ಬೆಂಗಳೂರು: ಇನ್ನೇನು ಕೆಲ ದಿನಗಳಲ್ಲೇ ರಾಜ್ಯದಲ್ಲಿ ಚುನಾವಣೆ ಬರಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಮುಂದಿನ ವಿಧಾನಸಭೆಯ ಚುನಾವಣಾ (Vidhanasabha Election) ತಯಾರಿಯಲ್ಲಿವೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಶಾಸಕರು, ಮುಖಂಡರು ಫುಲ್ ಆಕ್ಟೀವ್ ಆಗಿದ್ದಾರೆ. ಯಾವ ಕಡೆ ನೋಡಿದರೂ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಆದರೆ ಇಲ್ಲಿ ಮಾತ್ರ ರಸ್ತೆಗೆ ಟಾರ್ ತೋರಿಸಿ 2 ವರ್ಷಗಳೇ ಆಗಿದೆ. ಈ ಬಾರೀ ಯಾರಾದರೂ ವೋಟ್ ಹಾಕಿ ಅಂತಾ ಬನ್ನಿ ನೋಡೋಣ ಅಂತಾ ಜನ ರಾಜಕೀಯ ಪಕ್ಷಗಳಿಗೆ ಚಾಲೆಂಜ್ ಹಾಕಿದ್ದಾರೆ.
ಹೌದು. 50 ಅಡಿಯ ರಸ್ತೆಯನ್ನ 80 ಅಡಿಗೆ ಅಗಲೀಕರಣ ಮಾಡಲು ಬಿಬಿಎಂಪಿ (BBMP) ಇದ್ದ ರಸ್ತೆಯ ಡಂಬರ್ ಅನ್ನ ತೆಗೆದುಹಾಕಿದ್ದು ಅಂದಿನಿಂದ ನಿತ್ಯ ವಾಹನ ಸವಾರರು ಜೆಲ್ಲಿಕಲ್ಲಿನ ರಸ್ತೆಯಲ್ಲೇ ಸಂಚಾರ ಮಾಡ್ತಿದ್ದಾರೆ. ರಸ್ತೆ ಆಗಲೀಕರಣದ ಹೆಸರಿನಲ್ಲಿ ರಸ್ತೆಯನ್ನ ಹಾಳು ಮಾಡಿದ್ದಾರೆ. ಇದರಿಂದ ರಸ್ತೆಯ ಪಕ್ಕದಲ್ಲಿರೋ ವಿಶ್ವೇಶ್ವರಯ್ಯ ಲೇಔಟ್ ಜನ ವಾಹನಗಳು ಹೋದಾಗೇಲ್ಲ ಹೇಳೋ ಧೂಳಿನಿಂದ ಸಾಕಾಗಿ ಹೋಗಿದ್ದಾರೆ. ಯಾವ ನಾಯಕರು ಈ ಕಡೆ ಬರೋದಿಲ್ಲ. ಇದ್ದ ರಸ್ತೆ ಹಾಳು ಮಾಡಿದ್ದಾರೆ. ಧೂಳಿನಿಂದ ಮನೆಯಲ್ಲಿ ಇರೋಕೆ ಆಗೋಲ್ಲ ಉಸಿರಾಟದ ಸಮಸ್ಯೆ ಸೇರಿದಂತೆ ಆರೋಗ್ಯದ ಸಮಸ್ಯೆಗಳು ಕಾಡುತ್ತಿದೆ ಎಂದು ಇಲ್ಲಿನ ಜನ ಹೇಳುತ್ತಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ರಂಗೇರಿದ ಚುನಾವಣಾ ಕಣ- ವಿಪಕ್ಷಗಳ ಆರೋಪಕ್ಕೆ ಸಿದ್ದರಾಮಯ್ಯ ಟಕ್ಕರ್
ಇನ್ನೇನು ಚುನಾವಣೆ ಬಂತು, ನಾವೂ ಇಲ್ಲಿವರೆಗೆ ನಮ್ಮ ಶಾಸಕರು, ಮಾಜಿ ಶಾಸಕರು, ಕಾರ್ಪೋರೇಟರ್ ಗಳು, ಬಿಬಿಎಂಪಿ ಅಧಿಕಾರಿಗಳ ಬಳಿ ಹೋಗಿ ಹೋಗಿ ಸಾಕಾಗಿದೆ. ಈಗ ಮತ ಕೇಳಲು ಅವರು ಬರ್ತಾರಲ್ಲ ಧೈರ್ಯವಿದ್ರೇ ನಮ್ಮ ಲೇಔಟ್‍ಗೆ ಬಂದು ಮತ ಕೇಳಿ ನೋಡೋಣ ಅಂತಾ ಸ್ಥಳೀಯರು ಚಾಲೆಂಜ್ ಮಾಡ್ತಿದ್ದಾರೆ. ಇರೋ ರಸ್ತೆಯನ್ನೇ ಸರಿ ಮಾಡಿಸದೇ ಇರೋರು ಮುಂದೆ ಗೆದ್ದು ಯಾವ ಅಭಿವೃದ್ಧಿ ಮಾಡ್ತಾರೆ. ರಸ್ತೆ ಸರಿ ಮಾಡಿಸದೇ ಇದ್ರೇ ನಾವ್ಯಾರು ವೋಟ್ ಹಾಕಲ್ಲ ಅಂತಾ ಆಕ್ರೋಶಗೊಂಡಿದ್ದಾರೆ.