ಮಂಗಳೂರು: ಕನ್ನಡ ಸಾರಸ್ವತ ಲೋಕದ (Kannada Literature) ಹಿರಿಯ ಸಾಹಿತಿ, ಪ್ರಗತಿಪರ ಚಿಂತಕಿ ಸಾರಾ ಅಬೂಬಕ್ಕರ್ (86) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಂಗಳೂರಿನ ಮನೆಯಲ್ಲೇ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ರಾತ್ರಿ 8 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಾಲ್ವರು ಪುತ್ರರು ಸೇರಿದಂತೆ ಅಪಾರ ಸಾಹಿತ್ಯ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಮಹಿಳಾ ಸಂವೇದನೆಯ ಪ್ರಖರ ಬರಹಗಳು ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿದ್ದ ಸಾರಾ ಅಬೂಬಕ್ಕರ್ (Sara Abubakar) ಕಥೆ, ಕಾದಂಬರಿ, ನಾಟಕ ಸೇರಿದಂತೆ ಹತ್ತು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಇವರ ಬರಹಗಳು ಶೈಕ್ಷಣಿಕ ಪಠ್ಯಗಳೂ ಆಗಿವೆ. ಅಲ್ಲದೇ, ಅನೇಕ ಸಿನಿಮಾಗಳಾಗಿ ಬೆಳ್ಳಿ ಪರದೆಯ ಮೇಲೆ ಉಳಿದುಕೊಂಡಿವೆ. ಅದರಲ್ಲೂ ಇವರ ಚಂದ್ರಗಿರಿ ತೀರದಲ್ಲಿ ಕಾದಂಬರಿ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಸಹನಾ, ವಜ್ರಗಳು, ಸುಳಿಯಲಿ ಸಿಕ್ಕವರು, ಇಳಿಜಾರು, ಚಪ್ಪಲಿಗಳು, ಖೆಡ್ಡ, ಗಗನ ಸಖಿ ಇವರ ಮಹತ್ವದ ಕೃತಿಗಳು.
ಸಾರಾ ಅಬೂಬಕ್ಕರ್ ಹುಟ್ಟಿದ್ದು 30 ಜೂನ್ 1936ರ ಕಾಸರಗೋಡಿನ ಚಂದ್ರಗಿರಿಯಲ್ಲಿ. ತಂದೆ ವಕೀಲರು. ಅವರು ನ್ಯಾಯದ ಪರವಾಗಿ ಹೋರಾಡುತ್ತಿದ್ದ ರೀತಿಯೇ ಸಾರಾ ಅವರನ್ನು ಪ್ರೇರೇಪಿಸಿತ್ತು. ಹಾಗಾಗಿ ಅನೇಕ ಹೋರಾಟಗಳಲ್ಲಿ ಅವರು ಭಾಗಿಯಾಗಿದ್ದರು. ಸಣ್ಣವಯಸ್ಸಿನಲ್ಲೇ ಬರೆಯುವುದಕ್ಕೆ ಶುರು ಮಾಡಿದವರು. ಈವರೆಗೂ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅದರಲ್ಲಿ ಕಾದಂಬರಿಗಳ ಸಂಖ್ಯೆಯೇ ದೊಡ್ಡದಿದೆ. ಅದರಲ್ಲೂ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ವಿಚಾರದಲ್ಲಿ ಸೌದಿಯ ‘ವಹಾಬಿಸಂ’ ವಿರುದ್ಧ ಮಾತನಾಡಿ, ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದರು.
ಸಾರಾ ಅಬೂಬಕ್ಕರ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಸತ್ತಿಮಬ್ಬೆ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ವಜ್ರಗಳು, ಅಮ್ಮಚ್ಚಿ ಎಂಬ ನೆನಪು ಸೇರಿದಂತೆ ಹಲವು ಕೃತಿಗಳು ಸಿನಿಮಾವಾಗಿವೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k