾಮರ್ಥ್ಯ ಕುಂದಿಸಲು ಬಿಜೆಪಿ ಯೋಜನೆ ರೂಪಿಸಿತ್ತು. ಲಿಂಗಾಯತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಆ ಸಮುದಾಯದ ನಾಯಕರನ್ನೇ ಹುರಿಯಾಳಾಗಿಸಿ ಸಿದ್ದುಗೆ ಪ್ರಬಲ ಪೈಪೋಟಿ ನೀಡಲು ಪ್ಲ್ಯಾನ್ ಮಾಡಿತ್ತು. ಸಿದ್ದು ವಿರುದ್ಧ ಯಡಿಯೂರಪ್ಪ ಪುತ್ರ ವಿಜಯೇಂದ್ರನನ್ನು ಕಣ್ಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಆದರೆ ಮಗನ ರಾಜಕೀಯ ಭವಿಷ್ಯ ಹಿತದೃಷ್ಟಿಯಿಂದ ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಬಿಎಸ್‌ವೈ ವಿರೋಧ ವ್ಯಕ್ತಪಡಿಸಿದ್ದರು. ಈಗ ಸಿದ್ದು ವಿರುದ್ಧ ಸೆಣಸಲು ಸೋಮಣ್ಣ ಹುರಿಯಾಳಾಗಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಸೋಮಣ್ಣ ಕಟ್ಟಿ ಹಾಕಲು ಕಾಂಗ್ರೆಸ್ ಪ್ಲ್ಯಾನ್
Advertisement
Advertisement
ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜಾತಿ ಲೆಕ್ಕಾಚಾರದಲ್ಲಿ ವಿ.ಸೋಮಣ್ಣ ಅವರನ್ನ ಬಿಜೆಪಿ ಕಣಕ್ಕಿಳಿಸಿದೆ. ಬಿಜೆಪಿ ಪ್ಲ್ಯಾನ್ ಯಶಸ್ವಿಯಾಗುತ್ತಾ? ಸ್ವಕ್ಷೇತ್ರ ಬಿಟ್ಟು ಸೋಮಣ್ಣ ಹೊರಗಿನ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿದ್ದಾರೆ. ವರುಣಾದಲ್ಲಿ ಜಾತಿ ಮೇಲಾಟ ಸೋಮಣ್ಣ ಕೈ ಹಿಡಿಯಬಹುದೇ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.
Advertisement
ಅದೇನೇ ಇರಲಿ, ವರುಣಾ ಕ್ಷೇತ್ರದ ರಾಜಕೀಯ ಇತಿಹಾಸ ಏನು? ಇಲ್ಲಿನ ಚುನಾವಣೆ ಹಾಗೂ ಜಾತಿ ಲೆಕ್ಕಾಚಾರ ಹೇಗಿದೆ? ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಗೆದ್ದು ತವರು ಕ್ಷೇತ್ರದಲ್ಲಿ ನೆಲ ಭದ್ರಪಡಿಸಿಕೊಳ್ಳುತ್ತಾರಾ ಅಥವಾ ಕರ್ಮ ಭೂಮಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಸೋಮಣ್ಣ ಜಯ ಗಳಿಸುತ್ತಾರಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ ಹುಟ್ಟುಹಾಕಿವೆ.
ವರುಣಾ ಕ್ಷೇತ್ರದ ಇತಿಹಾಸವೇನು?
ರಾಜಕೀಯ ಇತಿಹಾಸವನ್ನು ಗಮನಿಸುವುದಾದರೆ, ವರುಣಾ ಮೊದಲು ಚಾಮುಂಡೇಶ್ವರಿ ಕ್ಷೇತ್ರದ ಭಾಗವೇ ಆಗಿತ್ತು. 2008ರಲ್ಲಿ ಚಾಮುಂಡೇಶ್ವರಿಯಿಂದ ವಿಭಜನೆಯಾಗಿ ವರುಣಾ ಕ್ಷೇತ್ರ ಸೃಷ್ಟಿಯಾಯಿತು. ಆ ಕಾಲಕ್ಕೆ ಚಾಮುಂಡೇಶ್ವರಿಯಲ್ಲಿ ಜನಪ್ರಿಯರಾಗಿದ್ದ ಸಿದ್ದರಾಮಯ್ಯಗೆ ಧರ್ಮ ಸಂಕಟ ಎದುರಾಯಿತು. ಮುಂದೆ ತನ್ನ ರಾಜಕೀಯ ಭವಿಷ್ಯವನ್ನು ಚಾಮುಂಡೇಶ್ವರಿಯಲ್ಲಿ ಕಟ್ಟಿಕೊಳ್ಳುವುದೋ ಅಥವಾ ವರುಣಾದಲ್ಲೋ ಎಂಬ ಇಕ್ಕಟ್ಟಿಗೆ ಸಿಲುಕಿದ್ದ ಸಿದ್ದರಾಮಯ್ಯ ಕೊನೆಗೆ ಆಯ್ದುಕೊಂಡಿದ್ದು ವರುಣಾವನ್ನೇ. ಇದನ್ನೂ ಓದಿ: 2 ಕಡೆ ಟಿಕೆಟ್ ಕೊಡ್ತಾರೆ ಅಂತ ಕನಸಲ್ಲೂ ಅನ್ಕೊಂಡಿರಲಿಲ್ಲ: ಸೋಮಣ್ಣ
ವರುಣಾ 4ನೇ ಚುನಾವಣೆಯಲ್ಲಿ ಯಾರು ಗೆಲ್ತಾರೆ?
ವರುಣಾ ಕ್ಷೇತ್ರ ವಿಭಜನೆಯಾದಾಗಿನಿಂದ ಇಲ್ಲಿಯವರೆಗೆ ಮೂರು ಚುನಾವಣೆ ನಡೆದಿದೆ. 3 ಚುನಾವಣೆಗಳ ಪೈಕಿ ಸಿದ್ದರಾಮಯ್ಯ 2 ಬಾರಿ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಒಂದು ಬಾರಿ ಗೆಲುವಿನ ನಗೆಬೀರಿದ್ದಾರೆ. 2023ರ ಚುನಾವಣೆಗೆ ಸಿದ್ದರಾಮಯ್ಯ ತಮ್ಮ ಪುತ್ರನ ಬದಲಾಗಿ ಮತ್ತೆ ಕಣಕ್ಕಿಳಿದಿದ್ದಾರೆ.
ವರುಣಾ ಚುನಾವಣಾ ಹಿನ್ನೋಟ
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ವರುಣಾ ವಿಧಾನಸಭಾ ಕ್ಷೇತ್ರ ರಚನೆಯಾಗಿ 2008ರಲ್ಲಿ ಮೊದಲ ಚುನಾವಣೆ ನಡೆಯಿತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಕಣಕ್ಕಿಳಿದು ಭರ್ಜರಿ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್.ರೇವಣಸಿದ್ದಯ್ಯ ವಿರುದ್ಧ 18,837 ಮತಗಳ ಅಂತರದಿಂದ ಜಯ ಗಳಿಸಿದ್ದರು.
2013ರ ವಿಧಾನಸಭಾ ಚುನಾವಣೆ ಮತ್ತೆ ಸಿದ್ದರಾಮಯ್ಯ ಅವರೇ ಸ್ಪರ್ಧಿಸುತ್ತಾರೆ. ಆ ವೇಳೆಗೆ ಬಿಜೆಪಿಯೊಂದಿಗಿನ ಭಿನ್ನಮತದಿಂದ ಪಕ್ಷ ತೊರೆದು ಹೊರಬಂದ ಯಡಿಯೂರಪ್ಪ ಕೆಜೆಪಿ ಎಂಬ ಪ್ರತ್ಯೇಕ ಪಕ್ಷ ಕಟ್ಟಿರುತ್ತಾರೆ. ಬಿಎಸ್‌ವೈ ಹೊಸ ಪಕ್ಷದಿಂದ ವರುಣಾದಲ್ಲಿ ಕಾಪು ಸಿದ್ದಲಿಂಗಸ್ವಾಮಿ ಸ್ಪರ್ಧಿಸಿರುತ್ತಾರೆ. ಸಿದ್ದರಾಮಯ್ಯ 19,641 ಮತಗಳ ಅಂತರದಿಂದ ಕಾಪು ಸಿದ್ದಲಿಂಗಸ್ವಾಮಿ ವಿರುದ್ಧ ಭರ್ಜರಿ ಜಯ ಗಳಿಸುತ್ತಾರೆ. ಈ ವಿಜಯದ ಬಳಿಕ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಾರೆ. ಇದನ್ನೂ ಓದಿ: ವರುಣಾದಲ್ಲಿ ಸೋಮಣ್ಣ Vs ಸಿದ್ದರಾಮಯ್ಯ – ಚಾಮರಾಜನಗರದಿಂದಲೂ ಟಿಕೆಟ್
2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಮತ್ತು ಬದಾಮಿಯಿಂದ ಕಣಕ್ಕಿಳಿದಿದ್ದರು. ಈ ಚುನಾವಣೆ ಮೂಲಕವೇ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದ ಯತೀಂದ್ರ ತಂದೆಗಿಂತಲೂ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ವರುಣಾದಲ್ಲಿ ಗಮನ ಸೆಳೆದಿದ್ದರು. ಈ ಚುನಾವಣೆಯಲ್ಲಿ 96,435 ಮತಗಳನ್ನು ಪಡೆದ ಯತೀಂದ್ರ, 58,616 ಮತಗಳ ಅಂತರದಿಂದ ಬಿಜೆಪಿ ಟಿ.ಬಸವರಾಜು ವಿರುದ್ಧ ಜಯಭೇರಿ ಬಾರಿಸಿದ್ದರು.
ಜಾತಿ ಲೆಕ್ಕಾಚಾರ ಏನು?
ವರುಣಾ ಕ್ಷೇತ್ರದಲ್ಲಿ ಜಾತಿವಾರು ಮತದಾರರನ್ನು ನೋಡುವುದಾದರೆ ಇಲ್ಲಿ ಸುಮಾರು 70,000 ಲಿಂಗಾಯತ ಮತದಾರರು ಇದ್ದಾರೆ. ಇವರನ್ನು ಹೊರತುಪಡಿಸಿದರೆ, ಅಂದಾಜು ಕುರುಬರು 35,000, ಪರಿಶಿಷ್ಟ ಜಾತಿಯ 43,000 ಮತದಾರರು, ಪರಿಶಿಷ್ಟ ಪಂಗಡದ 23,000, ಒಕ್ಕಲಿಗರು 12,000 ಹಾಗೂ ಇತರ ಹಿಂದುಳಿದ ವರ್ಗಗಳ ಸಮುದಾಯದವರು 12,000 ಮತದಾರರು ಇದ್ದಾರೆ. ಇದನ್ನೂ ಓದಿ: ಕನಕಪುರದಲ್ಲಿ ಮೋದಿ, ಶಾ ಆಟ ನಡೆಯೋದಿಲ್ಲ: ಡಿಕೆ ಸುರೇಶ್
ಸಿದ್ದು ತವರು ಕ್ಷೇತ್ರ ಉಳಿಸಿಕೊಳ್ತಾರಾ?
ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ 2023ರ ಚುನಾವಣೆ ಮಹತ್ವದ್ದಾಗಿದೆ. ಇದು ನನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಪುತ್ರ ಯತೀಂದ್ರ ತಂದೆಗೆ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿದ್ದಾರೆ. ಲಿಂಗಾಯತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಸಿದ್ದು ನೆಲ ಭದ್ರಪಡಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಲಿಂಗಾಯತ ಸಮುದಾಯದ ಸೋಮಣ್ಣ ಹುರಿಯಾಳಾಗಿರುವುದು ಸಿದ್ದು ನಿರಾಯಾಸದ ಗೆಲುವಿಗೆ ತೊಡರುಗಾಲು ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈವರೆಗೆ ವರುಣಾ ಕ್ಷೇತ್ರದ ಲಿಂಗಾಯತ ಮತದಾರರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನಿಲ್ಲುತ್ತಿದ್ದ ಹಿನ್ನೆಲೆಯಲ್ಲಿ ಅವರ ಗೆಲುವು ಸುಲಭವಾಗುತ್ತಾ ಬಂದಿದೆ. ಈಗ ಇಬ್ಬರ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ ಎಂಬ ಮಾತು ಒಂದು ಕಡೆಯಾದರೆ, ಲಿಂಗಾಯತ ಸಮುದಾಯ ಬಿಟ್ಟರೆ ವರುಣಾದಲ್ಲಿ ನಂತರದ ಸ್ಥಾನದಲ್ಲಿ ಕುರುಬ ಮತ್ತು ಪರಿಶಿಷ್ಟ ಜಾತಿ ಸಮುದಾಯ ಮತಗಳಿರುವುದರಿಂದ, ಈ ವರ್ಗಗಳ ಮತ ಸಿದ್ದರಾಮಯ್ಯ ಅವರಿಗೆ ಕಟ್ಟಿಟ್ಟ ಬುತ್ತಿ. ಅಲ್ಲದೇ ಹಿಂದುಳಿದ ವರ್ಗಗಳ ಮತದಾರರು ಕೂಡ ಸಿದ್ದು ಪರವಾಗಿದ್ದಾರೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಇದು ಸಿದ್ದರಾಮಯ್ಯ ಗೆಲುವಿಗೆ ವರದಾನವಾಗಬಹುದು ಎನ್ನುವ ಮಾತು ಕೂಡ ಇದೆ.
ಅದೃಷ್ಟ ಪರೀಕ್ಷೆಯಲ್ಲಿ ಗೆಲ್ತಾರಾ ಸೋಮಣ್ಣ?
ಆರಂಭದಲ್ಲಿ ವರುಣಾದಲ್ಲಿ ಸ್ಪರ್ಧೆಯ ಸುಳಿವು ಸಿಕ್ಕಾಗ ಸೋಮಣ್ಣ ಹಿಂಜರಿದಿದ್ದರು. ಲಿಂಗಾಯತ ಮತಗಳನ್ನಷ್ಟೇ ನಂಬಿಕೊಂಡು ಚುನಾವಣೆಗೆ ಧುಮುಕಿದರೆ ಗೆಲುವು ಕಷ್ಟ ಎಂಬ ಅರಿವು ಕೂಡ ಅವರಿಗಿತ್ತು. ವರುಣಾ ಸ್ಪರ್ಧಿಸಬೇಕಾದರೆ ನನ್ನ ಮೊದಲ ಆದ್ಯತೆ ಗೋವಿಂದರಾಜನಗರ ಅಥವಾ ಚಾಮರಾಜನಗರ. ಇವರೆಡು ಕ್ಷೇತ್ರಗಳ ಪೈಕಿ ಯಾವುದಾದರು ಒಂದು ಕ್ಷೇತ್ರ ಕೊಟ್ಟು ಹೆಚ್ಚುವರಿಯಾಗಿ ವರುಣಾ ಕೊಟ್ಟರೆ ಮಾತ್ರ ಸ್ಪರ್ಧಿಸುತ್ತೇನೆ ಎಂದು ಹೈಕಮಾಂಡ್‌ಗೆ ಸೋಮಣ್ಣ ಸ್ಪಷ್ಟಪಡಿಸಿದ್ದರು. ಈಗ ಚಾಮರಾಜನಗರ ಜೊತೆಗೆ ವರುಣಾ ಕ್ಷೇತ್ರವನ್ನೂ ಪಕ್ಷ ಕೊಟ್ಟಿದೆ. ಇದರೊಂದಿಗೆ ಸೋಮಣ್ಣ ಅವರ ರಿಸ್ಕ್‌ನ್ನ ಹೈಕಮಾಂಡ್ ಕಡಿಮೆ ಮಾಡಿದೆ. ಆದರೆ ಸೋಮಣ್ಣ ಅವರನ್ನು ವರುಣಾ ಮತ್ತು ಚಾಮರಾಜನಗರದಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟ ಹೈಕಮಾಂಡ್ ನಡೆ ಹಲವು ಅನುಮಾನಗಳಿಗೆ ಎಡೆಮಾಡಿದೆ. 70 ವರ್ಷ ದಾಟಿದ ಸೋಮಣ್ಣ ಅವರನ್ನು ಈಶ್ವರಪ್ಪ, ಶೆಟ್ಟರ್ ಮಾದರಿಯಲ್ಲಿ ನಿವೃತ್ತಿಗೊಳಿಸುವ ಎದೆಗಾರಿಕೆಯನ್ನು ತೋರದ ಹೈಕಮಾಂಡ್ ಜಾಣ ನಡೆ ಇಟ್ಟಿದೆ. ಈ ಮೂಲಕ ಪುತ್ರನಿಗೂ ಟಿಕೆಟ್ ಕೇಳುತ್ತಿದ್ದ ಸೋಮಣ್ಣ ಬೇಡಿಕೆಗೆ ಮನ್ನಣೆ ಕೊಡದಿರಲು ವರಿಷ್ಠರು ನಿರ್ಧರಿಸಿದ್ದಾರೆ. ವರುಣಾದಲ್ಲಿ ಸೋತು ಚಾಮರಾಜನಗರದಲ್ಲಿ ಗೆದ್ದರೆ ಸೋಮಣ್ಣ ಸೇಫ್. ಆದರೆ ಎರಡೂ ಕ್ಷೇತ್ರದಲ್ಲಿ ಸೋಮಣ್ಣಗೆ ಹಿನ್ನಡೆಯಾದರೆ ಅವರಿಗೆ ರಾಜಕೀಯವಾಗಿ ಈ ಚುನಾವಣೆ ಮಾರಕವಾಗಿ ಪರಿಣಮಿಸಲಿದೆ. ಈ ಮೂಲಕ 70 ವರ್ಷ ಮೀರಿರುವ ಸೋಮಣ್ಣ ಅವರನ್ನು ರಾಜಕೀಯವಾಗಿ ತೆರೆಗೆ ಸರಿಸುವ ತಂತ್ರಗಾರಿಕೆಯನ್ನು ಹೈಕಮಾಂಡ್ ಮಾಡಿದಂತಾಗಲಿದೆ.