PublicTV Explainer: ಲ್ಯಾಬ್‌ನಲ್ಲಿ DNA ಇಟ್ರೆ ಸಾಕು ನಿಮ್ಗೆ ಸಿಗುತ್ತೆ ಚಿಕನ್‌, ಮಟನ್‌, ಬೀಫ್‌, ಫೋರ್ಕ್‌ ಮಾಂಸ!

Public TV
5 Min Read
01

– ಕೋಳಿ, ಕುರಿ, ಮೇಕೆ ಸಾಕಬೇಕಿಲ್ಲ; ಮಾಂಸ ಮಾರೋಕೆ ಕೊಯ್ಯುವ ಹಾಗೂ ಇಲ್ಲ – ಏನಿದು ವಿಜ್ಞಾನದ ಚಮತ್ಕಾರ?

ನೀವು ಅಂಗಡಿಯಲ್ಲಿ ಕಟ್‌ ಮಾಡಿದ ಚಿಕನ್ (Chicken), ಮಟನ್ (Mutton), ಫೋರ್ಕ್‌ (Pork), ಬೀಫ್‌ (Beef), ಸೀಫುಡ್‌ (Seafood) ಮಾಂಸವನ್ನು ಖರೀದಿಸಿ ತಂದು ಅಡುಗೆ ಮಾಡಿ ಸವಿದಿದ್ದೀರಿ. ಎಂದಾದರೂ ಪ್ರಯೋಗಾಲಯದಲ್ಲಿ ಉತ್ಪಾದಿಸುವ ಮಾಂಸವನ್ನು ತಿಂದಿದ್ದೀರಾ? ಪ್ರಯೋಗಾಲಯದಲ್ಲಿ ಮಾಂಸವೇ? ಇದು ಕೇಳುವುದಕ್ಕೇ ವಿಚಿತ್ರ ಅನಿಸುತ್ತೆ ಅಲ್ವಾ!? ಹೌದು.. ಕೇಳೋಕೆ ವಿಚಿತ್ರ ಎನಿಸಿದರೂ, ಈ ಬಗ್ಗೆ ಚರ್ಚೆಯೊಂದು ಶುರುವಾಗಿದೆ.

ಈ ಜಗತ್ತಿನಲ್ಲಿ ಮಾಂಸಾಹಾರಿಗಳ ಸಂಖ್ಯೆ ಜಾಸ್ತಿಯೇ ಇದೆ. ಕೋಳಿ, ಕುರಿ, ಮೇಕೆ, ಮೀನು, ಹಸು ಸಾಕುವುದು ಮತ್ತು ಅವುಗಳನ್ನು ಕೊಂದು ತಿನ್ನುವುದು ಸಾಮಾನ್ಯ. ಈಗಿನ ಕಾಲದಲ್ಲಿ ಇವೆಲ್ಲವನ್ನೂ ಸಾಕಿ ಬೆಳೆಸೋದು ತುಂಬಾ ಕಷ್ಟ. ಹೀಗಾಗಿಯೇ ಹೈನುಗಾರಿಕೆ ಒಂದು ಬೃಹತ್‌ ಉದ್ಯಮವಾಗಿ ಬೆಳೆದಿದೆ. ಏನೇ ಆಗಲಿ.. ಇದಕ್ಕೆ ಅಪಾರ ಬಂಡವಾಳ ಬೇಕು. ಬಂಡವಾಳ ಹೂಡಿ ಪ್ರಾಣಿಗಳನ್ನು ಸಾಕುತ್ತೇನೆಂದರೆ ಶುಚಿತ್ವ ಹಾಗೂ ಜಾಗತಿಕ ತಾಪಮಾನ ಸಂಕಷ್ಟವನ್ನೂ ಎದುರಿಸಬೇಕಾಗುತ್ತೆ. ಈ ಎಲ್ಲಾ ತಾಪತ್ರಯಗಳೇ ಬೇಡ. ಲ್ಯಾಬ್‌ನಲ್ಲೇ ಮಾಂಸ ಉತ್ಪಾದಿಸಿದ್ರೆ ಹೇಗೆ? ತಂತ್ರಜ್ಞಾನ ಮೂಲಕ ಹೀಗೆ ಮಾಡಿದ್ರೆ ಹೈನುಗಾರಿಕೆಯಿಂದ ಹಿಡಿದು ಮಾಂಸ ಉತ್ಪಾದನೆವರೆಗಿನ ಪ್ರಕ್ರಿಯೆಗೆ ಇತಿಶ್ರಿ ಹಾಡಬಹುದಲ್ಲವೇ? ಈ ದೃಷ್ಟಿಕೋನದಲ್ಲಿ ಚರ್ಚೆ ಶುರುವಾಗಿದ್ದು, ಅಳಿದು ಹೋಗಿರುವ ಉಣ್ಣೆಯ ಬೃಹತ್‌ಗಾತ್ರದ ಆನೆಗಳಿಂದ. ಇದನ್ನೂ ಓದಿ: PublicTV Explainer: ನಿತ್ಯಾನಂದನ ಕೈಲಾಸದಲ್ಲಿರಲು ಈ ರೂಲ್ಸ್ ಫಾಲೋ ಮಾಡ್ಲೇಬೇಕಂತೆ

meatball

ಅರೆ! ಈ ಆನೆಗೂ ಮನುಷ್ಯರು ಸೇವಿಸುವ ಮಾಂಸಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಹುಟ್ಟಬಹುದು. ಖಂಡಿತ ಸಂಬಂಧ ಇದೆ. ಅಂಗಡಿಗಳಲ್ಲಿ ಮಾಂಸ ಖರೀದಿಸಿ ತಂದು ಮನೆಯಲ್ಲಿ ಅಡುಗೆ ಮಾಡಿ ತಿನ್ನುತ್ತಿದ್ದವರಿಗೆ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರ ಶಾಕಿಂಗ್‌ ನ್ಯೂಸ್‌ ಕೊಟ್ಟಿದೆ. ಪ್ರಯೋಗಾಲಯದಲ್ಲೇ ಮಾಂಸವನ್ನು ಉತ್ಪಾದಿಸಿ ಕೊಡಬಹುದೇ ಎಂಬ ಬಗ್ಗೆ ಚರ್ಚೆಯೊಂದು ಶುರುವಾಗಿದೆ. ಆಸ್ಟ್ರೇಲಿಯಾದ ಸ್ಟಾರ್ಟ್‌ಅಪ್‌ ವೋವ್‌ (Australian Startup Vow) ಕಂಪನಿಯ ಹೊಸ ಅನ್ವೇಷಣೆಯೇ ಈ ಚರ್ಚೆಗೆ ಪ್ರಮುಖ ಕಾರಣವಾಗಿದೆ. ಏನದು ಅನ್ವೇಷಣೆ? ಪ್ರಯೋಗಾಲಯದಲ್ಲಿ ಮಾಂಸ ಉತ್ಪಾದನೆ ಹೇಗೆ? ಬನ್ನಿ ತಿಳಿಯೋಣ.

ಲ್ಯಾಬ್‌ನಲ್ಲಿ ಮಾಂಸದ ಚೆಂಡು!
ಆಸ್ಟ್ರೇಲಿಯನ್ ಸ್ಟಾರ್ಟ್‌ಅಪ್ ವೊವ್, ಅಳಿವಿನಂಚಿನ ಉಣ್ಣೆಯ ಬೃಹದ್ಗಜದಿಂದ (ವೂಲಿ ಮ್ಯಾಮತ್‌ – ಒಂದು ಜಾತಿಯ ಆನೆ) ಆನುವಂಶಿಕ ಅನುಕ್ರಮವನ್ನು ಬಳಸಿಕೊಂಡು ಮಾಂಸದ ಉಂಡೆಯನ್ನು (Meatball) ಮಾಡಿದೆ. ಇದು ವಾಲಿಬಾಲ್‌ಗಿಂತ ಸ್ವಲ್ಪ ಚಿಕ್ಕ ಗಾತ್ರದಲ್ಲಿದೆ. ವೂಲಿ ಮ್ಯಾಮತ್‌ (woolly mammoth) ಮಾಂಸದ ಚೆಂಡನ್ನು ಗಾಜಿನ ಬಾಕ್ಸ್‌ನಲ್ಲಿ ಸಂಗ್ರಹಿಸಿಡಲಾಗಿದ್ದು, ಆಮ್‌ಸ್ಟರ್‌ಡ್ಯಾಮ್‌ನ ವಸ್ತುಸಂಗ್ರಹಾಲಯದಲ್ಲಿ ಅನಾವರಣಗೊಳಿಸಲಾಗಿದೆ. ಇದನ್ನೂ ಓದಿ: PublicTV Explainer: ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡುವಂತಿಲ್ಲ – ಯಾಕೆ ಗೊತ್ತಾ?

woolly mammoth

ಇದು ಒಂದು-ಆಫ್ ಸೃಷ್ಟಿಯಾಗಿದ್ದರೂ, ಬಹುಶಃ ಫುಡ್-ಟೆಕ್ ಕಂಪನಿಗೆ ಪ್ರಚಾರವನ್ನು ಗಳಿಸಬಹುದು, ಸಂಸ್ಥಾಪಕ ಟಿಮ್ ನೊಕೆಸ್ಮಿತ್ ಎಪಿಗೆ ಮಾಮತ್ ಮೀಟ್‌ಬಾಲ್ ಮೂಲಕ, ಕಂಪನಿಯು ಜಾಗತಿಕ ಮಾಂಸ ಸೇವನೆಯ ಬಗ್ಗೆ ಸಂಭಾಷಣೆಯನ್ನು ಪ್ರಾರಂಭಿಸಲು ಆಶಿಸಿದೆ ಎಂದು ಹೇಳಿದರು.

ಉಣ್ಣೆಯ ಆನೆ ಮಾಂಸ ಲ್ಯಾಬ್‌ನಲ್ಲಿ ತಯಾರಾಗಿದ್ದು ಹೇಗೆ?
ಪ್ರಾಣಿಗಳ ಜೀವಕೋಶಗಳಿಂದ ಇದನ್ನು ತಯಾರಿಸಲಾಗುತ್ತದೆ. ಅದನ್ನು ಉತ್ಪಾದಿಸಲು ಪ್ರಾಣಿಗಳನ್ನು ಕೊಲ್ಲುವ ಅಗತ್ಯವಿರಲ್ಲ. ಪ್ರಾಣಿಗಳ DNA ಯನ್ನು ಬಳಸಿ ಪ್ರಯೋಗಾಲಯದಲ್ಲಿ ಮಾಂಸದ ರುಚಿ ಮತ್ತು ವಿನ್ಯಾಸದಲ್ಲೇ ಮರುಸೃಷ್ಟಿಸಲಾಗುತ್ತೆ. ಹೀಗೆ ಬೆಳೆಸಿದ ಮಾಂಸವನ್ನು ಕಲ್ಚರ್ಡ್ ಅಥವಾ ಸೆಲ್-ಆಧಾರಿತ ಮಾಂಸ ಎಂದೂ ಕರೆಯುತ್ತಾರೆ. ಇದನ್ನೂ ಓದಿ: PublicTV Explainer: ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ರೋಗ ಯಾವುದು ಗೊತ್ತಾ?

woolly mammoth meatball

ವೊವ್‌ ಕಂಪನಿಯವರು ಕ್ವೀನ್‌ಲ್ಯಾಂಡ್‌ ವಿಶ್ವವಿದ್ಯಾಲಯದ ಆಸ್ಟ್ರೇಲಿಯನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಬಯೋಇಂಜಿಯರಿಂಗ್‌ನ ಪ್ರಾಧ್ಯಾಪಕ ಅರ್ನ್ಸ್‌ ವೊಲ್ವೆಟಾಂಗ್‌ ಅವರೊಂದಿಗೆ ಈ ಹೊಸ ಅನ್ವೇಷಣೆ ಮಾಡಿದ್ದಾರೆ. ತಯಾರಾದ DNA ಅನುಕ್ರಮವನ್ನು ನಂತರ ಮಯೋಬ್ಲಾಸ್ಟ್ (ಸ್ನಾಯು ಕೋಶಗಳಿಗೆ ಭ್ರೂಣದ ಪೂರ್ವಗಾಮಿ) ಸ್ಟೆಮ್ ಸೆಲ್‌ಗಳಲ್ಲಿ ಇರಿಸಲಾಯಿತು. ಇದು ಪ್ರಯೋಗಾಲಯದ ಪರಿಸ್ಥಿತಿಗಳಲ್ಲಿ ಪುನರಾವರ್ತನೆಗೊಂಡು ಸುಮಾರು 20 ಶತಕೋಟಿ ಜೀವಕೋಶಗಳಿಗೆ ಬೆಳೆಯುತ್ತೆ. ನಂತರ ಅದನ್ನು ಕಂಪನಿಯು ಮ್ಯಾಮತ್ ಮಾಂಸದ ಚೆಂಡು ರಚಿಸಲು ಬಳಸಿತು. ‘ಈ ಪ್ರಕ್ರಿಯೆ ಸುಲಭವೂ, ವೇಗವೂ ಆಗಿತ್ತು. ನಾವು ಈ ಪ್ರಕ್ರಿಯೆಯನ್ನು ಒಂದೆರಡು ವಾರಗಳಲ್ಲಿ ಮಾಡಿದ್ದೇವೆ. ಮ್ಯಾಮತ್‌ಗೆ ಬದಲಾಗಿ ಡೋಡೋ ಹಕ್ಕಿಯ ಮಾಂಸವನ್ನು ಉತ್ಪಾದಿಸುವ ಆಲೋಚನೆ ನಮಗಿತ್ತು. ಆದರೆ ಅದಕ್ಕೆ ಬೇಕಾದ ಡಿಎನ್‌ಎ ಅನುಕ್ರಮಗಳು ಅಸ್ತಿತ್ವದಲ್ಲಿಲ್ಲ’ ಎಂದು ಪ್ರೊಫೆಸರ್ ವೊಲ್ವೆಟಾಂಗ್ ತಿಳಿಸಿದ್ದಾರೆ.

ಈ ಮಾಂಸವನ್ನು ತಿನ್ನಬಹುದೇ?
ಉಣ್ಣೆಯ ಬೃಹತ್‌ ಗಾತ್ರದ ಆನೆಯ ಮಾಂಸದ ಚೆಂಡನ್ನು ಯಾರೂ ರುಚಿ ನೋಡಿಲ್ಲ. ಅದರ ಸೃಷ್ಟಿಕರ್ತರೂ ಸಹ ಅದು ಹೇಗಿದೆ ಎಂದು ಟೇಸ್ಟ್‌ ಮಾಡಿಲ್ಲ. ಆದರೆ ಮಾಂಸ ಉತ್ಪಾದನೆಯನ್ನು ವಾಣಿಜ್ಯೀಕರಣಗೊಳಿಸುವ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ಭವಿಷ್ಯದ ಆಹಾರ ಕ್ರಮದ ಬಗ್ಗೆ ಜನರ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ. ಇದನ್ನೂ ಓದಿ: PublicTV Explainer: ಇರಾನ್‌ನಲ್ಲಿ ಹಿಜಬ್‌ ವಿರುದ್ಧದ ಹೋರಾಟದ ಹೊತ್ತಲ್ಲೇ ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷವಿಕ್ಕಿದ ದುರುಳರು – ಏನಾಗ್ತಿದೆ ಅಲ್ಲಿ?

chicken mutton

ಹವಾಮಾನ ಬದಲಾವಣೆಯಲ್ಲಿ ಮಾಂಸ ಉದ್ಯಮದ ಪಾತ್ರವೇನು?
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಜಾಗತಿಕವಾಗಿ ಮಾಂಸ ಸೇವಿಸುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. 1960 ರ ದಶಕದ ಆರಂಭದಿಂದಲೂ ಮಾಂಸಾಹಾರಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಹೀಗಾಗಿ ಜಾಗತಿಕ ಮಾಂಸ ಉದ್ಯಮವು ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ.

ಪಳೆಯುಳಿಕೆ ಇಂಧನಗಳಿಂದ ಬಿಡುಗಡೆಯಾಗುವ ಕಾರ್ಬನ್‌ ಡೈ ಆಕ್ಸೈಡ್‌ ತಾಪಮಾನ ಏರಿಕೆಯ ಪ್ರಮುಖ ಅಂಶವಾಗಿದೆ. ಇದು ಇಂಗಾಲದ ಡೈಆಕ್ಸೈಡ್ ಮಾತ್ರವಲ್ಲದೆ ಮೀಥೇನ್ ಮತ್ತು ನೈಟ್ರಸ್ ಆಕ್ಸೈಡನ್ನೂ ಒಳಗೊಂಡಿದೆ. ಸಸ್ಯ ಆಧಾರಿತ ಆಹಾರಗಳಿಗಿಂತ ಪ್ರಾಣಿ ಆಧಾರಿತ ಆಹಾರದಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯು ಹೆಚ್ಚಿದೆ. ಇದನ್ನೂ ಓದಿ: PublicTV Explainer: ಕರಗುತ್ತಿವೆ ಹಿಮಸರೋವರಗಳು – ಭಾರತ, ಪಾಕಿಸ್ತಾನದ ಜನರಿಗೆ ಕಾದಿದೆ ಪ್ರವಾಹದ ಅಪಾಯ!

Woolly Mammoth DNA

ಹಸುಗಳು ತಿನ್ನುವ ಹುಲ್ಲು, ಹಿಂಡಿ ಮತ್ತಿತರ ಆಹಾರ ಪದಾರ್ಥಗಳು ಜೀರ್ಣವಾದ ಬಳಿಕ ಅದರಿಂದ ಮಿಥೇನ್‌ ಅನಿಲ ಉತ್ಪತ್ತಿಯಾಗುತ್ತದೆ. ಹಸುಗಳ ಉಸಿರು ಮತ್ತು ತೇಗಿನ ಮೂಲಕ ಅವು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಕಾರ್ಬನ್‌ ಡಯಾಕ್ಸೈಡ್‌ನಿಂದ ಉಂಟಾಗುವ ತಾಪಮಾನಕ್ಕಿಂತ ಹೆಚ್ಚು ಅಂದರೆ, 28 ಪ್ರತಿಶತದಷ್ಟು ತಾಪಮಾನ ಹಸುಗಳು ಹೊರಸೂಸುವಿಕೆ ಮಿಥೇನ್‌ ಉಂಟಾಗುತ್ತಿದೆ.

ಲ್ಯಾಬ್‌ ಉತ್ಪಾದಿತ ಮಾಂಸದಿಂದ ಸಿಗುತ್ತಾ ಪರಿಹಾರ?
ಲ್ಯಾಬ್‌ ಉತ್ಪಾದಿತ/ಸಂಸ್ಕರಿಸಿದ ಮಾಂಸವನ್ನು ವ್ಯಾಪಕವಾಗಿ ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ಜಾಗತಿಕ ಮಾಂಸ ಉತ್ಪಾದನೆಯಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

chicken and sheep farm

ಬೀಫ್‌ (ಗೋಮಾಂಸ), ಫೋರ್ಕ್‌ (ಹಂದಿಮಾಂಸ), ಚಿಕನ್‌, ಸೀಫುಡ್‌ನ್ನು ಲ್ಯಾಂಬ್‌ನಿಂದ ಉತ್ಪಾದಿಸಿದರೆ ತಾಪಮಾನ ಏರಿಕೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಇದು ಸಾಂಪ್ರದಾಯಿಕ ಪ್ರಾಣಿ ಕೃಷಿಯಿಂದ (ಹೈನುಗಾರಿಕೆ) ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ನಮ್ಮ ಹವಾಮಾನ ಬದಲಾವಣೆಯ ಗುರಿಯನ್ನು ಸಾಧಿಸಬಹುದು. ಜೊತೆಗೆ ಮಾಂಸಕ್ಕಾಗಿ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯನ್ನು ಪೂರೈಸಬಹುದು ಎಂದು ಗುಡ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥಾಪಕ ಸೆರೆನ್ ಕೆಲ್ ತಿಳಿಸಿದ್ದಾರೆ.

ಭೂಮಿ, ನೀರು ಬೇಕಿಲ್ಲ
ಲ್ಯಾಬ್‌ನಿಂದ ಮಾಂಸ ಉತ್ಪಾದಿಸುವುದಾದರೆ, ಹೈನುಗಾರಿಕೆಗೆ ಬೇಕಾಗುವ ಭೂಮಿ, ನೀರು ಬಳಕೆಯ ಅಗತ್ಯವಿರುವುದಿಲ್ಲ. ಜಾನುವಾರ ಸಾಕಾಣಿಕೆಗೆ ಸೂಕ್ತ ಭೂಮಿ ಮತ್ತು ನೀರು ಬೇಕಾಗುತ್ತದೆ. ಜೊತೆಗೆ ನಿರ್ವಹಣೆಯೂ ಕಷ್ಟಕರವಾಗಿರುತ್ತದೆ. ಕಾಲಕಾಲಕ್ಕೆ ಜಾನುವಾರುಗಳಿಗೆ ನೀರು, ಸೊಪ್ಪು, ಹುಲ್ಲು ನೀಡಬೇಕು. ಆದರೆ ಲ್ಯಾಬ್‌ ಉತ್ಪಾದಿತ ಮಾಂಸ ಯೋಜನೆಗೆ ಇದ್ಯಾವುದರ ಅಗತ್ಯ ಬರಲ್ಲ. ಮಿಥೇನ್‌ ಹೊರಸೂಸುವಿಕೆಯೂ ಇರುವುದಿಲ್ಲ. ಇದನ್ನೂ ಓದಿ: Public TV Explainer: ಭಾರತದಲ್ಲಿ ಲ್ಯಾಬ್‌ನಲ್ಲೇ ತಯಾರಾಗುತ್ತಾ ವಜ್ರ? – ಕೃತಕ ವಜ್ರ ಹೇಗೆ ತಯಾರಿಸ್ತಾರೆ ಗೊತ್ತಾ?

ಒಟ್ಟಾರೆ ಹೇಳುವುದಾದರೆ, ವೋವ್ಸ್ ಕಂಪನಿಯ ವೂಲಿ ಮ್ಯಾಮತ್ ಮಾಂಸದ ಚೆಂಡುಗಳಂತಹ ಯೋಜನೆಗಳು ಗಮನ ಸೆಳೆದಿದ್ದು, ಲ್ಯಾಬ್‌ನಲ್ಲಿ ಮಾಂಸ ಉತ್ಪಾದಿಸುವ ಸಾಧ್ಯತೆಗಳ ಕುರಿತು ಹೆಚ್ಚು ಚರ್ಚೆಯಾಗಲು ಕಾರಣವಾಗಿದೆ.

Share This Article