ವಿಜಯಪುರ: ನಡೆದಾಡುವ ದೇವರು ಸಿದ್ದೇಶ್ವರ ಶ್ರೀ (Siddeshwara Sri) ಗಳು ಲಿಂಗೈಕ್ಯ ಹಿನ್ನೆಲೆಯಲ್ಲಿ ಭಕ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಂತೆಯೇ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯಕ್ತಿಯೊಬ್ಬರು ತಮ್ಮ ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ಬಂದಿದ್ದಾರೆ. ಈ ಮೂಲಕ ವೃದ್ಧೆಗೆ ಶ್ರೀಗಳ ಅಂತಿಮ ದರ್ಶನ ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ.
ಶ್ರೀಗಳ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬರುತ್ತಿದೆ. ವಿಜಯಪುರ (Vijayapura) ದ ನಾಗಠಾಣ ಗ್ರಾಮದ 85 ವರ್ಷದ ಓಂಶಾಂತಿ ಶ್ರೀಗಳ ಅಂತಿಮ ದರ್ಶನ ಪಡೆಯಲು ಪರದಾಟ ನಡೆಸುತ್ತಿದ್ದರು. ಬಬಲೇಶ್ವರ ಗ್ರಾಮದ ಶಿವಾನಂದ ಅವರು ಅಜ್ಜಿಯ ಪರದಾಟ ನೋಡಿ ಭುಜದ ಮೇಲೆ ಹೊತ್ತು ತಂದಿದ್ದಾರೆ. ಇದನ್ನೂ ಓದಿ: ನಮ್ಮನೆಯಲ್ಲಿ ಕುರಾನ್ ಜೊತೆಗೆ ಶ್ರೀಗಳ ಆಶೀರ್ವಚನ ಕೇಳುತ್ತಿದ್ದೆವು: ಮುಸ್ಲಿಂ ಭಕ್ತರು
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ ವೈದ್ಯರ ತಂಡ ಚಿಕಿತ್ಸೆಯಲ್ಲಿ ನಿರತವಾಗಿತ್ತು. ಆಶ್ರಮದ ಕೊಠಡಿಯಲ್ಲೇ ಚಿಕಿತ್ಸೆ ಮುಂದುವರಿದಿತ್ತು. ಜಿಲ್ಲಾಧಿಕಾರಿ ಡಾ. ವಿಜಯ ಮಾಂತೇಶ ದಾನಮನ್ನವರ, ಎಸ್ಪಿ ಎಚ್. ಡಿ.ಆನಂದ್ ಕುಮಾರ್ ಹಾಗೂ ಹಲವು ಮಠಾಧೀಶರು ಆಶ್ರಮದ ಆವರಣದಲ್ಲಿ ಬೀಡು ಬಿಟ್ಟಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸೋಮವಾರ ಸಂಜೆ 6:05ಕ್ಕೆ ಸ್ವಾಮೀಜಿ ಲಿಂಗೈಕ್ಯರಾದರು.
ಸದ್ಯ ಸೈನಿಕ ಶಾಲೆ (Sainika School) ಯಲ್ಲಿ ಶ್ರೀಗಳಿಗೆ ತ್ರಿವರ್ಣ ಧ್ವಜ ಹೊದಿಸಿ, ಗಾಜಿನ ಮಂಟಪದಲ್ಲಿ ಪಾರ್ಥೀವ ಶರೀರವನ್ನಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಗಳ ಅಂತಿಮ ದರ್ಶನಕ್ಕೆ ಸೈನಿಕ ಶಾಲೆಯತ್ತ ನಸುಕಿನ ಜಾವದಲ್ಲೇ ಸಹಸ್ರಾರು ಭಕ್ತರು ಆಗಮಿಸಿದ್ದಾರೆ. ಭಕ್ತರಿಗಾಗಿ ವಿಜಯಪುರ ಬಸ್ ನಿಲ್ದಾಣದಿಂದ ಸೈನಿಕ ಶಾಲೆಗೆ 25 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಶ್ರೀಗಳು ವಿಲ್‍ನಲ್ಲಿ ಬರೆದಿಟ್ಟಿರುವಂತೆ ಅಂತ್ಯಸಂಸ್ಕಾರ ಮಾಡಲಾಗುವುದು: ಯತ್ನಾಳ್
ಸುಮಾರು 6 ಲಕ್ಷ ಭಕ್ತರಿಗೆ ಪ್ರಸಾದ, ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯೇ 30 ಸಾವಿರಕ್ಕೂ ಹೆಚ್ಚು ಭಕ್ತರು ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ರಾಜ್ಯದ ಪ್ರಮುಖ ಮಠಗಳ ಮಠಾಧೀಶರು, ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಸಹ ಭಾಗವಹಿಸಿದ್ದಾರೆ.