ನಮ್ಮ ಸಿದ್ಧಾಂತಕ್ಕೂ ರಿಷಬ್ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ : ಸಿಎಂ ಬೊಮ್ಮಾಯಿ

Public TV
2 Min Read
Rishab and CM 1

ಕೊಲ್ಲೂರು (Kollur) ಮೂಕಾಂಬಿಕಾ (Mukambika) ದೇವಸ್ಥಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಮತ್ತು ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಭೇಟಿ ಮಾಡಿದ್ದಾರೆ. ಇದೊಂದು ಅನಿರೀಕ್ಷಿತ ಭೇಟಿ ಎಂದು ಹೇಳಲಾಗುತ್ತಿದೆಯಾದರೂ, ನಾನಾ ರೀತಿಯಲ್ಲಿ ಈ ಭೇಟಿಯನ್ನು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಸ್ವತಃ ಬೊಮ್ಮಾಯಿ ಅವರೇ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Rishab and CM

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ‘ರಿಷಬ್ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಿಕ್ಕಿದ್ದು ಆಕಸ್ಮಿಕ. ನಾನು ಬರುವ ಮೊದಲೇ ರಿಷಬ್ ಶೆಟ್ಟಿ ದೇವಸ್ಥಾನದಲ್ಲಿ ಇದ್ದರು. ಹಾಗಾಗಿ ನಾವು ಜೊತೆಗೆ ಹೋಗಿ ದೇವರಿಗೆ ಪೂಜೆಯನ್ನು ಸಲ್ಲಿಸಿದ್ದೇವೆ. ಇದು ಯಾವುದು ಪೂರ್ವ ನಿರ್ಧರಿತ ಆಗಿರಲಿಲ್ಲ’ ಎಂದಿದ್ದಾರೆ. ಇದನ್ನೂ ಓದಿ:ನಟಿ ಶ್ರುತಿ ವಿರುದ್ಧ ಹಿರೆಕೇರೂರಿನಲ್ಲಿ ದೂರು ದಾಖಲು

Rishab

ಮುಂದುವರೆದು ಮಾತನಾಡಿದ ಸಿಎಂ, ‘ನಮ್ಮ ಸಿದ್ದಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಈ ಹಿಂದೆ ಕೂಡ ರಿಷಬ್ ನಮ್ಮ ಸಿದ್ದಾಂತವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದ್ದಾರೆ. ರಿಷಬ್ ಶೆಟ್ಟಿಯ ವಿಚಾರಗಳು ಹಾಗೆ ಇದೆ. ಅದನ್ನು ಆಗಾಗ ಅವರು ಪ್ರಕಟಣೆ ಮಾಡಿದ್ದಾರೆ. ಅವರು ಕೊಲ್ಲೂರು ದೇಗುಲದ ಒಳಗೆ ಇದ್ದದ್ದು ನನಗೆ ಆಶ್ಚರ್ಯ ಆಯ್ತು. ಬಿಜೆಪಿ, ನಾಯಕತ್ವದ ಬಗ್ಗೆ ಅವರು ಒಲವಿರುವ ಮಾತುಗಳಾಡಿದವರು. ಪ್ರಚಾರಕ್ಕೆ ಬರುವ ಕುರಿತು ಈವರೆಗೆ ಯಾವುದೇ ಮಾತುಕತೆಗಳು ನಮ್ಮ ನಡುವೆ ನಡೆದಿಲ್ಲ. ಮುಂದೆ ಮೂಕಾಂಬಿಕೆ ಏನೆಂದು  ಆಶೀರ್ವಾದ ಕೊಡುತ್ತಾಳೆ ನೋಡೋಣ’ ಎಂದರು.

rishab shetty 6

ಈಗಾಗಲೇ ಬಸವರಾಜ ಬೊಮ್ಮಾಯಿ ಅವರ ಆಡಳಿತವನ್ನು ಮೆಚ್ಚಿ ಕಿಚ್ಚ ಸುದೀಪ್ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ನೇರವಾಗಿ ಬಿಜೆಪಿ (BJP) ಪರವಾಗಿ ಪ್ರಚಾರ ಮಾಡುತ್ತೇನೆ ಎನ್ನುವ ಬದಲು, ಸಿಎಂ ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಸುದೀಪ್ ತಿಳಿಸಿದ್ದಾರೆ. ಇದೀಗ ರಿಷಬ್ ಕೂಡ ಪ್ರಚಾರಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ತೇಲಿಬಂದಿದೆ.

RISHAB SHETTY

ಬಿಜೆಪಿ ಪರವಾಗಿ ರಿಷಬ್ ಅನೇಕ ಬಾರಿ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಬಂದಾಗಲೂ ರಿಷಬ್ ಅವರನ್ನು ಭೇಟಿ ಮಾಡಿದ್ದರು. ಹಾಗಾಗಿ ಉಡುಪಿ, ದಕ್ಷಿಣ ಕನ್ನಡದ 13 ಕ್ಷೇತ್ರಗಳಲ್ಲಿ ರಿಷಬ್ ಬಳಸಲು ಪ್ಲ್ಯಾನ್ ನಡೆದಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಏನೇ ಮಾಹಿತಿ ಕೇಳಿ ಬಂದರೂ, ತಾವು ರಾಜಕಾರಣಕ್ಕೆ ಬರುವುದಿಲ್ಲ ಎಂದು ಈಗಾಗಲೇ ರಿಷಬ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರು ತಮ್ಮ ಮಾತಿಗೆ ಬದ್ಧರಾಗಿ ಇರುತ್ತಾರಾ ಕಾದು ನೋಡಬೇಕು.

Share This Article